ಈಟಿವಿ ಕನ್ನಡ ಕಾರ್ಯಕ್ರಮಗಳಿಗೆ ಬಂದಿದೆ ಆನೆಬಲ

ಇನ್ನು ಈಟಿವಿ ಕನ್ನಡದ ಕಡೆ ಬಂದರೆ, ಕಲರ್ಸ್ ಚಾನೆಲ್ ಪ್ರಸಿದ್ಧಿ ಹಾಗೂ ಬೆಂಬಲ, ಪ್ರತಿಭಾನ್ವಿತ ಪರಮೇಶ್ವರ ಗುಂಡ್ಕಲ್ 'ಲೀಡರ್ ಶಿಪ್' ಜೊತೆಗೆ ಹೊಸ ಪ್ರತಿಭೆಗಳ ಆಗಮನದಿಂದ ಈಟೀವಿಯ ಕಾರ್ಯಕ್ರಮಗಳಲ್ಲಿ ಭಾರಿ ಬದಲಾವಣೆ ಬರುವುದು ಸಹಜ ಎನ್ನುತ್ತಿವೆ ಉದ್ಯಮದ ಮೂಲಗಳು. ಇದನ್ನೆಲ್ಲಾ ಈಗಾಗಲೇ ಊಹಿಸಿದಂತಿರುವ ಸುವರ್ಣ ವಾಹಿನಿ, ಪುನಃ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಜನವರಿ ಕೊನೆಯಲ್ಲಿ ಪ್ರಸಾರ ಮಾಡಲು ತೀರ್ಮಾನಿಸಿದೆ. ಈ ಮೊದಲಿನ ಕೋಟ್ಯಾಧಿಪತಿಗೆ ನಿರ್ದೇಶಕರಾಗಿದ್ದ ರಾಘವೇಂದ್ರ ಅವರಿಲ್ಲದೇ ಮುಂಬರುವ ಕೋಟ್ಯಾಧಿಪತಿ ಕಾರ್ಯಕ್ರಮ ಯಾವ ಮಟ್ಟಕ್ಕೆ ಯಶಸ್ವಿಯಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.
ಇತ್ತ ಇನ್ನೊಂದು ಪ್ರಮುಖ ಸ್ಪರ್ಧಿಯಾಗಿರುವ ಜೀ ಕನ್ನಡ ವಾಹಿನಿ, 'ಮಮ್ಮಿ ನಂಬರ್ ಒನ್' ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದೆ. ಜೊತೆಯಲ್ಲಿ ಈ ವಾರ ಕವಿತಾ ಲಂಕೇಶ್ ನಿರ್ದೇಶನದ 'ನನ್ನ ಪ್ರೀತಿಯ ಶ್ರೀಮತಿ' ಧಾರಾವಾಹಿಯ ಪ್ರಸಾರ ಆರಂಭವಾಗಿದೆ. ಅಷ್ಟೇ ಅಲ್ಲದೇ, ಈಗಾಗಲೇ ಟಿಆರ್ ಪಿ ಹಾಗೂ ಜನಪ್ರಿಯತೆಯಲ್ಲಿ ಮುಂದಿರುವ 'ರಾಧಾ ಕಲ್ಯಾಣ', 'ಪಾರ್ವತಿ ಪರಮೇಶ್ವರ', 'ಪಾಂಡುರಂಗ ವಿಠಲ' ಹಾಗೂ 'ಕನಕ' ಮುಂತಾದ ಧಾರಾವಾಹಿಗಳು ಎಂದಿನಂತೆ ಪ್ರಸಾರ ಮುಂದುವರಿಸಲಿವೆ. ಮುಂದಿನ ಬದಲಾವಣೆಗೆ ಸಂಚಲನ ಸೃಷ್ಟಿಯಾಗಿದೆ.
