For Quick Alerts
  ALLOW NOTIFICATIONS  
  For Daily Alerts

  ನೀವು 'ಪುಟ್ಟಗೌರಿ ಮದುವೆ' ಸೀರಿಯಲ್ ಭಕ್ತರಾ? ಇದನ್ನೊಮ್ಮೆ ತಪ್ಪದೆ ಓದಿ..

  By ವೆಂಕಟೇಶ ದೊಡ್ಮನೆ
  |

  ನಮ್ಮ ಮನೆಗಳ ಧಾರಾವಾಹಿ ವೀಕ್ಷಕರು ಎಂತೆಂಥಾ ಸೀರಿಯಲ್ ಗಳಿಗಾಗಿ ದಿನವೆಲ್ಲಾ ಕಾಯ್ತಾ ಕುಳಿತಿರುತ್ತಾರೆ.? ಬನ್ನಿ ಒಂದು ಸುತ್ತು ಹಾಕಿ ಬರೋಣ..

  ಉದಾಹರಣೆಗಾಗಿ ಒಂದು ಧಾರಾವಾಹಿ ತೆಗೆದುಕೊಳ್ಳೋಣ, 'ಪುಟ್ಟಗೌರಿ ಮದುವೆ'.. ಕನ್ನಡದ ಟಾಪ್ ಸೀರಿಯಲ್ ಗಳಲ್ಲಿ ಒಂದು. ಈ ಧಾರಾವಾಹಿಯನ್ನು ನೋಡಲು ಹೆಂಗಸರು ಮಾತ್ರ ಅಲ್ಲದೇ ಗಂಡಸರೂ ಆ ಹೊತ್ತಿಗೆ ಬಂದು ಟಿ.ವಿ ಮುಂದೆ ತದೇಕಚಿತ್ತದಿಂದ ಕುಳಿತು ಹಾಜರಿರುತ್ತಾರೆ.

  ನೀವು ಗೃಹಿಣಿಯಾಗಿ ಈ ಧಾರಾವಾಹಿಯನ್ನು ದಿನಂಪ್ರತಿ ನೋಡುತ್ತಿಲ್ಲ ಅಂತಾದರೆ ನೀವು 'ಗೃಹಿಣಿಯರಲ್ಲೇ' ಹಿಂದುಳಿದಿದ್ದೀರಾ ಎಂದು ಅರ್ಥ! ಮದುವೆ-ಮುಂಜಿ ಮನೆಗಳಲ್ಲಿ ತೆಲುಗಿನವರು ಸಿನೆಮಾಗಳ ಸುದ್ದಿ ಮಾತನಾಡುವ ಹಾಗೆ ಕನ್ನಡದವರು ಮುಖಾ-ಮುಖಿ ಭೇಟಿಯಾದಾಗ ತಮ್ಮ ತಮ್ಮ ಕಷ್ಟ-ಸುಖಗಳನ್ನು ಮಾತನಾಡುವುದನ್ನು ಬಿಟ್ಟು ಗೌರಿಯ ಕಥೆ, ಅಜ್ಜಿಯ ಗುಣಗಳ ಬಗ್ಗೆ ಮಾತನಾಡುತ್ತಾರೆ! ಅಷ್ಟು ಪಾಪ್ಯುಲರ್ ಸೀರಿಯಲ್ ಇದು.

  'ಪುಟ್ಟಗೌರಿ' ಹೆಸರಿನಲ್ಲಿ ಇರುವ ದಾಖಲೆಗಳು ಒಂದಾ ಎರಡಾ.?

