ಕಿರುತೆರೆಯಲ್ಲಿ ಒಂದಾದ ಮಾನಸ ಸರೋವರ ಜೋಡಿ ; ಗೌರಿ ಶಂಕರದಲ್ಲಿ ಪದ್ಮಾ ವಾಸಂತಿ.!
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ "ಗೌರಿಶಂಕರ" ವೂ ಒಂದು. ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ "ಗೌರಿಶಂಕರ" ಧಾರಾವಾಹಿಯಲ್ಲಿ ಇದೀಗ ಹೊಸ ಅಧ್ಯಾಯ ಶುರುವಾಗಿದೆ. ಈ ಹೊಸ ಅಧ್ಯಾಯದಲ್ಲಿ ಕಥೆಯಲ್ಲಿ ಒಂದು ಚೂರು ಬದಲಾವಣೆಯಾಗಿದೆ. ಇದರ ಜೊತೆಗೆ ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಪದ್ಮಾವಾಸಂತಿ ಅವರು ಈ ಧಾರಾವಾಹಿಯ ತಂಡ ಸೇರಿಕೊಂಡಿದ್ದಾರೆ. ಜೊತೆಗೆ ಶ್ರೀನಾಥ್ ಕೂಡಾ!
"ಮಾನಸ ಸರೋವರ" ಸಿನಿಮಾದಲ್ಲಿ ವಸಂತಿ ಆಗಿ ನಟಿಸುವ ಮೂಲಕ ನಟನೆಯ ನಂಟು ಬೆಳೆಸಿಕೊಂಡವರು ಪದ್ಮಾವಾಸಂತಿ. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಈಕೆ ಸದ್ಯ ಕಿರುತೆರೆಯಲ್ಲಿಯೂ ನಟನಾ ಛಾಪನ್ನು ಪಸರಿಸುತ್ತಿದ್ದಾರೆ.

ಟಿ.ಎನ್ ಸೀತಾರಾಮ್ ಅವರ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ "ಮಾಯಾಮೃಗ" ಧಾರಾವಾಹಿಯಲ್ಲಿ ಶಾರದಾ ಆಲಿಯಾಸ್ ಚೌಕಾಸಿ ಶಾರದಾ ಆಗಿ ಇವರು ಕಾಣಿಸಿಕೊಂಡಿದ್ದರು. ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ "ಕಮಲಿ"ಯಲ್ಲಿ ನಾಯಕಿಯ ಅಜ್ಜಿ ಅನ್ನಪೂರ್ಣ ಮಹಾಜನ್ ಆಗಿ ನಟಿಸಿದರು. ಸುಮಾರು ನಾಲ್ಕು ವರ್ಷಗಳ ಕಾಲ ಅನ್ನಪೂರ್ಣ ಮಹಾಜನ್ ಆಗಿ ಅಭಿನಯಿಸಿದ್ದ ಪದ್ಮಾವಾಸಂತಿ ಅವರು ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಬೆಸ್ಟ್ ಅಜ್ಜಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಪ್ರೇಕ್ಷಕರು ಅವರನ್ನು ಮೆಚ್ಚಿಕೊಂಡದಕ್ಕೆ ಸಾಕ್ಷಿ.
ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಮಾನಸ ಸರೋವರ" ಧಾರಾವಾಹಿಯಲ್ಲಿಯೂ ಪದ್ಮಾವಾಸಂತಿ ಅಭಿನಯಿಸುದರು. ಅಷ್ಟೇ ಅಲ್ಲದೇ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಗದೊಂದು ಧಾರಾವಾಹಿ "ಕಸ್ತೂರಿ ನಿವಾಸ" ಧಾರಾವಾಹಿಯಲ್ಲಿ ಲಕ್ಕಿ ಮಾ ಆಗಿ ನಟಿಸಿದರು ಪದ್ಮಾವಾಸಂತಿ.
"ಕಮಲಿ" ಧಾರಾವಾಹಿಯ ನಂತರ ಸಹಜವಾಗಿ ಕಿರುತೆರೆಯಿಂದ ದೂರವಿದ್ದ ಈಕೆ ನಂತರ ನಟಿಸಿದ್ದು "ಪ್ರೀತಿಯ ಅರಸಿ" ಧಾರಾವಾಹಿಯಲ್ಲಿ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಪ್ರೀತಿಯ ಅರಸಿ" ಧಾರಾವಾಹಿಯಲ್ಲಿ ನಾಯಕಿ ಅಂಜಲಿಯ ಅಜ್ಜಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಮರಳಿದ್ದರು ಈಕೆ. ಇದೀಗ "ಗೌರಿಶಂಕರ" ಧಾರಾವಾಹಿಯಲ್ಲಿ ಪದ್ಮಾವಾಸಂತಿ ನಟಿಸುತ್ತಿದ್ದು ಶ್ರೀನಾಥ್ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಕಿರುತೆರೆ ವೀಕ್ಷಕರಿಗೂ ಖುಷಿ ತಂದಿದೆ.
ಈಗಾಗಲೇ ಬಿಡುಗಡೆಯಾಗಿರುವ "ಗೌರಿಶಂಕರ" ಪ್ರೋಮೋದಲ್ಲಿ ಪದ್ಮಾವಾಸಂತಿಯನ್ನು ಇವರು ಕಂಡಿತ್ತು ಯಾವ ರೀತಿ ಇವರ ಪಾತ್ರ ಸಾಗಲಿದೆ ಎಂಬ ಕುತೂಹಲವೂ ವೀಕ್ಷಕರಿಗಿದೆ. ಒಟ್ಟಿನಲ್ಲಿ ಮತ್ತೆ ಕಿರುತೆರೆಗೆ ಮರಳಿರುವ ಪದ್ಮಾವಾಸಂತಿ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಹೌದು, ತಮ್ಮ ಮೊದಲ ಸಿನಿಮಾ "ಮಾನಸ ಸರೋವರ" ಕ್ಕೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ "ಉತ್ತಮ ನಟಿ" ಪ್ರಶಸ್ತಿಯನ್ನು ಇವರು ಪಡೆದುಕೊಂಡಿದ್ದಾರೆ.
"ಧರಣಿ ಮಂಡಲ ಮಧ್ಯದೊಳಗೆ", " ಅಮೃತಘಳಿಗೆ", "ಬೆಟ್ಟದ ಹೂ", " ಶಿವ ಭಕ್ತ ಮಾರ್ಕಂಡೇಯ" ಹೀಗೆ 120 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಪದ್ಮಾವಾಸಂತಿ ಅಭಿನಯಿಸಿದ್ದಾರೆ. 2021ರಲ್ಲಿ ತೆರೆಕಂಡಿರುವಂತಹ "ಗೋವಿಂದ ಗೋವಿಂದ" ಸಿನಿಮಾದಲ್ಲಿ ರತ್ಮಮ್ಮ ಆಗಿ ಕಾಣಿಸಿಕೊಂಡಿದ್ದ ಇವರು ನಂತರ ಸಿನಿರಂಗದಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ ಎಂದು ಹೇಳಿದರೆ ತಪ್ಪಾಗಲಾರದು.


Click it and Unblock the Notifications