ಮಾಜಿ ಸಿಎಂ ಕುಮಾರಸ್ವಾಮಿ ಹೆಸರಿನಲ್ಲಿಯೂ ಮಕ್ಮಲ್ ಟೋಪಿ ಹಾಕಿದ್ರಾ ಡ್ರೋನ್ ಪ್ರತಾಪ್..?
ಪುರಾತನ ಕಾಲದಲ್ಲಿ ಡ್ರೋನ್ ಪ್ರತಾಪ್ ಮಾಡಿಕೊಂಡ ರಂಕಲು ರಾಮಾಯಣದ ಮುಂದುವರೆದ ಭಾಗ ಸದ್ಯಕ್ಕೆ ಆರಂಭವಾದಂತೆ ಇದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಸ್ವಯಂ ಘೋಷಿತ ಡ್ರೋನ್ ವಿಜ್ಞಾನಿ ಪ್ರತಾಪ್ ಆ ಕಡೆ ರಿಯಾಲಿಟಿ ಸ್ಟಾರ್ ಪಟ್ಟಕ್ಕೇರಲು ಕಸರತ್ತು ಮುಂದುವರೆಸಿದ್ದರೆ, ಈ ಕಡೆ ಡ್ರೋನ್ ಪ್ರತಾಪ್ ವಿರುದ್ಧ ಒಂದೊಂದೇ ಪ್ರಕರಣ ದಾಖಲಾಗ್ತಿವೆ.
ಮಾಜಿ ಸಿ.ಎಂ ಕುಮಾರಸ್ವಾಮಿ ಹೆಸರಿನಲ್ಲಿ ವಂಚನೆ ..?
ಬುದ್ದಿವಂತ ಹಾಗೂ ಮುಗ್ದನಂತೆ ಬಿಗ್ ಬಾಸ್ ಮನೆಯಲ್ಲಿ ಕಂಡಿದ್ದ ಡ್ರೋನ್ ಪ್ರತಾಪ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಆ ದೂರಿನ ಅನ್ವಯ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೆಸರಿನಲ್ಲಿ, ಡ್ರೋನ್ ಪ್ರತಾಪ್ ಎರಡು ಲಕ್ಷ ವಂಚನೆ ಮಾಡಿದ್ದಾರೆ.

ಜಿಲ್ಲಾ ಪಂಚಾಯಿತಿ ಟಿಕೆಟ್.. 2 ಲಕ್ಷ.. ದೂರು..!
ಜಿಲ್ಲಾ ಪಂಚಾಯಿತಿ ಚುನಾವಣೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಎರಡು ಲಕ್ಷ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಚಂದನ್ ಗೌಡ ಎಂಬುವರು ಡ್ರೋನ್ ಪ್ರತಾಪ್ ವಿರುದ್ಧ ದೂರು ನೀಡಿದ್ದಾರೆ. ನನಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಪ್ತರು. ಅವರ ಫಾರಂ ಹೌಸ್ಗೆ ನಾನು ಆಗಾಗ್ಗೆ ಭೇಟಿ ನೀಡುತ್ತಿರುತ್ತೇನೆ. ಕುಮಾರಸ್ವಾಮಿ ಅವರನ್ನ ಹಲವು ಭಾರಿ ಭೇಟಿ ಮಾಡಿದ್ದೇನೆ. ಆದರೆ ಅವರ ಜೊತೆಗೆ ಇರುವ ಚಿತ್ರಗಳನ್ನು ನಾನು ಹಂಚಿಕೊಳ್ಳಲು ಬಯಸುವುದಿಲ್ಲ. ಕುಮಾರಸ್ವಾಮಿ ಅವರಿಗೆ ಹೇಳಿ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುತ್ತೇನೆ ಎಂದು ಪ್ರತಾಪ್ ಹೇಳಿದ್ದರು ಎಂದು ಚಂದನ್ ದೂರಿನಲ್ಲಿ ದಾಖಲಿಸಿದ್ದಾರೆ
ಇನ್ನೂ 'ಹಣೆಬರಹಕ್ಕೆ ಹೊಣೆ ಯಾರು' ಎಂಬಂತೆ, ಇದೇ ಸಮಯದಲ್ಲಿ ಚಂದನ್ ಜೊತೆ ಪ್ರತಾಪ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕೂಡ ಚಂದನ್ ಬಿಡುಗಡೆ ಮಾಡಿದ್ದಾರೆ. ಈ ಆಡಿಯೋದಲ್ಲಿ ನನ್ನನ್ನು ಕಾಂಗ್ರೆಸ್ ಗೆ ಬನ್ನಿ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡ್ತೀನಿ ಅಂದಿದ್ದರು ಎಂದಿರುವ ಡ್ರೋನ್ ಪ್ರತಾಪ್ ,ಕುಮಾರಸ್ವಾಮಿ ಕೆಟ್ಟ ಪದ ಬೈಯಬಹುದು, ಆದರೆ ಒಳ್ಳೆಯ ಮನುಷ್ಯ, ಡಿಕೆ ಶಿವಕುಮಾರ್ ಥರ ಪೇಪರ್ ಎಸೆಯೋದು ಎಲ್ಲ ಮಾಡಲ್ಲ, ಕುಮಾರಸ್ವಾಮಿ ಯಾರೇ ಹೋದ್ರು ದುಡ್ಡು ಕೊಡ್ತಾರೆ ಎಂಬ ಎಂದಿದ್ದಾರೆ ಪ್ರತಾಪ್. ಈ ಆಡಿಯೋ ಅಸಲಿಯಾ ನಕಲಿಯಾ ಅನ್ನುವುದು ಖುದ್ದು ಡ್ರೋನ್ ಪ್ರತಾಪ್ ಅವರೇ ಹೇಳಬೇಕು
ಡ್ರೋನ್ ಪ್ರತಾಪ್ ವಿರುದ್ಧ ಸಾಲು ಸಾಲು ದೂರು..!