  ಇದರಲ್ಲಿ ಅಂಥದ್ದು ಏನು ಇರುತ್ತದೆ ಎಂದು ಒಂದು ದಿನ ನೋಡಿದರೆ ಸಾಕು 'ಫ್ಯಾಮಿಲಿ ಮೆಲೋಡ್ರಾಮಾ'ದ ಪೂರ್ಣ ಸ್ವರೂಪ ಗೊತ್ತಾಗುತ್ತದೆ. ಈಗಿನ ಧಾರಾವಾಹಿಗಳನ್ನು ಅಪರೂಪಕ್ಕೆ ನೋಡುವ ನನಗೆ ಅವತ್ತು ಯಾರೊಂದಿಗೋ ಮಾತನಾಡುತ್ತಾ ಟಿ.ವಿ. ಮುಂದೆ ಕುಳಿತಾಗ, 'ಪುಟ್ಟಗೌರಿ'ಯನ್ನು ನೋಡುವ ಅದೃಷ್ಟ (!) ಒದಗಿ ಬಂದಿತ್ತು.

  ಅವತ್ತಿನ ಕಂತಿನಲ್ಲಿ...

  ಅವತ್ತಿನ ಕಂತಿನಲ್ಲಿ...

  ಅವತ್ತಿನ ಕಂತಿನಲ್ಲಿ ಒಬ್ಬ ಮಹಿಳೆ ಆಭರಣದ ಅಂಗಡಿಗೆ ಹೋಗಿ ಆಭರಣವನ್ನು ಖರೀದಿ ಮಾಡುವ ದೃಶ್ಯ. ಆಕೆ (ಸಾಗರಿ ಇರಬೇಕು) ಅಂಗಡಿಯಲ್ಲಿ ಆಭರಣಗಳನ್ನು ವೀಕ್ಷಿಸುತ್ತಿದ್ದಾಗ, ಆಕೆಯ ಮೇಲೆ ಹಗೆ ತೀರಿಸಿಕೊಳ್ಳಬೇಕೆಂದು ಒಬ್ಬನು (ಗೌರಿಯ ತಂದೆ-ಜಗದೀಶ್) ಸಂಚು ಮಾಡುತ್ತಾ ಅಂಗಡಿಯ ಹೊರಗಡೆ ನಿಂತಿರುತ್ತಾನೆ. ಅದೇ ಮಾರ್ಗದಲ್ಲಿ ಜಗದೀಶ್ ಗೆ ಪರಿಚಯ ಇರುವ ಯುವಕ ನಡೆದುಕೊಂಡು ಬರುತ್ತಾನೆ. ಜಗದೀಶ್ ಯುವಕನನ್ನು ಕರೆದು ಅಂಗಡಿಯ ಒಳಗಡೆ ಇರುವ ಯುವತಿಯ ಬಗ್ಗೆ ಹೇಳಿ ಆಕೆಯನ್ನು ಹೇಗೆ ಉಪಾಯವಾಗಿ ಸಂಚಿನಲ್ಲಿ ಸಿಕ್ಕಿಸಬೇಕು ಎಂದು ಹೇಳಿ ಕಳುಹಿಸುತ್ತಾನೆ. ಆ ಯುವಕ ಸೀದಾ ಅಂಗಡಿಯ ಒಳಗೆ ಹೋಗಿ ಒಂದು ಚಿನ್ನದ ಸರ ತೋರಿಸುವಂತೆ ಅಂಗಡಿಯವರಿಗೆ ಕೇಳುತ್ತಾನೆ. ಅದೇ ಸಮಯದಲ್ಲಿ ಪಕ್ಕದಲ್ಲಿ ಯುವತಿ ಚಿನ್ನದ ಉಂಗುರವನ್ನು ಖರೀದಿ ಮಾಡುತ್ತಿರುತ್ತಾಳೆ. ಯುವತಿಯ ಗಮನ ಬೇರೆಡೆ ಇರುವುದನ್ನು ನೋಡಿಕೊಂಡು, ಯುವಕ ಚಿನ್ನದ ಸರವನ್ನು ಆಕೆಯ ವ್ಯಾನಿಟಿ ಬ್ಯಾಗಿನಲ್ಲಿ ಹಾಕಿಬಿಡುತ್ತಾನೆ. ಅದು ಆಕೆಯನ್ನು ಸರ ಕದ್ದಿದ್ದಾಳೆ ಎಂದು ಸಿಕ್ಕಿಸುವ ಸಂಚು. ನಂತರ ಆ ಯುವಕ ಹೊರ ನಡೆದು ಬಿಡುತ್ತಾನೆ.

