Neetha Ashok: ಕಿರುತೆರೆಗೆ ಮರಳಿದ 'ವಿಕ್ರಾಂತ್ ರೋಣ' ಬೆಡಗಿ
'ವಿಕ್ರಾಂತ್ ರೋಣ' ಚಿತ್ರದ ನಾಯಕಿ ನೀತಾ ಅಶೋಕ್. ಈಕೆ ಕನ್ನಡ ಕಿರುತೆರೆಯಲ್ಲಿ ಮಿಂಚಿ ಮರೆಯಾಗಿದ್ದರು. 'ವಿಕ್ರಾಂತ್ ರೋಣ' ಚಿತ್ರದಲ್ಲಿ ಅಪರ್ಣ ಬಲ್ಲಾಳ್ ಎಂಬ ಪಾತ್ರ ನಿರ್ವಹಿಸಿದ್ದು, ನಿರೂಪ್ ಭಂಡಾರಿಗೆ ಜೋಡಿಯಾಗಿ ನಟಿಸಿದ್ದರು.
ಕಿರುತೆರೆಯಿಂದ ನೇರವಾಗಿ ಸ್ಟಾರ್ ನಟನ ಜೊತೆಗೆ ತೆರೆ ಹಂಚಿಕೊಂಡ ನಟಿ. ಈ ಹಿಂದೆ ಕಿರುತೆರೆಯಲ್ಲಿ ಮೂಡಿ ಬಂದ 'ಯಶೋಧೆ', 'ನಾ ನಿನ್ನ ಬಿಡಲಾರೆ', 'ನೀಲಾಂಬರಿ' ಧಾರಾವಾಹಿಗಳಲ್ಲಿ ನೀತಾ ನಟಿಸಿದ್ದರು.
ಹಿಂದಿಯ 'ಆಶಾಯೇ' ಎಂಬ ಸರಣಿಯಲ್ಲೂ ನೀತಾ ಕಾಣಿಸಿಕೊಂಡಿದ್ದರು. 'ಕಿನ್ನರಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 'ಜಬರ್ದಸ್ತ್ ಶಂಕರ' ಎನ್ನುವ ತುಳು ಸಿನಿಮಾದಲ್ಲೂ ಮಿಂಚಿದ್ದರು.

ನೀತಾ ಅಶೋಕ್ ವೈಯಕ್ತಿಕ ಬದುಕು
ಈಕೆ ಹುಟ್ಟಿದ್ದು ಉಡುಪಿ ಹಾಗೂ ಕುಂದಾಪುರದ ಮಧ್ಯೆ ಇರುವ ಕೋಟಾ ಎಂಬ ಹಳ್ಳಿಯಲ್ಲಿ. ಇವರ ತಂದೆ ಅಶೋಕ್ ಬ್ಯಾಂಕ್ ಉದ್ಯೋಗಿ ಹಾಗೂ ತಾಯಿ ಗೃಹಿಣಿ. ನೀತಾ ಅವರಿಗೆ ಒಬ್ಬ ಸಹೋದರನಿದ್ದು, ಇವರು ಓದಿ ಬೆಳೆದಿದ್ದೆಲ್ಲಾ ಉಡುಪಿ, ಮಂಗಳೂರು, ದೆಹಲಿ ಹಾಗೂ ಬೆಂಗಳೂರಿನಲ್ಲಿ. ಎಂ.ಬಿ.ಎ ಓದಿದ ಬಳಿಕ ಕಂಪನಿಯಲ್ಲಿ ನೀತಾ ಕೆಲಸಕ್ಕೆ ಸೇರಿದ್ದರು. ಫೇಸ್‌ಬುಕ್ ಮುಖಾಂತರ ನಟನೆಯ ಅವಕಾಶ ದೊರೆಯಿತು. 'ಯಶೋದೆ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು.
ಬ್ರೇಕ್ ಸಿಕ್ಕಾಗಲೇ ಮದುವೆಯಾದ ಬೆಡಗಿ
ಸದಾ ಕ್ರಿಯಾತ್ಮಕವಾಗಿ ಚಿಂತಿಸುವ ನೀತಾ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಬಿಡುವಿನ ವೇಳೆಯಲ್ಲಿ ನೀತಾ ಅವರು ಪೇಂಟಿಂಗ್ ಮಾಡುತ್ತಾರಂತೆ. ಇನ್ನು 'ವಿಕ್ರಾಂತ್ ರೋಣ' ಚಿತ್ರದ ಬಳಿಕ ನೀತಾ ಅವರು ನಿಶ್ಚಿತಾರ್ಥ ಮಾಡಿಕೊಂಡು ಶಾಕ್ ಕೊಟ್ಟಿದ್ದರು. ಕಿರುತೆರೆ ಬಳಿಕ ಸಿನಿಮಾದಲ್ಲೂ ದೊಡ್ಡ ಬ್ರೇಕ್ ಸಿಕ್ಕಿತ್ತು. ಇನ್ನೇನು ಹೆಚ್ಚೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನುವಾಗಲೇ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದ್ದರು. ಇದೇ ವರ್ಷ ಜುಲೈ ತಿಂಗಳಿನಲ್ಲಿ ಮದುವೆಯಾದರು. ಇವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಕಾಲೇಜ್ ದಿನಗಳಲ್ಲೇ ಗೆಳೆಯ ಸತೀಶ್ ಮೆಸ್ತಾ ಅವರನ್ನು ಪ್ರೀತಿಸುತ್ತಿದ್ದರು. ಮನೆಯಲ್ಲಿ ಒಪ್ಪಿಸಿ ಮದುವೆಯಾದರು.

