Actress Amrutha Nayak: 'ಒಂದು ಮೊಟ್ಟೆಯ ಕಥೆ' ನಟಿಯೀಗ 'ಅಮೃತಧಾರೆ'ಯ ಅಪೇಕ್ಷಾ.. ಜರ್ನಿ ಶುರುವಾಗಿದ್ದೇಗೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಅಮೃತಧಾರೆ'ಯಲ್ಲಿ ನಾಯಕಿ ಭೂಮಿಕಾ ತಂಗಿ ಅಪೇಕ್ಷಾ ಆಗಿ ಅಭಿನಯಿಸುತ್ತಿರುವ ಅಮೃತಾ ನಾಯಕ್ ನಟನಾ ಪಯಣ ಶುರುವಾಗಿದ್ದು ಹಿರಿತೆರೆ ಮೂಲಕ. ಮನೋಜ್ಞ ನಟನೆಯ ಮೂಲಕ ಹಿರಿತೆರೆಯಲ್ಲಿ ಮೋಡಿ ಮಾಡಿರುವ ಅಮೃತಾ ನಾಯಕ್ ಇದೀಗ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕಿ ಭೂಮಿಕಾಳ ತಂಗಿಯಾಗಿರುವ ಅಪೇಕ್ಷಾ ಮಂದಾಕಿನಿಯ ಮುದ್ದಿನ ಮಗಳು ಹೌದು. ತನ್ನ ಅಮ್ಮ ಮಿಸ್ ಮೈಸೂರು ಆಗಿದ್ದರೆ ತಾನು ಮಿಸ್ ಇಂಡಿಯಾ ಆಗಬೇಕು ಎಂದು ಕನಸು ಕಂಡಿರುವಾಕೆ. ಇನ್ನು ಕೂಡಾ ಮದುವೆ ಆಗಬೇಕಾಗಿರುವ ಅಕ್ಕ ಭೂಮಿಕಾ ತನ್ನ ಏಳ್ಗೆಗೆ ಅಡ್ಡಿ ಎನ್ನುವುದು ಈಕೆಯ ವಾದ. ತನ್ನ ಕನಸು ನನಸಾಗುವುದಕ್ಕಾಗಿ ಅಕ್ಕ ಪಡುತ್ತಿರುವ ಕಷ್ಟದ ಬಗ್ಗೆ ಈಕೆಗೆ ಅರಿವೇ ಇಲ್ಲ. ಸದ್ಯ ಅಕ್ಕನ ಮದುವೆ ತಯಾರಿ ನಡೆಯುತ್ತಿದ್ದು ಅಕ್ಕ ಮಾಡಿದ ತ್ಯಾಗ ಅಪೇಕ್ಷಾಗೆ ಅರಿವಾಗುತ್ತದಾ ಎಂದು ನೋಡಬೇಕಾಗಿದೆ.

ಮುನ್ನುಡಿ ಬರೆದಿದ್ದು 'ಯಶೋಧೆ' ಧಾರಾವಾಹಿ
ಸಣ್ಣ ವಯಸ್ಸಿನಿಂದಲೂ ಅಭಿನಯದತ್ತ ಆಸಕ್ತಿ ಹೊಂದಿದ್ದ ಅಮೃತಾ ನಾಯಕ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಶೋಧೆ' ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟನಾ ಲೋಕದ ನಂಟು ಬೆಳೆಸಿಕೊಂಡರು. ಆದರೆ, ಕಿರುತೆರೆಗಿಂತಲೂ ಹಿರಿತೆರೆಯಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಅಮೃತಾ ಅವರ ಆಸೆಯಾಗಿತ್ತು.
ಲೆಕ್ಚರರ್ ಆಗಿ ಹಿರಿತೆರೆಗೆ ಎಂಟ್ರಿ
ರಾಜ್ ಬಿ ಶೆಟ್ಟಿ ಅಭಿನಯದ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಅಮೃತಾ ನಾಯಕ್ ಅದರಲ್ಲಿ ಎಕಾನಾಮಿಕ್ಸ್ ಲೆಕ್ಚರರ್ ಆಗಿ ಕಾಣಿಸಿಕೊಂಡಿದ್ದರು. ಸ್ನೇಹಿತರ ಒತ್ತಾಯದ ಮೇರೆಗೆ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಆಡಿಶನ್‌ಗೆ ಹೋದ ಅಮೃತಾಗೆ ಆಯ್ಕೆಯಾದಾಗ ಸ್ವರ್ಗಕ್ಕೆ ಮೂರೇ ಗೇಣು.
ಖುಷಿಯ ಜೊತೆಗೆ ಭಯವೂ ಆಯಿತಂತೆ
'ಒಂದು ಮೊಟ್ಟೆಯ ಕಥೆ' ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಾಗ ಅಮೃತಾಗೆ ಎಷ್ಟು ಖುಷಿಯಾಯಿತು ಅಷ್ಟೇ ಭಯವೂ ಆಗಿತ್ತಂತೆ. ತನ್ನಿಂದ ನಟಿಸಲು ಸಾಧ್ಯವಾ ಎಂಬ ಆತಂಕವೂ ಕೂಡಾ ಆಕೆಗೆ ಕಾಡಿತ್ತಂತೆ. ಆದರೆ ಮೊದಲ ಸಿನಿಮಾದಲ್ಲಿಯೇ ಒಂದು ಒಳ್ಳೆಯ ತಂಡ ಸಿಕ್ಕ ಕಾರಣ ನಟಿಸಲು ಖುಷಿಯಾಯಿತಂತೆ.

ಸಿನಿಮಾದಲ್ಲಿ ಮೋಡಿ
'ಕಥಾ ಸಂಗಮ' ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ಅಮೃತಾ ನಾಯಕ್ ಮುಂದೆ 'ಕವಚ' ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ತಂಗಿಯಾಗಿ ಅಭಿನಯಿಸಿದ್ದರು. ತದ ನಂತರ ಹಿರಿತೆರೆತಲ್ಲಿ ಕಾಣಿಸಿಕೊಳ್ಳದ ಆಕೆ ಇದೀಗ ಕಿರುತೆರೆಗೆ ಕಾಲಿಟ್ಟಿದ್ದು ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ.


Click it and Unblock the Notifications