  'ಪುಟ್ಟಗೌರಿ'ಯ ವನವಾಸ ಅಂತ್ಯ: ಗೌರಿ ಕಾಡಿನಿಂದ ನಾಡಿಗೆ ಬಂದಿದ್ದು ಹೇಗೆ?

  ನಂತರ ಏನಾಗುತ್ತೆ.?

  ನಂತರ ಏನಾಗುತ್ತೆ.?

  ಇದಾದ ಕೊಂಚ ಹೊತ್ತಿನಲ್ಲೇ ಹೊರಗಡೆ ನಿಂತಿದ್ದ ಜಗದೀಶ್ ಒಳಗೆ ಬಂದು ಅಂಗಡಿ ಯಜಮಾನರಿಗೆ ಎಚ್ಚರಿಸಿ ಆ ಯುವಕ ಯುವತಿಯ ವ್ಯಾನಿಟಿ ಬ್ಯಾಗಿನಲ್ಲಿ ಸರಹಾಕಿದ್ದು, ನಂತರ ಹೊರಗಡೆ ಅವರಿಬ್ಬರೂ ಮಾತನಾಡುತ್ತಿದ್ದಿದ್ದು ಎಲ್ಲವನ್ನೂ ವಿವರಿಸಿ ಆಕೆಯನ್ನು ಕಳ್ಳಿ, ಹಿಡಿಯಿರಿ ಎಂದು ಹೇಳಿ ಹೊರಟು ಹೋಗುತ್ತಾನೆ. ನಂತರ ಅಂಗಡಿಯವರು ತೀರ್ಮಾನ ತೆಗೆದುಕೊಂಡು ಆಕೆಯನ್ನು ಹಿಂಬಾಲಿಸಿಕೊಂಡು ಹೋಗುತ್ತಾರೆ. ಅಷ್ಟರಲ್ಲಿ ಆ ಯುವಕ ಯುವತಿಯನ್ನು ಹಿಂಬಾಲಿಸಿಕೊಂಡು ಹೋಗಿ ಆಕೆಯ ಜಂಬದ ಚೀಲದಲ್ಲಿ ಸರ ಇರುವುದಾಗಿ ತಿಳಿಸುತ್ತಾನೆ. ಮಾತಿನ ಚಕಮಕಿಯ ನಂತರ ಅಂಗಡಿಯವರು ಹಿಡಿಯಲು ಓಡಿ ಬರುತ್ತಿರುವುದನ್ನು ತೋರಿಸಿ, ತಾನೂ ಓಡಿ ಹೋಗುತ್ತಾನೆ. ಸ್ವಲ್ಪ ಓಡಿದ ಮೇಲೆ ಸಾಗರಿ ಸಿಕ್ಕಿ ಬೀಳುತ್ತಾಳೆ, ಅಂಗಡಿಯವರು ಚೆನ್ನಾಗಿ ಹೊಡೆಯುತ್ತಾರೆ.

  ಇವಿಷ್ಟು ಆ ದಿನದ ಕಂತು (ಎಪಿಸೋಡ್).

  ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.!

  ಈಗ ವಾಸ್ತವಕ್ಕೆ ಬರೋಣ....

  ಈಗ ವಾಸ್ತವಕ್ಕೆ ಬರೋಣ....

