ಟಿವಿ ನಟಿಯ ಅನುಮಾನಾಸ್ಪದ ಸಾವು, ಬಾಯ್‌ಫ್ರೆಂಡ್ ಮೇಲೆ ಗುಮಾನಿ
ಟಿವಿ ನಟಿಯರ ಸರಣಿ ಸಾವು ಮುಂದುವರೆದಿದೆ, ಕೆಲವೇ ದಿನಗಳಲ್ಲಿ ನಾಲ್ಕು ಬೆಂಗಾಳಿ ನಟಿಯರು ನಿಧನ ಹೊಂದಿದ ಬಳಿಕ ಇದೀಗ ಒಡಿಸ್ಸಾದ ಟಿವಿ ನಟಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಒಡಿಯಾ ಭಾಷೆಯ ಟಿವಿ ನಟಿ ರಶ್ಮಿರೇಖಾ ಓಜಾ ಭುವನೇಶ್ವರದ ನಯಪಾಲಿ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ನಟಿ ರಶ್ಮಿರೇಖಾ ಅದೇ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರಶ್ಮಿರೇಖಾ, ಸಂತೋಶ್ ಪಾತ್ರಾ ಎಂಬುವರೊಟ್ಟಿಗೆ ಲಿವಿನ್ ರಿಲೇಷನ್‌ನಲ್ಲಿದ್ದರು. ಇಬ್ಬರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ರಶ್ಮಿರೇಖಾರ ಪೋಷಕರು, ಮಗಳ ಸಾವಿಗೆ ಸಂತೋಶ್ ಕಾರಣ ಎಂದು ಆರೋಪಿಸಿದ್ದು ದೂರು ಸಹ ನೀಡಿದ್ದಾರೆ.

ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಶ್ಮಿರೇಖಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಾಡಿಸಿದ್ದು, ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ. ನಟಿ ಬರೆದಿರುವುದು ಎನ್ನಲಾದ ಸೂಸೈಡ್ ನೋಟ್ ಪೊಲೀಸರಿಗೆ ದೊರಕಿದ್ದು, 'ನನ್ನ ಸಾವಿಗೆ ನಾನೇ ಕಾರಣ, ಬೇರಾರೂ ಅಲ್ಲ' ಎಂದು ಅದರಲ್ಲಿ ಬರೆಯಲಾಗಿದೆ.
ಆದರೆ ಮಾಧ್ಯಮಗಳ ಬಳಿ ಮಾತನಾಡಿರುವ ನಟಿ ರಶ್ಮಿರೇಖಾ ತಂದೆ ''ಶನಿವಾರ ನಾವು ಅವಳಿಗೆ ಹಲವು ಬಾರಿ ಕರೆ ಮಾಡಿದೆವು ಆದರೆ ಆಕೆ ನಮ್ಮ ಕರೆಗಳಿಗೆ ಉತ್ತರಿಸಲಿಲ್ಲ. ಆ ನಂತರ ಸಂತೋಶ್, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ನಮಗೆ ತಿಳಿಸಿದ. ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು, ಸಂತೋಶ್ ಹಾಗೂ ರಶ್ಮಿರೇಖಾ ಗಂಡ ಹೆಂಡತಿಯಂತೆ ಒಟ್ಟಿಗೆ ಇದ್ದರು ಎಂದು. ಅವರಿಬ್ಬರು ಒಟ್ಟಿಗೆ ಇರುವುದು ನಮಗೆ ಗೊತ್ತಿರಲಿಲ್ಲ. ಆತನೇ ನನ್ನ ಮಗಳ ಸಾವಿಗೆ ಕಾರಣನಾಗಿದ್ದಾನೆ'' ಎಂದು ಆರೋಪಿಸಿದ್ದಾರೆ.
ಬೆಂಗಾಲಿ ಟಿವಿ ಹಾಗೂ ಮಾಡೆಲ್ ಜಗತ್ತಿನ ನಾಲ್ಕು ಮಂದಿ ಯುವತಿಯರು ಕಳೆದ ತಿಂಗಳು ಕೇವಲ ಎರಡು ವಾರದ ಅಂತರದಲ್ಲಿ ಸಾವನ್ನಪ್ಪಿದ್ದರು. ಮೇ ತಿಂಗಳಲ್ಲಿ ಮೊದಲಿಗೆ ಬೆಂಗಾಲಿ ಟಿವಿ ಲೋಕದಲ್ಲಿ ಚಿರಪರಿಚಿತ ನಟಿಯಾಗಿದ್ದ ಪಲ್ಲವಿ ಡೇ ಸಾವನ್ನಪ್ಪಿದರು. ಅದಾದ ಕೆಲವು ದಿನಗಳ ಬಳಿಕ ಜನಪ್ರಿಯ ಮಾಡೆಲ್ ಬಿದಿಶಾ ಡಿ ಮಜುಂಧಾರ್ ಸಾವನ್ನಪ್ಪಿದರು. ಮೇ 28 ರಂದು ಬಂಗಾಳದ ಮತ್ತೊಬ್ಬ ಪ್ರಖ್ಯಾತ ಮಾಡೆಲ್ ಮಂಜುಶಾ ನಿಯೋಗಿ ಸಾವನ್ನಪ್ಪಿದ್ದಾರೆ. ಕೋಲ್ಕತ್ತದ ಪುತೌಲಿ ಏರಿಯಾದಲ್ಲಿನ ಅವರ ನಿವಾಸದಲ್ಲಿ ಮಂಜುಶಾ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಿದಿಶಾ ಡಿ ಮಜುಂಧಾರ್ ಸಾವನ್ನಪ್ಪಿದ ಎರಡೇ ದಿನದ ಅಂತರದಲ್ಲಿ ಮಂಜುಶಾ ನಿಯೋಗಿ ಸಾವನ್ನಪ್ಪಿದರು. ಅದಾದ ಬಳಿಕ ಬೆಂಗಾಳಿ ಮಾಡೆಲ್ ಸರಸ್ವತಿ ದಾಸ್ ಕೊಲ್ಕತ್ತದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದರು. ಕೊಲ್ಕತ್ತದ ಬೇಡಿಯಾದಂಗ ಎಂಬಲ್ಲಿ ವಾಸವಿದ್ದ ಸರಸ್ವತಿ ದಾಸ್ ಮೇ 29 ರಂದು ತಮ್ಮದೇ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು. ನಟಿಯರ ಈ ಸರಣಿ ಸಾವು ಬೆಂಗಾಲಿ ಟಿವಿ ಹಾಗೂ ಸಿನಿಮಾ ಉದ್ಯಮದಲ್ಲಿ ಆತಂಕಕ್ಕೆ ಕಾರಣವಾಗಿತ್ತು.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]


Click it and Unblock the Notifications











