ಮೂರಲ್ಲ ಈ ಬಾರಿ ಐದೂವರೆ ತಿಂಗಳು ನಡೆಯಲಿದೆ ಬಿಗ್ ಬಾಸ್, ಯಾವಾಗ ಶುರು ? ಸ್ಫರ್ಧಿಗಳ ಸಂಖ್ಯೆ ಎಷ್ಟು ?
ಬಿಗ್ ಬಾಸ್ ಜನಪ್ರಿಯವಾದ ಕಾರ್ಯಕ್ರಮ. ಹಲವರು ಈ ಕಾರ್ಯಕ್ರಮವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿಯಲ್ಲಿ ಈ ಕಾರ್ಯಕ್ರಮಕ್ಕೆ ಅದ್ರದ್ದೇ ಆದ ಡಿಮ್ಯಾಂಡ್ ಇದೆ. ಇನ್ನು, ಹಿಂದಿಯಲ್ಲಿ ಬಿಗ್ ಬಾಸ್‌ನ 18 ಸೀಸನ್ ಪೂರ್ಣಗೊಂಡಿವೆ. ಈ 18ರಲ್ಲಿ 14 ಸೀಸನ್‌ನ ಸಲ್ಮಾನ್ ಖಾನ್ ನಡೆಸಿಕೊಂಡು ಬಂದಿದ್ದಾರೆ.
ಕನ್ನಡದಲ್ಲಿ ಈ ಕೆಲಸವನ್ನು ಸುದೀಪ್ ಕಳೆದ ಹನ್ನೊಂದು ವರ್ಷಗಳಿಂದ ಮಾಡಿದ್ದಾರೆ. ತೆಲುಗಿನಲ್ಲಿ ನಾಗಾರ್ಜುನ, ಮಲಯಾಳಂನಲ್ಲಿ ಮೋಹನ್ ಲಾಲ್ ಈ ಶೋದ ಉಸ್ತುವಾರಿ ವಹಿಸಿಕೊಂಡಿದ್ದರೆ ತಮಿಳಿನಲ್ಲಿ ಕಳೆದ ವರ್ಷದಿಂದ ವಿಜಯ್ ಸೇತು ಪತಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಮರಾಠಿಯಲ್ಲಿ ರಿತೇಶ್ ದೇಶಮುಖ್ ಈ ಕೆಲಸ ಮಾಡ್ತಿದ್ದಾರೆ.

ಇಂಥಾ ಬಿಗ್ ಬಾಸ್ ಕಾರ್ಯಕ್ರಮ ಸಾಮಾನ್ಯವಾಗಿ ಇಲ್ಲಿಯವರೆಗೆ ಮೂರು ತಿಂಗಳು ನಡೆಯುತ್ತಿತ್ತು. 15 ರಿಂದ 20 ಸ್ಫರ್ಧಿಗಳಿಗೆ ವೇದಿಕೆಯನ್ನು ಕಲ್ಪಿಸುತ್ತಿತ್ತು. ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಕಾರ್ಯಕ್ರಮ ಶುರುವಾಗುತ್ತಿತ್ತು. ಆದರೆ ಈಗ ಈ ಕಾರ್ಯಕ್ರಮದಲ್ಲಿ ಭಾರೀ ಬದಲಾವಣೆಯಾಗಲಿದೆ. ಮೂರಲ್ಲ ಬರೋಬ್ಬರಿ ಐದೂವರೆ ತಿಂಗಳು ಬಿಗ್ ಬಾಸ್ ಕಾರ್ಯಕ್ರಮ ಕಣ್ತುಂಬಿಕೊಳ್ಳುವ ಸೌಭಾಗ್ಯ ಪ್ರೇಕ್ಷಕರಿಗೆ ಸಿಗಲಿದೆ.
ಹೌದು, 'ಪಿಂಕ್‌ವಿಲ್ಲಾ' ವರದಿ ಮಾಡಿರುವಂತೆ ಹಿಂದಿಯಲ್ಲಿ ಈ ಬಾರಿ ಬಿಗ್ ಬಾಸ್ ಐದೂವರೆ ತಿಂಗಳು ನಡೆಯಲಿದೆ. ಈ ಮೂಲಕ ಕಿರುತೆರೆಯ ಇತಿಹಾಸದಲ್ಲಿ ಹೊಸದೊಂದು ಕ್ರಾಂತಿಯನ್ನು ಮಾಡಲು ಆಯೋಜಕರು ಮುಂದಾಗಿದ್ದಾರೆ. ಇನ್ನು, ಕಳೆದ ಕೆಲ ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮದ ಓಟಿಟಿ ಆವೃತ್ತಿ ಪ್ರಸಾರವಾಗುತ್ತಿತ್ತು.