  ಸಾಗರಿ ಖರೀದಿಗೆ ಹೋದದ್ದು ದೊಡ್ಡ ಆಭರಣ ಅಂಗಡಿ ಅಂದ ಮೇಲೆ ಅಲ್ಲಿ ಸಿಸಿಟಿವಿ ಇರಬೇಕಲ್ಲವೇ? ಅದೇನು ಮಾಡುತ್ತಿದೆ? ಆ ಯುವಕ ಒಳಗೆ ಹೋದಾಗ ಒಬ್ಬನೇ ಅಟೆಂಡ್ ಮಾಡುತ್ತಾನೆ. ನೀವು ಯಾವುದಾದರೂ ದೊಡ್ಡ ದೊಡ್ಡ ಆಭರಣ ಅಂಗಡಿಯಲ್ಲಿ ಇಷ್ಟು ಬೇಜವಾಬ್ದಾರಿಯಿಂದ ಒಬ್ಬಿಬ್ಬರು ಇರುವುದನ್ನು ನೋಡಿದ್ದೀರಾ?

  'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

  ವಾಸ್ತವಕ್ಕೆ ತೀರಾ ದೂರ

  ವಾಸ್ತವಕ್ಕೆ ತೀರಾ ದೂರ

  ಸಿಸಿಟಿವಿ ಇದ್ದರೂ/ಇಲ್ಲದಿದ್ದರೂ ಕೂಡಾ ಮುಂದೊಬ್ಬರು-ಹಿಂದೊಬ್ಬರು, ಕೈ-ಕಾಲು, ಚೀಲಗಳನ್ನು ಹದ್ದಿನಕಣ್ಣಿಟ್ಟು ನೋಡುತ್ತಲೇ ಇರುತ್ತಾರೆ. ಇಲ್ಲವಾದರೆ ಅದೇನು ಕಿರಾಣಿ ಅಂಗಡಿಯೇ? ಅದರಲ್ಲೂ ಒಂದು ಸರವನ್ನು ಏಕಾಏಕಿ ಎತ್ತಿ ಬೇರೆಯವರ ಚೀಲದೊಳಗೆ ಹಾಕಬೇಕೆಂದರೆ?? ಆ ಇಡೀ ಸನ್ನಿವೇಶ ತಪ್ಪು ನಿರ್ದೇಶನದಿಂದ ಕೂಡಿದೆ. ಅಂಗಡಿಯ ಯಜಮಾನ ಮಾರ್ವಾಡಿಯ ತರಹ ಡ್ರೆಸ್ ಮಾಡಿಕೊಂಡಿದ್ದರೂ, ಒಳ್ಳೆ ಮಾರ್ಕೆಟ್ಟಿನ ಉಳ್ಳಾಗಡ್ಡಿ ವ್ಯಾಪಾರಿ ಮಾತನಾಡಿದ ಹಾಗೆ ಮಾತನಾಡುತ್ತಾನೆ. ಹಾವ-ಭಾವ, ಉಚ್ಚಾರಣೆಯಾಗಲಿ, ಡೈಲಾಗಿನಲ್ಲೂ ನೈಜತೆ ಇಲ್ಲ. ಅಭಿನಯವಂತೂ ಬಹುತೇಕರದ್ದು ಸೊನ್ನೆ.

  ಟ್ರೋಲ್ ಮಾಡುವವರಿಗೆ ತನ್ನ ಮಾತಿನಲ್ಲೇ ಪೆಟ್ಟು ಕೊಟ್ಟ ಪುಟ್ಟಗೌರಿ!

  ಇದೆಲ್ಲ ಹೇಗೆ ಸಾಧ್ಯ.?

  ಇದೆಲ್ಲ ಹೇಗೆ ಸಾಧ್ಯ.?