ಕೇವಲ ಚಂದನ್ ಮಾತ್ರ ಅಲ್ಲ ಪ್ರತಾಪ್ ವಿರುದ್ಧ ಈಗಾಗಲೇ 02 ದೂರುಗಳು ದಾಖಲಾಗಿವೆ. ಆ ಪೈಕಿ ಬಿಬಿಎಂಪಿ ಮಾಜಿ ನೂಡಲ್ ಅಧಿಕಾರಿ ಪ್ರಯಾಗ್ 50 ಲಕ್ಷ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇನ್ನೂರಾಜರಾಜೇಶ್ವರಿ ಪೊಲೀಸ್ ಠಾಣೆಯಲ್ಲಿ ಪ್ರತಾಪ್ ವಿರುದ್ಧ ನಿಯಮ ಉಲ್ಲಂಘನೆ ದೂರು ದಾಖಲಾಗಿದೆ. ಪ್ರತಾಪ್, ಸೂಕ್ತ ಅನುಮತಿಗಳನ್ನು ಪಡೆಯದೆ ಡ್ರೋನ್ ಮಾರಾಟ ಮಾಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಿರೆಂದು ಮಹೇಶ್ ಎಂಬುವರು ದೂರು ದಾಖಲು ಮಾಡಿದ್ದಾರೆ. ಇನ್ನು ಪುಣೆಯ ಉದ್ಯಮಿ ಸಾರಂಗ್ ಸಹ ಮಾಧ್ಯಮಗಳ ಮುಂದೆ ಪ್ರತಾಪ್ ವಿರುದ್ಧ ಆರೋಪ ಮಾಡಿದ್ದು, ಪ್ರತಾಪ್ 35 ಲಕ್ಷ ರೂಪಾಯಿ ಹಣ ಪಡೆದು ಒಪ್ಪಂದದ ಅನುಗುಣವಾಗಿ ಡ್ರೋನ್ಗಳನ್ನು ನೀಡಿಲ್ಲ. ಈಗ ನೀಡಿರುವ ಕೆಲವು ಡ್ರೋನ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.

ಈಗ ದೂರು ಕೊಟ್ಟಿದ್ದೇಕೆ ಚಂದನ್..?
ಹಾಗೇ ನೋಡಿದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಚಂದನ್, ಪ್ರತಾಪ್ ಅವರನ್ನ ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪ್ರತಾಪ್ ಕರೆಯನ್ನ ಸ್ವೀಕರಿಸಿಲ್ಲ. ಇದ್ರಿಂದ ಬೇಸತ್ತು ಪೊಲೀಸ್ ಆಯುಕ್ತ ದಯಾನಂದ್ ಅವರಿಗೆ ದೂರು ನೀಡಿರುವುದಾಗಿ ಚಂದನ್ ಗೌಡ ಹೇಳಿದ್ದಾರೆ
ಚಂದನ್ ಗೌಡ ಕೊಟ್ಟ ದೂರಿನಲ್ಲೇನಿದೆ..?