ಆದರೆ ಈ ವರ್ಷ ಬಿಗ್ ಬಾಸ್ ಓಟಿಟಿಯನ್ನು ಕ್ಯಾನ್ಸಲ್ ಮಾಡಲಾಗಿದ್ದು ಕಿರುತೆರೆಯಲ್ಲಿಯೇ ಐದೂವರೆ ತಿಂಗಳು ಮನರಂಜನೆಯ ರಸದೌತಣ ಬಡಿಸಲು ಬಿಗ್ ಬಾಸ್ ಬಳಗ ಸಿದ್ದವಾಗಿದೆ.
ಇನ್ನು ಐದೂವರೆ ತಿಂಗಳು ಬಿಗ್ ಬಾಸ್ ಕಾರ್ಯಕ್ರಮವನ್ನು 15-20 ಸ್ಫರ್ಧಿಗಳ ಜೊತೆ ಮುನ್ನಡೆಸುವುದು ಕಷ್ಟ. ಈ ಕಾರಣಕ್ಕೆ ಈ ಬಾರಿ ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಫರ್ಧಿಗಳ ಸಂಖ್ಯೆ ಹೆಚ್ಚಿರಲಿದೆ ಎಂದು ಕೂಡ ಪಿಂಕ್ ವಿಲ್ಲಾ ವರದಿ ಮಾಡಿದೆ. ಲೆಕ್ಕಾಚಾರದ ಪ್ರಕಾರ ಈ ಬಾರಿ ನಾಲ್ಕು ಡಜನ್ ಸ್ಫರ್ಧಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಕೂಡ ಹಲವರು ಪ್ರವೇಶಿಸಲಿದ್ದಾರೆ. ಹಳೆಯ ಸ್ಫರ್ಧಿಗಳಿಗೆ ಕೂಡ ಈ ಬಾರಿ ಮತ್ತೆ ಬಿಗ್ ಬಾಸ್ ಕರೆದರೂ ಕರೆಯಬಹುದು.
ಈ ಮೆಗಾ ಮ್ಯಾರಥಾನ್ ಬಿಗ್ ಬಾಸ್‌ನ ಎಂದಿನಂತೆ ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ. ಇನ್ನು ಈ ಬಾರಿ ಸೆಪ್ಟೆಂಬರ್ - ಅಕ್ಟೋಬರ್‌ನಲ್ಲಿ ಅಲ್ಲ ಬದಲಿಗೆ ಜುಲೈ 30 2025ರಿಂದ ಕಾರ್ಯಕ್ರಮ ಶುರುವಾಗಲಿದ್ದು ಜನವರಿ 2026ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಪಿಂಕ್ ವಿಲ್ಲಾ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಜೂನ್ ಅಂತ್ಯಕ್ಕೆ ಸಲ್ಮಾನ್ ಖಾನ್ ಬಿಗ್ ಬಾಸ್ 19ರ ಪ್ರೋಮೋ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಬೇರೆ ಭಾಷೆಗಳ ವಿಚಾರಕ್ಕೆ ಬಂದರೆ ಸದ್ಯ ಕನ್ನಡ ಸೇರಿ ಉಳಿದ ಭಾಷೆಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮೂರು ತಿಂಗಳು ಮಾತ್ರ ನಡೆಯಲಿದೆ. ಹಿಂದಿಯಲ್ಲಿ ಈ ಐದೂವರೆ ತಿಂಗಳ ಕಾರ್ಯಕ್ರಮ ಯಶಸ್ವಿಯಾದರೆ ಮುಂಬರುವ ದಿನಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಬಿಗ್ ಬಾಸ್‌ನ ಅವಧಿ ಹೆಚ್ಚು ಮಾಡುವ ಆಲೋಚನೆ ಆಯೋಜಕರಿಗಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಐದೂವರೆ ತಿಂಗಳು ಬಿಗ್ ಬಾಸ್ ಕಾರ್ಯಕ್ರಮ ನಡೆಯಲಿದೆ ಎನ್ನುವ ಸುದ್ದಿ ಕೇಳಿ ಹಿಂದಿ ಬಿಗ್ ಬಾಸ್ ಪ್ರಿಯರು ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಮಾಡುತ್ತಿದ್ದಾರೆ. ಈ ಬಾರಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸ್ಫರ್ಧಿಗಳು ಯಾರು ಎನ್ನುವ ಕುತೂಹಲ ಕೂಡ ಈಗ ಅನೇಕರನ್ನು ಕಾಡುತ್ತಿದೆ.


Click it and Unblock the Notifications