  ನಂತರ ಇನ್ನೂ ಸ್ವಾರಸ್ಯ. ಹೊರಗಡೆ ಕಾಯುತ್ತಿದ್ದ ಗೌರಿಯ ತಂದೆ ಒಳಗೆ ಬಂದು ಮಾಲೀಕನಿಗೆ ಅಸಭ್ಯವಾಗಿ ಮಾತನಾಡುತ್ತಾ ಯುವತಿ (ಸಾಗರಿ) ಕದ್ದು ಹೋಗಿರುವ ವಿಷಯ ತಿಳಿಸುತ್ತಾನೆ. ಅದು ಹೇಗೆ? ತಾನು ಕಳಿಸಿದ್ದ ಯುವಕ ಸರವನ್ನೆತ್ತಿ ಆಕೆಯ ಚೀಲದೊಳಗೆ ಹಾಕುತ್ತಾನೆ, ಅದನ್ನು ತಾನು ಹೊರಗಡೆಯಿಂದ ನೋಡಿದ್ದೇನೆ ಎನ್ನುತ್ತಾನೆ. ಯಾರಾದರೂ ಹೀಗೆ ಮಾಡಲು ಸಾಧ್ಯವಾ? ತನ್ನ ಸಂಚಿಗೆ ಸಹಕಾರ ನೀಡಿದವನ್ನನ್ನೂ (ಯುವಕ) ಸಿಕ್ಕಿಸುವುದು ವಾಸ್ತವದಲ್ಲಿ ಆಗುತ್ತಾ? ನಿರ್ದೇಶಕರು ಇಲ್ಲೂ ಎಡವಿದ್ದಾರೆ. ಚಿತ್ರಕಥೆಯನ್ನು ಕೊಂಚ ಬದಲಿಸಿ ಗೌರಿಯ ಅಪ್ಪ ಒಳಗೆ ಬಂದು ಮಾಲೀಕನ ಹತ್ತಿರ ಗಂಭೀರವಾದ ಭಾಷೆಯಲ್ಲಿ ಆಕೆ (ಸಾಗರಿ) ತೆಗೆದುಕೊಂಡು ಹೋಗಿರುವುದನ್ನು ಧೃಡಪಡಿಸಿ, ಆಕೆಯನ್ನು ಹಿಂಬಾಲಿಸುವಂತೆ ಹೇಳಿ ಉಪಾಯದಿಂದ ಸಿಕ್ಕಿಸುವಂತೆ ಮಾಡಬಹುದಾಗಿತ್ತು. ಆಗ ಅಂಗಡಿಯವರ ಪ್ರಶಂಸೆಗೂ ಪಾತ್ರವಾಗುವಂತೆ ಚಿತ್ರಕಥೆ ಇರಬಹುದಾಗಿತ್ತು. ಇಂತಹ ದೃಶ್ಯಗಳು ಅನೇಕ ಹಳೇ ಸಿನೆಮಾಗಳಲ್ಲಿ ಬಂದುಹೋಗಿವೆ, ಆದರೆ ನಿರ್ದೇಶಕರ/ಕಥೆಗಾರರ, ಸಂಭಾಷಣೆಕಾರರ ನಿರ್ಲಕ್ಷ್ಯತನ-ಬೇಜವಾಬ್ದಾರಿ ಇಲ್ಲೂ ಎದ್ದು ಕಾಣುತ್ತದೆ.

  'ಪುಟ್ಟಗೌರಿ' ನಂತರ 'ನಂದಿನಿ' ಮೇಲೆ ಹುಲಿದಾಳಿ: ಈ ನಂದಿನಿ ತುಂಬ ಪವರ್ ಫುಲ್.!

  ಈ ದೃಶ್ಯಗಳ ಅಗತ್ಯ ಏನಿತ್ತು.?

  ಈ ದೃಶ್ಯಗಳ ಅಗತ್ಯ ಏನಿತ್ತು.?