ಈಟಿವಿ ಹಾಗೂ ಸುವರ್ಣ ಚಾನೆಲ್ಲುಗಳಲ್ಲಾಗಿರುವ ಬೆಳವಣಿಗೆಯಿಂದ ಬಹಳಷ್ಟು ಆತಂಕಗೊಂಡಿರುವ ಉದಯ ಟೀವಿ ಹೊಸ ಪ್ರೋಗ್ರಾಮಿಂಗ್ ಹೆಡ್ ಹುಡುಕಾಟದಲ್ಲಿದೆ. ಅಷ್ಟೇ ಅಲ್ಲ, ಇತ್ತೀಚಿಗೆ ಉದಯ ಟಿವಿಯಲ್ಲಿ ಬರುತ್ತಿರುವ ಧಾರಾವಾಹಿಗಳ ಗುಣಮಟ್ಟ ಕುಸಿಯುತ್ತಿದೆ, ಅದಕ್ಕಾಗಿ ಕಿರುತೆರೆ ವೀಕ್ಷಕರು ಈಟಿವಿ, ಜೀಕನ್ನಡ ಹಾಗೂ ಸುವರ್ಣ ವಾಹಿನಿಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ಸಾರ್ವಜನಿಕರ ಅನಿಸಿಕೆಯನ್ನು ಸೀರಿಯಸ್ ಆಗಿ ತೆಗೆದುಕೊಂಡಿರುವ ಉದಯ ಟಿವಿ ಈಗ ಮಹತ್ವದ ಹೆಜ್ಜೆಯಿಡಲು ಸಜ್ಜಾಗುತ್ತಿದೆ.
ಮತ್ತೊಂದೆಡೆ, ಕಸ್ತೂರಿ ವಾಹಿನಿಯ ಅನಿತಾ ಕುಮಾರಸ್ವಾಮಿಯವರು ಇನ್ನೊಂದು ಸಲ ಕಸ್ತೂರಿಯನ್ನು ರೀಲಾಂಚ್ ಮಾಡಿ ಹೊಸ ಐದು ಹೊಸ ಧಾರಾವಾಹಿಗಳನ್ನು ಪ್ರಾರಂಭಿಸಿ ಯಶಸ್ವಿ ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಸದ್ಯಕ್ಕೆ ಧಾರಾವಾಹಿಗಳು ಹಾಗೂ ಕಾರ್ಯಕ್ರಮಗಳ ತಳಮಟ್ಟದಲ್ಲಿರುವ ಟಿಆರ್ ಪಿಯನ್ನು ಹೆಚ್ಚಿಸಿ ಯಶಸ್ಸು ಪಡೆದು ಟಿಆರ್ ಪಿ ಪಟ್ಟಿಯಲ್ಲಿ ಭಡ್ತಿ ಹೊಂದುವ ಪ್ರಯತ್ನದಲ್ಲಿದ್ದಾರೆ ಅನಿತಾ ಕುಮಾರಸ್ವಾಮಿ.
ಒಟ್ಟಿನಲ್ಲಿ ಕನ್ನಡದ ಮನರಂಜನೆ ವಾಹಿನಿಗಳಲ್ಲಿ ಇದೀಗ ಆರಂಭವಾಗಿರುವ ಸ್ಪರ್ಧೆಯಿಂದ ಪ್ರೇಕ್ಷಕರು ಕನ್ನಡದ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಹೊಸತನವನ್ನಂತೂ ಖಂಡಿತಾ ನಿರೀಕ್ಷೆ ಮಾಡಬಹುದು. ಜೊತೆಗೆ ವಾಹಿನಿಗಳ ಟಿಆರ್ ಪಿ ರೇಟಿಂಗ್ ನಲ್ಲೂ ಸ್ಥಾನಪಲ್ಲಟ ಗ್ಯಾರಂಟಿ ಎನ್ನುತ್ತಿವೆ ಕಿರುತೆರೆ ಮೂಲಗಳು. ಸದ್ಯದಲ್ಲೇ ಆಗಲಿರುವ ಈ ಬದಲಾವಣೆಗಳ ಕ್ಷಣಕ್ಕೆ ಕಾಯಲಾಗುತ್ತಿದೆ ಅಷ್ಟೇ!... (ಒನ್ ಇಂಡಿಯಾ ಕನ್ನಡ)


Click it and Unblock the Notifications











