Bhagyalakshmi: 'ಭಾಗ್ಯಲಕ್ಷ್ಮಿ' ಧಾರಾವಾಹಿಗೆ ಒಂದು ವರ್ಷ.. ತಾಂಡವ್ ಅಲಿಯಾಸ್ ಸುದರ್ಶನ್ ಸವಿ ನೆನಪುಗಳೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯು ಯಶಸ್ವಿ ಒಂದು ವರ್ಷ ಪೂರೈಸಿದೆ. ಈ ಸಂಭ್ರಮವನ್ನು 'ಭಾಗ್ಯಲಕ್ಷ್ಮಿ' ತಂಡ ಕೇಕ್ ಕಟ್ ಮಾಡುವುದರ ಮೂಲಕ ಆಚರಿಸಿಕೊಂಡಿದೆ.
ಇದರ ಜೊತೆಗೆ ಧಾರಾವಾಹಿಯಲ್ಲಿ ನಾಯಕ ತಾಂಡವ್ ಸೂರ್ಯವಂಶಿಯಾಗಿ ಅಭಿನಯಿಸುತ್ತಿರುವ ಸುದರ್ಶನ್ ರಂಗಪ್ರಸಾದ್ ಅವರು ಈ ಸಂತಸದ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಆಡಿಶನ್ ಸ್ಕ್ರಿಪ್ಟ್ ನ ಜೊತೆಗೆ ಆಡಿಶನ್‌ಗೆ ಕಳಿಸಿದ ವಿಡಿಯೋದ ತುಣುಕೊಂದನ್ನು ಶೇರ್ ಮಾಡಿರುವ ಸುದರ್ಶನ್ ರಂಗಪ್ರಸಾದ್ "ಇದೊಂದು ತುಂಬಾ ಅದ್ಭುತವಾದ ಪ್ರಯಾಣವಾಗಿದೆ. ಆಡಿಶನ್‌ಗೆ ಕರೆ ಬಂದ ದಿನ ನನಗೆ ಇನ್ನೂ ನೆನಪಿದೆ. ಈ ಆಡಿಷನ್ ಆಯ್ಕೆಯಾದ ನಂತರ, ಇನ್ನೂ ಮೂರು ಸುತ್ತುಗಳಿದ್ದವು. 2 ಆನ್-ಸೆಟ್ ಆಡಿಷನ್‌ಗಳು ಮತ್ತು ಅಣಕು ಶೂಟ್. ಎರಡು ತಿಂಗಳುಗಳು ಮತ್ತು ನಂತರವೂ #ಭಾಗ್ಯಲಕ್ಷ್ಮಿ" ಎಂದು ಬರೆದುಕೊಂಡಿದ್ದಾರೆ.
ಮೂಲತಃ ಬೆಂಗಳೂರಿನವರಾಗಿರುವ ಸುದರ್ಶನ್ ರಂಗಪ್ರಸಾದ್ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಾರದ ಐದು ದಿನಗಳ ಕಾಲ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುದರ್ಶನ್‌ಗೆ ಬರೀ ಒಂದೇ ಕೆಲಸಕ್ಕೆ ಸ್ಟಿಕ್ ಆನ್ ಆಗಿರಲು ಮನಸ್ಸಿರಲಿಲ್ಲ. ಅದೇ ಕಾರಣದಿಂದ ವಾರಾಂತ್ಯದಲ್ಲಿ ಸ್ಟ್ಯಾಂಡಪ್ ಕಾಮಿಡಿ ಮಾಡಿ ವೀಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸುತ್ತಿದ್ದರು.

ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ಗುರುತಿಸಿಕೊಂಡ ಸುದರ್ಶನ್ ರಂಗಪ್ರಸಾದ್ ಮುಂದೆ ತಮ್ಮದೇ ಆದ ತಂಡವನ್ನು ರಚಿಸಿಕೊಂಡು ವಾರಾಂತ್ಯದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಕಾರ್ಯಕ್ರಮ ಮಾಡುತ್ತಿದ್ದರು. ಜನರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದ್ದರು. ಇದರ ಜೊತೆಗೆ ಲೋಲ್ ಬಾಗ್ ಎನ್ನುವ ಯೂಟ್ಯೂಬ್ ಚಾನೆಲ್ ಅನ್ನು ಕೂಡಾ ಇವರು ಹೊಂದಿದ್ದು ಅದರಲ್ಲಿ ತಮ್ಮ ಸ್ಟ್ಯಾಂಡಪ್ ಕಾಮಿಡಿಯ ವಿಡಿಯೋಗಳನ್ನ ಹಂಚಿಕೊಂಡಿದ್ದಾರೆ.
ಇನ್ನು 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಪಾಸಿಟಿವ್ ಜೊತೆಗೆ ನೆಗೆಟಿವ್ ಪಾತ್ರವನ್ನು ಏಕಕಾಲಕ್ಕೆ ನಿಭಾಯಿಸುತ್ತಿರುವ ಸುದರ್ಶನ್ ರಂಗಪ್ರಸಾದ್ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ನಡೆದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ 'ಜನ ಮೆಚ್ಚಿದ ಶಕುನಿ' ಪ್ರಶಸ್ತಿಯನ್ನು ಪಡೆದಿರುವ ಸುದರ್ಶನ್ ರಂಗಪ್ರಸಾದ್ ಅವರ ತಾಂಡವ್ ಪಾತ್ರಕ್ಕೆ ಬೈಗುಳದ ಸುರಿಮಳೆಯೇ ಸುರಿದಿದೆಯಂತೆ.
ಸ್ಟ್ಯಾಂಡ್‌ಅಪ್ ಕಾಮಿಡಿ ಮಾಡುವಾಗ ಜನ ಮನ ಬಿಚ್ಚಿ ನಗುತ್ತಾರೆ ಎಂದರೆ ನಾವು ಮಾಡಿರುವ ಕಾಮಿಡಿ ಅವರಿಗೆ ಇಷ್ಟ ಆಗಿದೆ ಎಂದರ್ಥ. ಹಾಗೆಯೇ ತಾಂಡವ್ ಪಾತ್ರ ನೋಡಿ ಜನ ಬೈಯ್ಯುತ್ತಿದ್ದಾರೆ ಎಂದರೆ ಕಿರುತೆರೆ ವೀಕ್ಷಕರು ತಮ್ಮ ಪಾತ್ರವನ್ನು ಇಷ್ಟಪಟ್ಟಿದ್ದಾರೆ ಎಂದು ಅರ್ಥವಂತೆ.
ಅಂದ ಹಾಗೇ ಸುದರ್ಶನ್ ರಂಗಪ್ರಸಾದ್ ಪತ್ನಿಯೂ ಕೂಡಾ ನಟಿ. ಕಿರುತೆರೆ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸಂಗೀತಾ ಭಟ್ ಕಿರುತೆರೆ ನಟ ಸುದರ್ಶನ್ ಅವರ ಪತ್ನಿ. ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಎಂಟು ವರುಷಗಳೇ ಕಳೆದಿದೆ. ಸದ್ಯ ಸುದರ್ಶನ್ ಅವರು ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದರೆ, ಸಂಗೀತಾ ಭಟ್ ಅವರು ಸಿನಿಮಾಗಳಲ್ಲಿ ಮೋಡಿ ಮಾಡುತ್ತಿದ್ದಾರೆ.


Click it and Unblock the Notifications











