Padma Vasanthi: 'ಪ್ರೀತಿಯ ಅರಸಿ' ಧಾರಾವಾಹಿ ಮೂಲಕ ಕಿರುತೆರೆಗೆ ಮರಳಿದ ಹಿರಿಯ ನಟಿ ಪದ್ಮವಾಸಂತಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಕಮಲಿ'ಯೂ ಒಂದು. 'ಕಮಲಿ' ಧಾರಾವಾಹಿಯಲ್ಲಿ ನಾಯಕಿ ಕಮಲಿ ಅಜ್ಜಿ ಅನ್ನಪೂರ್ಣ ಮಹಾಜನ್ ಆಗಿ ಅಭಿನಯಿಸುತ್ತಿದ್ದ ಪದ್ಮವಾಸಂತಿ ಸಿನಿಮಾ ವೀಕ್ಷಕರಿಗಂತೂ ತೀರಾ ಪರಿಚಿತ ಹೆಸರು. 'ಮಾನಸ ಸರೋವರ' ಸಿನಿಮಾದಲ್ಲಿ ವಸಂತಿ ಆಗಿ ಅಭಿನಯಿಸುವ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಪದ್ಮವಾಸಂತಿ ಕಿರುತೆರೆಯಲ್ಲಿಯೂ ಮೋಡಿ ಮಾಡಿದ್ದಾರೆ.
ಟಿ.ಎನ್ ಸೀತಾರಾಮ್ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾಯಾಮೃಗ' ಧಾರಾವಾಹಿಯಲ್ಲಿ ಶಾರದಾ ಆಲಿಯಾಸ್ ಚೌಕಾಸಿ ಶಾರದಾ ಆಗಿ ಅಭಿನಯಿಸಿದ್ದ ಪದ್ಮವಾಸಂತಿ ಮುಂದೆ 'ಕಮಲಿ' ಧಾರಾವಾಹಿಯ ಅನ್ನಪೂರ್ಣ ಮಹಾಜನ್ ಆಗಿ ಕಾಣಿಸಿಕೊಂಡರು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಅನ್ನಪೂರ್ಣ ಮಹಾಜನ್ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಪದ್ಮವಾಸಂತಿ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಬೆಸ್ಟ್ ಅಜ್ಜಿ ಅನ್ನೋ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

'ಮಾನಸ ಸರೋವರ' ಧಾರಾವಾಹಿಯಲ್ಲಿ ನಟನೆ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಾನಸ ಸರೋವರ' ಧಾರಾವಾಹಿಯಲ್ಲಿಯೂ ಪದ್ಮವಾಸಂತಿ ನಟಿಸಿದ್ದು, ಅಲ್ಲೂ ವೀಕ್ಷಕರ ಮನ ಸೆಳೆದಿದ್ದರು. ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಲಕ್ಕಿ ಮಾ ಆಗಿ ಅಭಿನಯಿಸಿದ್ದ ಪದ್ಮವಾಸಂತಿ 'ಕಮಲಿ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಕೊಂಡಿದ್ದು ಕಡಿಮೆಯೇ!
ಪ್ರೀತಿಯ ಅರಸಿ ಮೂಲಕ ಕಂ ಬ್ಯಾಕ್
ಕಳೆದ ಒಂದು ವರ್ಷಗಳಿಂದ ಕಿರುತೆರೆಯಿಂದ ದೂರವಿದ್ದ ಪದ್ಮವಾಸಂತಿ ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಹೌದು, ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಪ್ರೀತಿಯ ಅರಸಿ'ಯಲ್ಲಿ ನಾಯಕಿ ಅಂಜಲಿಯ ಅಜ್ಜಿಯಾಗಿ ನಟಿಸುವ ಮೂಲಕ ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡಲಿದ್ದಾರೆ ಪದ್ಮವಾಸಂತಿ.

ರಾಜ್ಯ ಪ್ರಶಸ್ತಿ ಪಡೆದಿದ್ದಾರೆ ಪದ್ಮವಾಸಂತಿ
ಮೊದಲ ಸಿನಿಮಾ 'ಮಾನಸ ಸರೋವರ' ಕ್ಕೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ 'ಉತ್ತಮ ನಟಿ' ಪ್ರಶಸ್ತಿ ಪಡೆದಿರುವ ಪದ್ಮವಾಸಂತಿ ಮುಂದೆ 'ಧರಣಿ ಮಂಡಲ ಮಧ್ಯದೊಳಗೆ', 'ಅಮೃತಘಳಿಗೆ', 'ಬೆಟ್ಟದ ಹೂ', 'ಶಿವ ಭಕ್ತ ಮಾರ್ಕಂಡೇಯ' ಹೀಗೆ 120 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 2021ರಲ್ಲಿ ತೆರೆಕಂಡಿರುವಂತಹ 'ಗೋವಿಂದ ಗೋವಿಂದ' ಸಿನಿಮಾದಲ್ಲಿ ರತ್ಮಮ್ಮ ಆಗಿ ಕಾಣಿಸಿಕೊಂಡಿದ್ದ ಪದ್ಮವಾಸಂತಿ ತದ ನಂತರ ಹಿರಿತೆರೆಯಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಕಂ ಬ್ಯಾಕ್ ಖುಷಿ ಕೊಟ್ಟಿದೆ
ಇದೀಗ ಒಂದು ವರ್ಷದಿಂದ ನಟನೆಯ ನಂಟಿನಿಂದ ದೂರವಿರುವ ಪದ್ಮವಾಸಂತಿ ಅವರು ಹೊಸ ಧಾರಾವಾಹಿ, ಪಾತ್ರದ ಮೂಲಕ ಕಿರುತೆರೆಗೆ ಮರಳಿರುವುದು ಕಿರುತೆರೆ ವೀಕ್ಷಕರಿಗೂ ಖುಷಿ ಕೊಟ್ಟಂತಿದೆ. ಈಗಾಗಲೇ ಈ ಧಾರಾವಾಹಿಯ ಪ್ರೋಮೋ ಕೂಡಾ ಸಕತ್ ಸದ್ದು ಮಾಡುತ್ತಿದ್ದು ಧಾರಾವಾಹಿ ಪ್ರಸಾರವಾಗುವ ದಿನವನ್ನು ಎದುರು ನೋಡುತ್ತಿದ್ದಾರೆ.


Click it and Unblock the Notifications