  ನಂತರ ಸಾಗರಿಯ ಹಿಂದೆ ಯುವಕ ಏಕೆ ಹೋಗುತ್ತಾನೆ ಮತ್ತು ಅಲ್ಲಿ ಹೋಗಿ ಆಕೆಯ ಚೀಲದಲ್ಲಿ ಸರವಿದೆಯೆಂದು ಹೇಳುವ ಅಗತ್ಯವೇನಿತ್ತು?! ಗೊತ್ತಿಲ್ಲ. ನಂತರ ನೋಡಿ, ಎಷ್ಟು ಹಾಸ್ಯಾಸ್ಪದವೆಂದರೆ, ಹತ್ತಾರು ಜನ ಆಕೆಯನ್ನು ಬೆನ್ನತ್ತಿ ಓಡೋಡಿ ಬರುತ್ತಾರೆ. ಅಷ್ಟೊಂದು ಜನ ಎಲ್ಲಿಂದ ಬಂದರು? ಅಂಗಡಿಯಲ್ಲಿ ಇಬ್ಬರೇ ಇದ್ದರಲ್ಲವೇ? ಅವರು ಬಂದಿದ್ದು ನೋಡಿದರೆ ಅಂಗಡಿಯ ಬಾಗಿಲನ್ನೂ ಮುಚ್ಚದೆ ಹಾಗೇ ತೆರೆದಿಟ್ಟು ಬಂದ ಹಾಗಿದೆ!

  ನಗು ಬಾರದೆ ಇರಲ್ಲ

  ನಗು ಬಾರದೆ ಇರಲ್ಲ

  ಅಂಗಡಿ ಮಾಲೀಕ ರಸ್ತೆಯಲ್ಲಿ ಓಡಿ ಬರುವುದು ನೋಡಿದರೆ ಚಾರ್ಲಿ ಚಾಪ್ಲಿನ್ ಸಿನಿಮಾಗಿಂತಲೂ ಹೆಚ್ಚು ನಗು ಬರುತ್ತದೆ. ಅಂಗಡಿಯಲ್ಲಿ ಒಂದು ವಾಹನವಿರಲಿಲ್ಲವೇ? ಕಳ್ಳತನ ಆಯಿತೆಂದು ಗೊತ್ತಾದ ತಕ್ಷಣ ಯಾವುದಕ್ಕೂ ಇರಲಿ ಎಂದು ಬೀಟ್ ಪೋಲಿಸರಿಗೆ ಫೋನ್ ಮಾಡುತ್ತಾರೆ. ಅವೆಲ್ಲಾ ಇಲ್ಲಿ ಕಂಪ್ಲೀಟ್ಲಿ ಇಗ್ನೋರ್ಡ್. ಆಮೇಲೆ ಸಾಗರಿಯ ಚೀಲದಲ್ಲಿ ಸರವಿದೆ ಎಂದು ಖಾತ್ರಿಪಡಿಸಿಕೊಳ್ಳದೇ, ಅವಳನ್ನು ಹಿಗ್ಗಾಮುಗ್ಗಾ ಹೊಡೆಯುತ್ತಾರೆ. ಅಬ್ಬಾ! ಅಂತೂ ಅಲ್ಲಿಗೆ ಅಂದಿನ ಕಂತನ್ನು ಮುಗಿಸಿದರು.

