ಖ್ಯಾತ ಆ್ಯಂಕರ್ ಬದುಕಿನಲ್ಲಿ ಬಿರುಗಾಳಿ...!
ದಾಂಪತ್ಯದಲ್ಲಿ ಚಿಕ್ಕ-ಚಿಕ್ಕ ವಿರಸಗಳು ಸಾಂಗತ್ಯದ ಅರ್ಥವನ್ನು ಗಟ್ಟಿ ಮಾಡುತ್ತವೆ. ಇಬ್ಬರ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸುತ್ತವೆ. ಇಬ್ಬರ ನಡುವೆ ಇರುವ ತಪ್ಪು ಅಭಿಪ್ರಾಯಗಳನ್ನು-ಗ್ರಹಿಕೆಗಳನ್ನು ಸರಿಪಡಿಸಿಕೊಂಡು ಹೋಗುವುದರಲ್ಲಿಯೇ ದಾಂಪತ್ಯದ ಅರ್ಥ ಅಡಗಿದೆ ಎನ್ನುವುದು ಅನೇಕರ ಅಭಿಪ್ರಾಯ.
ಆದರೆ ಕೆಲ ಒಮ್ಮೆ ಈ ದಾಂಪತ್ಯದಲ್ಲಿ ಮೂಡುವ ಬಿರುಕನ್ನು ಆರಂಭದಲ್ಲಿಯೇ ಸರಿಪಡಿಸಿಕೊಳ್ಳದಿದ್ದರೆ ಅದು ಹಾದಿ ತಪ್ಪಿ ಎಲ್ಲಿಗೋ ಹೋಗಿ ತಲುಪುವ ಅಪಾಯ ಇದ್ದೇ ಇರುತ್ತೆ. ಅರ್ಧದಲ್ಲಿಯೇ ಸಂಬಂಧಗಳು ಕಳಚಿ ಹೋಗುತ್ತವೆ. ಇದಕ್ಕೆ ಚಿತ್ರಾ ತ್ರಿಪಾಠಿ ದಾಂಪತ್ಯ ಜೀವನ ಮತ್ತೊಂದು ಉದಾಹರಣೆ.

ಹೌದು, ಚಿತ್ರಾ ತ್ರಿಪಾಠಿ.. ಭಾರತದ ಪ್ರಖ್ಯಾತ ಸುದ್ದಿ ನಿರೂಪಕಿ. ಸುದ್ದಿ ಮಾಧ್ಯಮದಲ್ಲಿ ಅತ್ಯಂತ ಹೆಚ್ಚು ಸಂಬಳ ಪಡೆಯುವ ಕೆಲವೇ ಕೆಲ ಆಂಕರ್‌ಗಳಲ್ಲಿ ಚಿತ್ರಾ ತ್ರಿಪಾಠಿ ಕೂಡ ಒಬ್ಬರು. ಎಬಿಪಿ ನ್ಯೂಸ್ ಚಾನೆಲ್‌ನಲ್ಲಿ ಕೆಲಸ ಮಾಡುವ ಮೂಲಕ ಹೆಸರು ಸಂಪಾದಿಸಿದ ಚಿತ್ರಾ ಆ ನಂತರ ಆಜ್ ತಕ್ ವಾಹಿನಿಯಲ್ಲಿ ಸಂಪಾದಕಿಯಾಗಿ ಕೆಲಸ ಮಾಡಿದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಜ್ ತಕ್ ಚಾನೆಲ್‌ಗೆ ಗುಡ್ ಬೈ ಹೇಳಿ ಮತ್ತೆ ಎಬಿಪಿ ನ್ಯೂಸ್ ಬಳಗವನ್ನು ಸೇರಿಕೊಂಡ ಚಿತ್ರಾ ಪ್ರತಿಷ್ಠಿತ ರಾಮನಾಥ್ ಗೋಯೆಂಕಾ ಪ್ರಶಸ್ತಿಯನ್ನು 2015ರಲ್ಲಿ ಮುಡಿಗೇರಿಸಿಕೊಂಡಿದ್ದರು.
