ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ಪ್ರಕರಣ: ಕೊನೆಗೂ ಮೌನ ಮುರಿದ ನಟ ಪರ್ಲ್
ಅಪ್ರಾಪ್ತೆ ಮೇಲೆ ಅತ್ಯಾಚಾರ ಮತ್ತು ಕಿರುಕುಳ ಆರೋಪದಡಿ ಬಂಧಕ್ಕೊಳಕ್ಕಾಗಿ ಜಾಮೀನಿನ ಮೇಲೆ ಹೊರಬಂದಿರುವ ಹಿಂದಿ ಕಿರುತೆರೆಯ ಖ್ಯಾತ ನಟ ಪರ್ಲ್ ವಿ ಪುರಿ ಕೊನೆಗೂ ಮೌನ ಮುರಿದಿದ್ದಾರೆ. ಹಿಂದಿ ಕಿರುತೆರೆ ಜಗತ್ತನ್ನು ಬೆಚ್ಚಿ ಬೀಳಿಸಿದ ಪ್ರಕರಣದ ಬಗ್ಗೆ ಪರ್ಲ್ ಮೊದಲ ಬಾರಿಗೆ ಮಾತನಾಡಿದ್ದಾರೆ.
ಒಂದು ಕಡೆ ತನ್ನ ಮೇಲಿರುವ ಆರೋಪ ಮತ್ತೊಂದೆಡೆ ಕ್ಯಾನ್ಸರ್ ಪೀಡಿತ ತಾಯಿಯ ಕಾಳಜಿ ಎರಡರ ಮಧ್ಯೆ ಸಿಲುಕಿ ಒದ್ದಾಡುತ್ತಿರುವುದಾಗಿ ಪರ್ಲ್ ಹೇಳಿದ್ದಾರೆ. ದೇಶದ ಕಾನೂನಿನ ಬಗ್ಗೆ ನಂಬಿಕೆ ಇದೆ, ಸತ್ಯ ಹೊರಬರಲಿದೆ ಎಂದಿರುವ ಪರ್ಲ್, ಕಷ್ಟದ ಸಮಯದಲ್ಲಿ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ನಟ ಪರ್ಲ್, "ಜೀವನ ಜನರನ್ನು ಪರೀಕ್ಷಿಸುವ ತನ್ನದೇ ಆದ ಮಾರ್ಗವನ್ನು ಹೊಂದಿದೆ. ಕೆಲವು ತಿಂಗಳ ಹಿಂದೆ ನಾನು ನನ್ನ ನಾನಿಮಾ ಅವರನ್ನು ಕಳೆದುಕೊಂಡೆ. ಬಳಿಕ 17 ದಿನಗಳಲ್ಲೇ ನನ್ನ ತಂದೆಯನ್ನು ಕಳೆದುಕೊಂಡೆ. ಬಳಿಕ ತಾಯಿಗೆ ಕ್ಯಾನ್ಸರ್ ಇರುವ ವಿಚಾರ ಗೊತ್ತಾಯಿತು. ನಂತರ ಘೋರ ಆರೋಪ. ಕೊನೆಯ ಎರಡು ವಾರಗಳು ನನಗೆ ದುಃಸ್ವಪ್ನದಂತೆ ಭೀಕರವಾಗಿದ್ದವು" ಎಂದಿದ್ದಾರೆ.

"ನಾನು ರಾತ್ರೋರಾತ್ರಿ ಅಪರಾಧಿಯಂತೆ ಭಾವಿಸಲಾಗಿದೆ. ಇದೆಲ್ಲ ನನ್ನ ತಾಯಿಯ ಕ್ಯಾನ್ಸರ್ ಚಿಕಿತ್ಸೆಯ ಮಧ್ಯೆ, ನನ್ನ ಸುರಕ್ಷತೆಯ ಪ್ರಜ್ಞೆಯನ್ನು ಚೂರು ಚೂರು ಮಾಡಿತು. ಇದೆಲ್ಲ ನನಗೆ ಅಸಹಾಯಕನ ಹಾಗೆ ಮಾಡಿತ್ತು. ಈ ಸಮಯದಲ್ಲೂ ನನ್ನ ಸ್ನೇಹಿತರು, ಅಭಿಮಾನಿಗಳು ಮತ್ತು ಹಿತೈಷಿಗಳು ನೀಡಿದ ಪ್ರೀತಿ, ಬೆಂಬಲ ಮತ್ತು ಕಾಳಜಿ ತೋರಿಸಿದ್ದೀರಿ. ಧನ್ಯವಾದಗಳು. ನಾನು ಸತ್ಯಮೇವ ಜಯತೆ ಮೇಲೆ ನಂಬಿಕೆ ಇಟ್ಟಿದ್ದೀನಿ. ನನ್ನ ದೇಶದ ಕಾನೂನು, ನ್ಯಾಯಾಂಗ ಮತ್ತು ದೇವರ ಮೇಲೆ ನನಗೆ ನಂಬಿಕೆ ಇದೆ" ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ 2019ರಲ್ಲಿ ಧಾರಾವಾಹಿಯಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ, ಬಾಲಕಿ ಮೇಲೆ ಅತ್ಯಾಚಾರ ವೆಸಗಿದ್ದರು ಮತ್ತು ಕಿರುಕುಳ ನೀಡಿದ್ದರು ಎಂದು ಸಂತ್ರಸ್ತೆ ಕುಟುಂಬದವರು ಆರೋಪ ಮಾಡಿ ಪರ್ಲ್ ವಿರುದ್ಧ ದೂರು ದಾಖಲಿಸಿದ್ದರು.

ಜೂನ್ 15ರಂದು ಪರ್ಲ್ ವಿ ಪುರಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಪರ್ಲ್ 11 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದರು. ಪರ್ಲ್ ವಿರುದ್ಧ ಪುರಿ ವಿರುದ್ಧ ಸೆಕ್ಷನ್ 376 ಮತ್ತು 2012ರ ಪೋಕ್ಸೋ ಕಾಯ್ದೆಯಡೆ ಪ್ರಕರಣ ದಾಖಲಾಗಿದೆ. ಪರ್ಲ್ ವಿ ಪುರಿ ಬಂಧನ ಖಂಡಿಸಿ ಕಿರುತೆರೆಯ ಅನೇಕ ಕಲಾವಿದರು ಬೇಸರ ವ್ಯಕ್ತಪಡಿಸಿದ್ದರು. ಅನೇಕ ಸಹ ಕಲಾವಿದರು ಪರ್ಲ್ ಬೆಂಬಲಕ್ಕೆ ನಿಂತಿದ್ದರು.


Click it and Unblock the Notifications