  ಅರ್ಥವಿಲ್ಲದ ಸೀರಿಯಲ್ ಗಳು

  ಅರ್ಥವಿಲ್ಲದ ಸೀರಿಯಲ್ ಗಳು

  ಇಂಥಾ ಧಾರಾವಾಹಿಗಳನ್ನೇ ಮನೆಮಂದಿಯೆಲ್ಲಾ ಕುಳಿತು ನೋಡುತ್ತಾರೆ. ಯಾರದ್ದೋ ಮನೆಯಲ್ಲಿ ಧಾರಾವಾಹಿ ನೋಡುತ್ತಿರುವಂತೆಯೇ ಕಳ್ಳತನವೂ ಆಯಿತಂತೆ. ಅಂದರೆ ಎಷ್ಟು ಮುಗ್ಧತೆಯಿಂದ ನೋಡುತ್ತಾರೆ ನಮ್ಮ ಮನೆಮಂದಿ? ಇಂಥಾ ಮುಗ್ಧತೆಯನ್ನೇ ಬಂಡವಾಳವನ್ನಾಗಿಸಿಕೊಂಡ ಈಗಿನ ಧಾರಾವಾಹಿ ಮಂದಿ ಎಂತೆಂಥದೋ ಕಥೆ, ಸನ್ನಿವೇಶಗಳನ್ನು ತುರುಕುತ್ತಾರೆ. ಇರಲಿ, ಇಂಥಾ ಧಾರಾವಾಹಿ ನೋಡುತ್ತಲೇ ಒಂದಷ್ಟು ಮಂದಿಯ ಟೈಂ ಪಾಸ್ ಆಗುತ್ತದೆ. ನಮ್ಮ ಮನೆಗಳ ಹಿರಿಯ ಜೀವಗಳಿಗೆ ಒಂದಷ್ಟು ಬೇಜಾರು ಕಳೆಯುವ ಸಾಧನ. ಸಣ್ಣ ಮಕ್ಕಳಿಂದ ಹಿಡಿದು ಅತ್ತೆ-ಸೊಸೆಯವರೆಗೂ ಎಂತೆಂಥಹಾ ಹೊಸ ಡೈಲಾಗುಗಳು ಅವತಾರ ಎತ್ತಿದ್ದಾವೆ ಅಂದರೆ ಅವಕ್ಕೆಲ್ಲಾ ಕಾರಣ ಇವೇ ಅರ್ಥವಿಲ್ಲದ ಸೀರಿಯಲ್ ಗಳು.

  ಮೊದಲೆಲ್ಲ ಹೀಗೆ ಇರಲಿಲ್ಲ

  ಮೊದಲೆಲ್ಲ ಹೀಗೆ ಇರಲಿಲ್ಲ

  ಮೊದಲೆಲ್ಲಾ ಧಾರಾವಾಹಿಗಳೆಂದರೆ ಸಿನೆಮಾಗಿಂತ ಭಿನ್ನವಾಗಿದ್ದವು, ನೈಜತೆಗೆ ಅತೀ ಹತ್ತಿರ ಇದ್ದವು. ರಾಮಾಯಣ, ಮಹಾಭಾರತ ಧಾರಾವಾಹಿಗಳು ಬರುತ್ತಿದ್ದಾಗ ಇಡೀ ಭಾರತವೇ ಸ್ಥಬ್ದವಾಗುತ್ತಿತ್ತು ಎಂಬ ಪ್ರಸಿದ್ಧ ಹೇಳಿಕೆಯಿದೆ. ಕನ್ನಡದಲ್ಲೂ ಕೆಲವು ಅತ್ಯುತ್ತಮ ಸೀರಿಯಲ್ ಗಳು ಬಂದವು. 'ಮುಕ್ತ ಮುಕ್ತ', 'ಪಾಪ ಪಾಂಡು', 'ಕ್ರೇಜಿ ಕರ್ನಲ್'...ಇತ್ಯಾದಿ. ಕನ್ನಡದವರನ್ನು ನೋಡಿ ಬೇರೆಯವರು ಕಲಿತುಕೊಂಡು ಹೋದರು. ಆಮೇಲೇನಾಯಿತೋ ಕಾಣೆ, ಅಂದಿನ ನಿರ್ದೇಶನ/ಕಥಾ ಕೌಶಲ್ಯ, ಉತ್ತಮ ಸಂಭಾಷಣೆ ಎಲ್ಲವೂ ಮರೆಯಾಗಿಹೋಗಿವೆ.

