'ಅರಮನೆ ಗಿಳಿ' ತಂಡದ ಜೊತೆಯಾದ ನಟಿ ಪದ್ಮಜಾ ರಾವ್
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅರಮನೆ ಗಿಳಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯೊಬ್ಬರು ಬದಲಾಗುತ್ತಿದ್ದಾರೆ. ನಟಿ ಪವಿತ್ರಾ ಲೋಕೇಶ್ ಅವರು ನಿರ್ವಹಿಸುತ್ತಿದ್ದ ಪಾತ್ರಕ್ಕೆ ಮತ್ತೊಬ್ಬ ನಟಿ ಆಯ್ಕೆಯಾಗಿದ್ದಾರೆ.
'ಅರಮನೆ ಗಿಳಿ' ಧಾರಾವಾಹಿಯಲ್ಲಿ ಮೀನಾಕ್ಷಮ್ಮನ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಇಷ್ಟು ದಿನ ಪವಿತ್ರಾ ಲೋಕೇಶ್ ಈ ಪಾತ್ರಕ್ಕೆ ಜೀವ ನೀಡಿದ್ದರು. ಇನ್ಮುಂದೆ ಪವಿತ್ರಾ ಅವರ ಬದಲು ಈ ಪಾತ್ರದಲ್ಲಿ ಪದ್ಮಜಾ ರಾವ್ ಅಭಿನಯಿಸಲಿದ್ದಾರೆ.
ದಿಢೀರ್ ಅಂತ ಈ ಬದಲಾವಣೆ ಯಾಕೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದ್ರೆ, ಪದ್ಮಜಾ ರಾವ್ ಕೂಡ ಉತ್ತಮ ಆಯ್ಕೆ ಎಂಬ ಅಭಿಪ್ರಾಯ ಪ್ರೇಕ್ಷಕರ ವಲಯದಲ್ಲಿದೆ.

ಆಗಸ್ಟ್ 19, ಸೋಮವಾರದಿಂದ ಧಾರಾವಾಹಿಯಲ್ಲಿ ಈ ಬದಲಾವಣೆಯಾಗಲಿದೆ. 'ಅರಮನೆ ಗಿಳಿ' ಧಾರಾವಾಹಿ ಸೋಮವಾರದಿಂದ ಶನಿವಾರದವೆರೆಗೆ ರಾತ್ರಿ 9ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ವರ್ಷಿಕಾ, ಯೋಗೇಶ್, ಸಿಂಧು ಕಲ್ಯಾಣ್, ಕಿರ್ಲೋಸ್ಕರ್ ಸತ್ಯ ಅವರು 'ಅರಮನೆ ಗಿಳಿ' ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ನಾಗರಾಜ್ ಉಪ್ಪುಂದ ನಿರ್ದೇಶಿಸುತ್ತಿದ್ದಾರೆ.


Click it and Unblock the Notifications