ಇಂಥಾ ಚಿತ್ರಾ ತ್ರಿಪಾಠಿ ಇದೀಗ ತಮ್ಮ 16 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಪತಿ ಅತುಲ್ ಅಗರ್‌ವಾಲ್ ಅವರಿಂದ ದೂರವಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ಧಾರೆ.
ಈ ಕುರಿತು ತಮ್ಮ ಎಕ್ಸ್ { ಟ್ವಿಟರ್ } ಖಾತೆಯಲ್ಲಿ ಬರೆದುಕೊಂಡಿರುವ ಚಿತ್ರಾ 16 ವರ್ಷಗಳನ್ನು ಜೊತೆಯಲ್ಲಿ ಕಳೆದ ನಂತರ ನಾವು ಸಂಬಂಧ ಕಡಿದುಕೊಳ್ಳುವ ಯೋಚನೆಯನ್ನು ಮಾಡಿದ್ದೇವೆ, ದಾಂಪತ್ಯ ಜೀವನ ಅಂತ್ಯಗೊಳಿಸಲು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ನಮ್ಮ ಮಗನನ್ನು ಬೆಳೆಸಲು ಪೋಷಕರಾಗಿ ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ ಎಂದಿರುವ ಚಿತ್ರಾ ಈ ಸಮಯದಲ್ಲಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾರೆ. ಇದು ಅಂತ್ಯವಲ್ಲ ಹೊಸ ಪ್ರಯಾಣದ ಆರಂಭ, ನಿಮ್ಮ ಶುಭ ಹಾರೈಕೆಗಳು ನಮ್ಮ ಮೇಲಿರಲಿ ಎಂದು ಹೇಳಿದ್ದಾರೆ.
ಅಂದ್ಹಾಗೇ ಚಿತ್ರಾ ತ್ರಿಪಾಠಿ 2009ರಲ್ಲಿ ಅತುಲ್ ಅಗರ್‌ವಾಲ್ ಅವರನ್ನು ಮದುವೆಯಾಗಿದ್ದರು. ವಿಶೇಷ ಅಂದರೆ ಅತುಲ್ ಕೂಡ ವೃತ್ತಿಯಲ್ಲಿ ಪರ್ತಕರ್ತರು. 'ಹಿಂದಿ ಖಬರ್' ವಾಹಿನಿಯ ನಿರ್ದೇಶಕರಾಗಿರುವ ಅತುಲ್ ಈ ಚಾನೆಲ್‌ನ ಪ್ರಧಾನ ಸಂಪಾದಕರು ಕೂಡ ಹೌದು. ಡಿಡಿ ನ್ಯೂಸ್, ನ್ಯೂಸ್ 18, ಜೀ ನ್ಯೂಸ್, ಈಟಿವಿ, ನ್ಯೂಸ್ 24, ಹೀಗೆ ಪ್ರಮುಖವಾದ ಚಾನೆಲ್‌ಗಳಲ್ಲಿ ಕೆಲಸ ಮಾಡಿದ ಅನುಭವ ಇವರದ್ದು. 21 ವರ್ಷಗಳ ಕಾಲ ಮಾಧ್ಯಮ ಲೋಕದಲ್ಲಿ ಸೇವೆಯನ್ನು ಸಲ್ಲಿಸಿರುವ ಅತುಲ್ ಹಿಂದಿ ಮಾಧ್ಯಮ ಲೋಕದಲ್ಲಿನ ಪ್ರಭಾವಿ ವ್ಯಕ್ತಿ ಕೂಡ ಹೌದು.
