ನಿತೇಶ್ ಪಾಂಡೆ: ಬಾಲಿವುಡ್‌ಗೆ ಮತ್ತೊಂದು ಆಘಾತ.. ಜನಪ್ರಿಯ ನಟ ನಿತೇಶ್ ಪಾಂಡೆ ನಿಧನ
ಹಿಂದಿ ಕಿರುತೆರೆಯಲ್ಲಿ ಸಾವಿನ ಸರಣಿ ಮುಂದುವರೆದಿದೆ. ನಟ- ನಟಿಯರು ಒಬ್ಬರ ಹಿಂದೆ ಒಬ್ಬರು ಅಕಾಲಿಕವಾಗಿ ಕೊನೆಯುಸಿರೆಳೆಯುತ್ತಿದ್ದಾರೆ. ಅಪಘಾತದಲ್ಲಿ ನಟಿ ವೈಭವಿ ಉಪಾಧ್ಯಾಯ ಮೃತಪಟ್ಟ ಸುದ್ದಿ ತಣ್ಣಗಾಗುವ ಮೊದ್ಲೆ ನಟ ನಿತೇಶ್ ಪಾಂಡೆ(51) ಅಗಲಿಕೆಯ ಸುದ್ದಿ ಬಂದಿದೆ. ದಶಕಗಳಿಂದ ಹಿಂದಿ ಕಿರುತೆರೆಯಲ್ಲಿ ಗುರ್ತಿಸಿಕೊಂಡಿದ್ದ ನಿತೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇದು ಬಾಲಿವುಡ್‌ಗೆ ದಿಗ್ಭ್ರಮೆ ಉಂಟು ಮಾಡಿದೆ.
ನಿತೇಶ್ ಪಾಂಡೆ ಮಹಾರಾಷ್ಟ್ರದ ನಾಸಿಕ್‌ನ ಇಗತ್‌ಪುರಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಸಾವಿಗೆ ಹೃದಯಾಘಾತವೇ ಕಾರಣ ಎನ್ನಲಾಗ್ತಿದೆ. ಪೊಲೀಸರು ಹೋಟೆಲ್‌ಗೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ಇನ್ನು ಹೋಟೆಲ್ ಸಿಬ್ಬಂದಿ ಮತ್ತು ನಿತೇಶ್ ಆಪ್ತರ ಬಳಿ ಪೊಲೀಸರು ಮಾಹಿತಿ ಪಡೆಯುತ್ತಿದ್ಧಾರೆ. ನಿತೇಶ್ ಅಗಲಿಕೆಗೆ ಬಾಲಿವುಡ್, ಹಾಗೂ ಹಿಂದಿ ಕಿರುತೆರೆ ಸೆಲೆಬ್ರೆಟಿಗಳು ಕಂಬನಿ ಮಿಡಿಯುತ್ತಿದ್ದಾರೆ.

90ರ ದಶಕದ ಆರಂಭದಲ್ಲಿ ನಿತೇಶ್ ಪಾಂಡೆ ಹಿಂದಿ ರಂಗಭೂಮಿಯಲ್ಲಿ ಗುರ್ತಿಸಿಕೊಂಡರು. ಸಾಕಷ್ಟ ನಾಟಕಗಳಲ್ಲಿ ಬಣ್ಣ ಹಚ್ಚಿದ್ದರು. ಮುಂದೆ ಸಿನಿಮಾ ಹಾಗೂ ಹಿಂದಿ ಕಿರುತೆರೆಯಲ್ಲಿ ಗಮನ ಸೆಳೆದರು. 1995ರಲ್ಲಿ ಆಮೀರ್ ಖಾನ್ ನಟನೆಯ 'ಬಾಜಿ' ಚಿತ್ರದಲ್ಲಿ ಪುಟ್ಟ ಪಾತ್ರ ಮಾಡಿದ್ದರು. 'ಮೆರೆ ಯಾರ್ ಕಿ ಶಾದಿ ಹೈ', 'ಓಂ ಶಾಂತಿ ಓಂ', 'ದಬಾಂಗ್- 2', 'ಶಾದಿ ಕಿ ಸೈಡ್ ಎಫೆಕ್ಟ್', 'ಹಂಟರ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಕಳೆದ ವರ್ಷ ಕೊನೆಯದಾಗಿ 'ಬದಾಯಿ ಹೋ' ಚಿತ್ರದಲ್ಲಿ ನಿತೇಶ್ ಮಿಂಚಿದ್ದರು.
1995ರಲ್ಲಿ ಬಂದ 'ತೇಜಸ್' ಧಾರಾವಾಹಿಯಲ್ಲಿ ಡಿಟೆಕ್ಟಿವ್ ರೋಲ್‌ನಲ್ಲಿ ಕಾಣಿಸಿಕೊಂಡರು. ನಂತರ ಕಿರುತೆರೆಯ ಸಾಲು ಸಾಲಾಗಿ ಧಾರಾವಾಹಿಗಳಲ್ಲಿ ನಟಿಸಲು ಆರಂಭಿಸಿದರು. 'ಮಂಜಿಲೀನ್ ಅಪ್ನಿ ಅಪ್ನಿ', 'ಅಸ್ತಿತ್ವ ಏಕ್ ಪ್ರೇಮ್ ಕಹಾನಿ', 'ಸಾಯಾ, 'ಜಸ್ತಜೂ' ಸುನೈನಾ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಸದ್ಯ ಪ್ರಸಾರ ಆಗುತ್ತಿರುವ 'ಅನುಪಮಾ' ಧಾರಾವಾಹಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.

ಉತ್ತರಾಖಂಡದ ಅಲ್ಮೋರಾ ಮೂಲದವರಾದ ನಿತೇಶ್ ಪಾಂಡೆ 28 ವರ್ಷಗಳಿಂದ ಹಿಂದಿ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಕಳೆದ ಮೂರ್ನಾಲ್ಕು ದಿನಗಳಲ್ಲಿ ಹಿಂದಿ ಕಿರುತೆರೆಯ ಮೂವರು ಕೊನೆಯುಸಿರೆಳೆದಿರುವುದು ವಿಷಾದಕರ ಸಂಗತಿ. ಸೋಮವಾರ ನಟ ಆದಿತ್ಯ ಸಿಂಗ್ ರಜಪೂತ್ ವಾಶ್ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಮಂಗಳವಾರ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಟಿ ವೈಭವಿ ಉಪಾಧ್ಯಾಯ ಮೃತಪಟ್ಟಿದ್ದರು. ಇದೀಗ ನಿತೇಶ್ ಪಾಂಡೆ ಹೃದಯಾಘಾತದಿಂದ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.


Click it and Unblock the Notifications