  ಸಭ್ಯತೆಯನ್ನು ಕುಲಗೆಡಿಸಿವೆ

  ಸಭ್ಯತೆಯನ್ನು ಕುಲಗೆಡಿಸಿವೆ

  ಈಗಿನ ಧಾರಾವಾಹಿಗಳಿಗೆ ಅಪ್ಪನಂತಿರುವ ಈಗಿನ ಸಿನೆಮಾಗಳು ಮನೆಮಂದಿಯ ಸಂಬಂಧಗಳನ್ನು, ಸಭ್ಯತೆಯನ್ನು ಕುಲಗೆಡಿಸಿವೆ. ನೈಜತೆಯನ್ನು ಬಯಸುವ ಮಂದಿ ಯಾರು ನೋಡಿದರೂ ಇನ್ನೊಂದು ದಿನ ನೋಡಿಸಿಕೊಳ್ಳದ ಸೀರಿಯಲ್ ಗಳು ಇವು. ಬಹುಶಃ ಈಗಿನ ಧಾರಾವಾಹಿಗಳನ್ನು ಅಷ್ಟಕ್ಕೆ ಮಾತ್ರ ಸೀಮಿತವಾಗಿರಿಸಬೇಕು! ಅಲ್ಲೇ ನೋಡಿ ಅಲ್ಲೇ ಮರೆಯಬೇಕು.

  ವೀಕ್ಷಕರ ಅಸಹಾಯಕತೆ

  ವೀಕ್ಷಕರ ಅಸಹಾಯಕತೆ

  ಟಿ.ವಿ.ಯಲ್ಲಿ ನೋಡಲು ಬೇಕಾದಷ್ಟು ಅತ್ಯುತ್ತಮ ವಿಷಯಗಳು ಬರುತ್ತವೆ. ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್, ಪ್ರವಾಸದ ಚಾನೆಲ್ ಗಳು, ಸಂಗೀತ, ಸಾಹಿತ್ಯ, ನೃತ್ಯ, ಭಕ್ತಿರಸ, ಆಟ, ಸಮಾಚಾರ ಹೀಗೆ ಹಲವು ಹತ್ತು ಸದಭಿರುಚಿಗಳು. ಎಲ್ಲವೂ ಅವರವರ ಅಭಿರುಚಿಗೆ ಬಿಟ್ಟಿದ್ದಾದರೂ ಕೂಡ, ಇವುಗಳನ್ನು ನೋಡಿದಾಗ ನಮ್ಮ ಮನೆಯಲ್ಲೇ ಕುಳಿತು ಪ್ರಪಂಚವನ್ನು ಅರಿಯಬಹುದು, ನಮ್ಮ ಸಾಮಾನ್ಯ ಬುದ್ಧಿಮತ್ತೆ ಅಗಾಧವಾಗಿ ಬೆಳೆಯುವುದರ ಜತೆಗೆ ಏಕತಾನತೆಯಲ್ಲದ ಬಹುರೂಪಿ ಮನರಂಜನೆ ದೊರೆಯುವುದು.ಪಾಪ, ನನ್ನ ಜತೆ ಮಾತನಾಡುತ್ತಿದ್ದ ಹಿರಿಯರೊಬ್ಬರು, "ಎಲ್ಲಾ ಧಾರಾವಾಹಿಗಳೂ ಹೆಚ್ಚು ಕಮ್ಮಿ ಹೀಗೇ ಇರುತ್ತವೆ, ನಮಗೂ ಹೇಗೋ ಒಂದು ಹೊತ್ತು ಟೈಂ ಪಾಸ್ ಆಗುತ್ತದೆ ಅಷ್ಟೇ" ಎಂದು ಅಸಹಾಯಕತೆಯಿಂದ ನುಡಿದರು. ಅವರು ಹೇಳುವುದೂ ನಿಜ, ಟಿವಿಯ ರಿಮೋಟ್ ಇವರ ಕೈಯಲ್ಲೆಲ್ಲಿರುವುದಿಲ್ಲವಲ್ಲ?!

  -ವೆಂಕಟೇಶ ದೊಡ್ಮನೆ, ತಲಕಾಲಕೊಪ್ಪ.

  BE (Mech) , MBA (Mktg), MA(Journalism).

  English summary
  Oneindia Reader Venkatesh's opinion on Kannada serials.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X