ವರ್ತೂರು ಸಂತೋಷ್‌ಗೆ ಸನ್ಮಾನ ಮಾಡಿದ್ದ ಪೊಲೀಸ್ ಎಸ್‌ಐ ದಿಢೀರ್ ವರ್ಗಾವಣೆ
ಬಿಗ್‌ಬಾಸ್ ಕನ್ನಡ ಸೀಸನ್ 10 ಮುಗಿದು 2 ವಾರ ಕಳೆದರೂ ಸ್ಪರ್ಧಿಗಳ ಹಂಗಾಮ ಕಮ್ಮಿ ಆಗಿಲ್ಲ. ಈ ಬಾರಿ ದೊಡ್ಮನೆಗೆ ಹೋಗಿ ಬಂದ ಸ್ಪರ್ಧಿಗಳು ನಿಂತ್ರು ಕುಂತ್ರು ಸುದ್ದಿ ಆಗುತ್ತಿದೆ. ಅದರಲ್ಲೂ ವರ್ತೂರು ಸಂತೋಷ್ ಕ್ರೇಜ್ ಜೋರಾಗಿಯೇ ಇದೆ. ಇತ್ತೀಚೆಗೆ ಹೊಸಕೋಟೆ ಸುತ್ತಾಮುತ್ತಾ ಸಂತೋಷ್ ಮೆರವಣೆಗೆ ನಡೆಸಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು.
ವರ್ತೂರು ಸಂತೋಷ್‌ಗೆ ಸನ್ಮಾನ ಮಾಡುವವರ ಸಂಖ್ಯೆಯೇನು ಕಮ್ಮಿಯಿಲ್ಲ. ಇತ್ತೀಚೆಗೆ ವರ್ತೂರು ಪೊಲೀಸ್ ಠಾಣೆ ಎಸ್ಐ ತಿಮ್ಮರಾಯಪ್ಪ ಅವರು ವರ್ತೂರ್ ಸಂತೋಷ್‌ಗೆ ಸನ್ಮಾನ ಮಾಡಿದ್ದು ಭಾರೀ ಚರ್ಚೆ ಹುಟ್ಟುಹಾಕಿತ್ತು. ಸೆರೆವಾಸ ಅನುಭವಿಸಿ ಬಂದ ಆರೋಪಿಗೆ ಸಮವಸ್ತ್ರದಲ್ಲಿ ಆತ ಇದ್ದ ಸ್ಥಳಕ್ಕೆ ಹೋಗಿ ಪೊಲೀಸ್ ಅಧಿಕಾರಿ ಒಬ್ಬರು ಸನ್ಮಾನ ಮಾಡುವ ಅಗತ್ಯ ಏನಿತ್ತು ಎಂದು ಕೆಲವರು ಪ್ರಶ್ನಿಸಿದ್ದರು. ಇದೆಲ್ಲದರ ಬೆನ್ನಲ್ಲೇ ಎಸ್ಐ ತಿಮ್ಮರಾಯಪ್ಪ ಅವರಿಗೆ ವರ್ಗಾವಣೆ ಶಿಕ್ಷೆ ಎದುರಾಗಿದೆ.

ಈ ಬಾರಿ ಕಾರ್ತಿಕ್ ಮಹೇಶ್ ಬಿಗ್‌ಬಾಸ್ ಟ್ರೋಫಿ ಗೆದ್ದರೂ ವರ್ತೂರು ಸಂತೋಷ್ ಹವಾ ಜೋರಾಗಿದೆ. ಬಿಗ್‌ಬಾಸ್ ಶೋ ನಡುವೆಯೇ ಹುಲಿ ಉಗುರು ಹೊಂದಿದ್ದ ಕಾರಣಕ್ಕೆ ಜೈಲುವಾಸ ಕೂಡ ಅನುಭವಿಸಿ ಬಂದಿದ್ದರು. ದೊಡ್ಮನೆಯಿಂದಲೇ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದ ಸಂತೋಷ್ ಮತ್ತೆ ಶೋಗೆ ಎಂಟ್ರಿ ಕೊಟ್ಟಿದ್ದರು.
ಶೋ ನಡುವೆಯೇ ನಾನು ಮನೆಯಿಂದ ಹೊರ ಬರುತ್ತೇನೆ ಎಂದು ಹಠ ಹಿಡಿದಿದ್ದರು. ಕಿಚ್ಚ ಸುದೀಪ್ ಎಷ್ಟೇ ಹೇಳಿದರೂ ಕೇಳಿರಲಿಲ್ಲ. ಬಳಿಕ ಖುದ್ದು ಸಂತೋಷ್ ತಾಯಿ ಒಳಗೆ ಹೋಗಿ ಮಗನನ್ನು ಸಮಾಧಾನ ಪಡಿಸಿ ಶೋನಲ್ಲಿ ಮುಂದುವರೆಯುವಂತೆ ಮನವೊಲಿಸಿದ್ದರು. ಬಳಿಕ ಚೆನ್ನಾಗಿ ಆಡಿದ್ದ ವರ್ತೂರು ಸಂತೋಷ್ ಗ್ರ್ಯಾಂಡ್ ಫಿನಾಲೆ ತಲುಪಿದ್ದರು. 4ನೇ ರನ್ನರ್ ಅಪ್ ಆಗಿ ಹೊರಗೆ ಬಂದಿದ್ದರು.
ಹಳ್ಳಿಕಾರ್ ಒಡೆಯ ಎಂದು ಜನಪ್ರಿಯತೆ ಗಳಿಸಿರುವ ವರ್ತೂರು ಸಂತೋಷ್ ಸಾಕಷ್ಟು ಜಾನುವಾರುಗಳನ್ನು ಸಾಕಿದ್ದಾರೆ. ಮುಖ್ಯವಾಗಿ ಹಳ್ಳಿಕಾರ್ ತಳಿ ದನಗಳನ್ನು ಸಾಕಣೆಯಿಂದ ಗಮನ ಸೆಳೆದಿದ್ದಾರೆ. ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವರ್ತೂರು ಸಂತೋಷ್ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಹಳ್ಳಿಕಾರ್ ರೇಸ್ ನಡೆಸುವ ಮೂಲಕವೂ ಸದ್ದು ಮಾಡುತ್ತಿದ್ದಾರೆ.