ಡ್ರೋನ್ ಪ್ರತಾಪ್ ಆದ ಇವರು ಜಿಲ್ಲಾ ಪಂಚಾಯತ್ ತಳಗವಾದಿ ಟಿಕೆಟ್ ಕೊಡಿಸುವುದಾಗಿ ಹೇಳಿ ನನ್ನಿಂದ ಸುಮಾರು. ರೂ. 2.00 ಲಕ್ಷ ರೂಪಾಯಿ ನಗದು ರೂಪದಲ್ಲಿ ಪಡೆದು ತನಗೆ ಮಾನ್ಯ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರವರು ಪರಿಚಯವಿದ್ದು ಅವರ ಫಾರಂ ಹೌಸ್‌ನಲ್ಲಿ ಆಗಾಗ ಭೇಟಿ ನೀಡುವುದಾಗಿ ತಿಳಿಸಿದ್ದಾನೆ. ನನ್ನಿಂದ ಕನ್ನಡ ಬಿಗ್ ಬಾಸ್ ರಿಯಾಲಿಟಿ ಷೋ ಮನೆಗೆ ಆಯ್ಕೆ ಆಗಲು ಪ್ರಚಾರ ಬೇಕೆಂದು ನನ್ನ ಸಹಾಯ ಕೇಳಿರುತ್ತಾನೆ. ಆದ್ದರಿಂದ ನಾನು ಅವನಿಗೆ ಬಿಗ್ ಬಾಸ್ ಮನೆಗೆ ಹೋಗಲು ನಾನು ನನ್ನ ಮನೆಯಲ್ಲಿ ಅವನನ್ನು ಇರಿಸಿಕೊಂಡು ಸ್ಥಳೀಯವಾಗಿ ಅವನಿಗೆ ಡ್ರೋನ್ ಹಾರಿಸಲು ಸಲುವಾಗಿ ಸ್ಥಳೀಯ ಸಹಕಾರ ಹಾಗೂ ಸಹಾಯ ಮಾಡಿರುತ್ತೇನೆ. ನಾನು ಸ್ವ-ಇಚ್ಛೆಯಿಂದ ಅವನು ಗೆದ್ದು ಬರಲೆಂದು ಆಶಿಸಿ ಅವನ ಪರವಾಗಿ ಪ್ರಚಾರ ಮಾಡಿ ಹಾಗೂ ಮತ ಹಾಕಲು ವಿವಿಧ ಮಾಧ್ಯಮ ಮೂಲಕ ಹಾಗೂ ಸ್ನೇಹ ಬಳಗದಲ್ಲೂ ಬೇಡಿ ಕೊಂಡಿರುತ್ತೇನೆ. ಇಷ್ಟೆಲ್ಲಾ ನನ್ನನ್ನು ಉಪಯೋಗಿಸಿಕೊಂಡಿದ್ದು ಸಹ ಅಲ್ಲಿಂದ ಬಂದ ನಂತರ ಸುಮಾರು ಬಾರಿ ಅವರ ದೂರವಾಣಿ ಸಂಖ್ಯೆಗೆ ಕರೆ ಹಾಗೂ ಮೆಸೇಜ್ ಕಳುಹಿಸಿದರು ಸಹ ಉತ್ತರಿಸುತ್ತಿಲ್ಲ, ಇದರಿಂದ ಮನನೊಂದು ನನಗಾಗಿರುವ ಮೋಸ ಮತ್ತು ವಂಚನೆ ಮಾಡಿರುವ ಬಗ್ಗೆ ಸೂಕ್ತ ನ್ಯಾಯ ಒದಗಿಸಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

ಒಟ್ಟಿನಲ್ಲಿ 'ಅಕ್ಕನ ಒಡವೇಲೂ ಅಕ್ಕಸಾಲಿಗ ಗುಲಗಂಜಿ ತೂಕದ್ದಾದರೂ ಚಿನ್ನ ಕದಿಯುತ್ತಾನೆ' ಎಂಬ ಹಿರಿಯರ ಮಾತಿನಂತೆ, ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ಒಬ್ಬರಾದ ಮೇಲೆ ಒಬ್ಬರು ದೂರಿನ ಪ್ರತಿಯನ್ನ ಹಿಡಿದು ಪೊಲೀಸ್ ಠಾಣೆಗೆ ಬರುತ್ತಿದ್ದಾರೆ. ಡ್ರೋನ್ ಪ್ರತಾಪ್ ಮೇಲೆ ವಂಚನೆಯ ಆರೋಪವನ್ನ ಮಾಡ್ತಿದ್ದಾರೆ. ಆದರೆ 'ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ' ಎಂಬಂತೆ ಈ ಎಲ್ಲ ಆರೋಪಗಳಿಗೆ ಉತ್ತರ ಕೊಡಬೇಕಾದ ಡ್ರೋನ್ ಪ್ರತಾಪ್ ಮಾತ್ರ ನಿಮ್ಮೆಲ್ಲರನ್ನ ನಗಿಸುವ ಶಪಥ ಮಾಡಿದ್ದಾರೆ. ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.


Click it and Unblock the Notifications