ಮತ್ತೆ ಕಿರುತೆರೆಗೆ ಎಂಟ್ರಿಕೊಟ್ಟ ನೀತಾ
ಮದುವೆಯಾಗಿ ಎರಡೇ ತಿಂಗಳು ಕಳೆದಿದ್ದು, ಅದಾಗಲೇ ನೀತಾ ಅಶೋಕ್ ಮತ್ತೆ ನಟನೆಗೆ ಮರಳಿದ್ದಾರೆ. ಕಲರ್ಸ್ ಕನ್ನಡದ ಧಾರಾವಾಹಿಯೊಂದರಲ್ಲಿ ನೀತಾ ಕಾಣಿಸಿಕೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನೀತಾ ಅವರು ಕಾಣಿಸಿಕೊಂಡಿದ್ದಾರೆ. ತಾರಿಣಿಯ ಗೆಳತಿ 'ಯಶೋದೆ' ಪಾತ್ರದ ಮೂಲಕ ನೀತಾ ಎಂಟ್ರಿ ಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ನಾಯಕ ಸಿದ್ಧಾಂತ್ ಮತ್ತು ತಾರಿಣಿ ಬದುಕಲ್ಲಿ ಸೈಲೆಂಟ್ ಆಗಿ ಪ್ರಾಚಿ ಎಂಟ್ರಿ ಕೊಟ್ಟಿದ್ದಾಳೆ. ಈಗ ಪ್ರಾಚಿಯನ್ನು ಸಿದ್ಧಾಂತ್‌ನಿಂದ ಯಶೋದೆ ದೂರ ಮಾಡುತ್ತಾಳಾ..? ಸ್ನೇಹಿತೆ ತಾರಿಣಿ ಸಂಸಾರವನ್ನು ಸರಿ ಮಾಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.
ಧಾರಾವಾಹಿಯಲ್ಲಿ ನೋಡಿ ಖುಷಿ ಪಟ್ಟ ಅಭಿಮಾನಿಗಳು
ಕಿರುತೆರೆಯಲ್ಲಿ ನಟಿಸಿದ ಬಹಳ ವರ್ಷಗಳಾದ ಬಳಿಕ ಇದ್ದಕ್ಕಿದ್ದ ಹಾಗೆಯೇ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡು ನೀತಾ ಅಶೋಕ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಸಿನಿಮಾ ಕ್ಷೇತ್ರದಲ್ಲಿ ಹಲವು ಪ್ರಾಜೆಕ್ಟ್‌ಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ ಎಂದು ನಿರೀಕ್ಷಿಸುವಾಗಲೇ ಮದುವೆಯಾಗಿ ಬಣ್ಣದ ಲೋಕಕ್ಕೆ ಬಾಯ್ ಬಾಯ್ ಹೇಳಿದರು ಎಂದು ಭಾವಿಸಲಾಗಿತ್ತು. ಆದರೆ, ಈಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ನೀತಾ ಅಭಿಮಾನಿಗಳ ಊಹೆ ಸುಳ್ಳಾಗಿಸಿ ನಟನೆ ಮುಂದುವರೆಸಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ.


Click it and Unblock the Notifications