ಇನ್ನು ನೇರಾನೇರ ಮಾತಿನಿಂದ ವರ್ತೂರು ಸಂತೋಷ್ ಹೆಚ್ಚು ಸದ್ದು ಮಾಡುತ್ತಾ ಬರ್ತಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದಮೇಲೆ ಸಂತೋಷ್ ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ವರ್ತೂರು ಪೊಲೀಸ್ ಠಾಣೆಯ ಎಸ್ಐ ತಿಮ್ಮರಾಯಪ್ಪ ಅವರು ವರ್ತೂರ್ ಸಂತೋಷ್‌ಗೆ ಸನ್ಮಾನ ಮಾಡಿ ಅಭಿನಂದಿಸಿದ್ದರು. ಈ ಬಗ್ಗೆ ಕೆಲವರು ಚಕಾರ ಎತ್ತಿದ್ದರು. ಪೊಲೀಸ್ ಸಮವಸ್ತ್ರದಲ್ಲಿ ಸಂತೋಷ್ ಇರುವ ಸ್ಥಳಕ್ಕೆ ಹೋಗಿ ಪೊಲೀಸ್ ಅಧಿಕಾರಿ ಸನ್ಮಾನ ಮಾಡಿದ್ದು ಸರಿಯಲ್ಲ ಎನ್ನುವ ಚರ್ಚೆ ನಡೀತಿದೆ.
ಎಸ್ಐ ತಿಮ್ಮರಾಯಪ್ಪ ಅವರನ್ನು ಬೆಂಗಳೂರು ನಗರ ಪೊಲೀಸ್ ಕಮೀಷನರ್ ದಯಾನಂದ್ ದಿಢೀರ್ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಈ ದಿಢೀರ್ ವರ್ಗಾವಣೆ ಭಾರೀ ಅಚ್ಚರಿಗೆ ಕಾರಣವಾಗಿದೆ.
ವರ್ತೂರು ಪೊಲೀಸ್ ಠಾಣೆಯಿಂದ ಆಡುಗೋಡಿ ಪೊಲೀಸ್ ಠಾಣೆಗೆ ಎಸ್ಐ ತಿಮ್ಮರಾಯಪ್ಪ ವರ್ಗಾವಣೆ ಆಗಿದೆ. ಹುಲಿ ಉಗುರು ಹೊಂದಿದ್ದ ಕಾರಣಕ್ಕೆ ಜೈಲಿಗೆ ಹೋಗಿಬಂದಿದ್ದ ವರ್ತೂರು ಸಂತೋಷ್ ಅವರನ್ನು ಪೊಲೀಸ್ ಸಮವಸ್ತ್ರದಲ್ಲಿ ಸನ್ಮಾನಿಸಿದ್ದೇ ಈ ವರ್ಗಾವಣೆಗೆ ಕಾರಣ ಎಂದು ವರದಿಯಾಗಿದೆ.
ಈ ಬಾರಿ ಹಳ್ಳಿಕಾರ್ ರೇಸ್ ಅನ್ನು ಅದ್ಧೂರಿಯಾಗಿ ನಡೆಸಲು ವರ್ತೂರು ಸಂತೋಷ್ ಮುಂದಾಗಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ ಬಾರಿ ಹಳ್ಳಿಕಾರ್ ರೇಸ್‌ಗೆ ಕಿಚ್ಚ ಸುದೀಪ್ ಅತಿಥಿಯಾಗಿ ಹೋಗುವ ಸಾಧ್ಯತೆಯಿದೆ. ಬಿಗ್‌ಬಾಸ್ ವೇದಿಕೆಯಲ್ಲೇ ಕಿಚ್ಚನನ್ನು ಆಹ್ವಾನ ನೀಡಿದ್ದರು. ಇನ್ನು ಬಿಗ್‌ಬಾಸ್ ಸ್ಪರ್ಧಿಗಳು ಸಹ ಭಾಗಿ ಆಗುವುದು ಪಕ್ಕಾ ಆಗಿದೆ. ತುಕಾಲಿ ಸಂತು ಹಾಗೂ ಪತ್ನಿ ಮಾನಸಾ ಇಡೀ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಧ್ರುವ ಸರ್ಜಾ ಕೂಡ ಈ ಬಾರಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುವ ನಿರೀಕ್ಷೆಯಿದೆ.


Click it and Unblock the Notifications