ಇಂತಹ ಹಿನ್ನೆಲೆಯುಳ್ಳ ಚಿತ್ರಾ ತ್ರಿಪಾಠಿ ಮತ್ತು ಅತುಲ್ ಅಗರ್‌ವಾಲ್ ಈಗ ತಮ್ಮ 16 ವರ್ಷದ ದಾಂಪತ್ಯಕ್ಕೆ ಗುಡ್ ಬೈ ಹೇಳುತ್ತಿದ್ದಾರೆ. ಸಹಜವಾಗಿ ಇಬ್ಬರು ಮಾಧ್ಯಮ ಲೋಕದ ದೊಡ್ಡ ಹೆಸರಾದ ಕಾರಣ ಅನೇಕರು ಇವರ ವಿಚ್ಛೇದನಕ್ಕೆ ಕಾರಣವನ್ನು ಹುಡುಕುತ್ತಿದ್ದಾರೆ. ಆ ಪ್ರಕಾರ 2022ರಲ್ಲಿ ಅತುಲ್ ಅಗರ್‌ವಾಲ್ ಹೇಳಿದ ಸುಳ್ಳಿಂದ ಸಂಬಂಧದಲ್ಲಿ ಬಿರುಕು ಮೂಡಿತ್ತು.
ಹೌದು, ಅಸಲಿಗೆ 2022ರಲ್ಲಿ ಅತುಲ್ ಅಗರ್‌ವಾಲ್ ತಮ್ಮ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ, ತನ್ನನ್ನೂ ಅಪಹರಿಸಿ ದರೋಡೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಅತುಲ್ ಅಗರ್‌ವಾಲ್ ಟ್ವಿಟ್ ಮಾಡಿದ್ದರು. ಸಾಲದಕ್ಕೆ ಉತ್ತರ ಪ್ರದೇಶದ ಪೊಲೀಸರಿಗೆ ಟ್ಯಾಗ್ ಕೂಡ ಮಾಡಿದ್ದರು. ಆದರೆ ಆ ನಂತರ ದೂರನ್ನು ನೀಡಲಿಲ್ಲ. ಆದರೂ ಕೂಡ ಕಾರ್ಯಪ್ರವೃತ್ತರಾದ ಉತ್ತರ ಪ್ರದೇಶದ ಪೊಲೀಸರು ತಾವೇ ಸ್ವಯಂ ಪ್ರೇರಿತರಾಗಿ ದೂರನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸಿದರು.
ಈ ಸಮಯದಲ್ಲಿ ಅತುಲ್ ಅಗರ್‌ವಾಲ್ ತಮ್ಮ ಮಹಿಳಾ ಸ್ನೇಹಿತೆಯ ಜೊತೆ ಹೋಟೆಲ್‌ನಲ್ಲಿ 'ಕಾಲಹರಣ' ಮಾಡುತ್ತಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಅಮರ್ ಉಜಾಲಾ ಪತ್ರಿಕೆಯಲ್ಲಿ ಈ ಕುರಿತು ವರದಿ ಕೂಡ ಪ್ರಕಟವಾಗಿತ್ತು. ಹೀಗೆ ಅತುಲ್ ಅಗರ್‌ವಾಲ್ ಸುಳ್ಳು ಕಥೆ ಹೆಣೆದಿದ್ದ ವಿಚಾರ ಬಯಲಾಗುತ್ತಿದ್ದಂತೆಯೇ ಅತುಲ್ ಅಗರ್‌ವಾಲ್ ಮಹಿಳೆಯ ಜೊತೆ ಓಯೋ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು, ಇದೇ ಸಮಯದಲ್ಲಿ ಚಿತ್ರಾ ತ್ರಿಪಾಠಿ ಕರೆ ಮಾಡಿದ್ದ ಹಿನ್ನೆಲೆ ಅತುಲ್ ಅಗರ್‌ವಾಲ್ ಪತ್ನಿಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳಿದ್ದಾರೆ ಎನ್ನುವ ವಿಚಾರ ಕೂಡ ಬಯಲಾಗಿತ್ತು.
ಈ ವಿಚಾರವನ್ನು ಆ ನಂತರ ಅಲ್ಲಗೆಳೆದಿದ್ದ ಅತುಲ್ ಅಗರ್‌ವಾಲ್ ತಾವು ಹೋಟೆಲ್‌ನಲ್ಲಿದ್ದ ವಿಚಾರ ಒಪ್ಪಿಕೊಂಡಿದ್ದರು. ಆದರೆ, ತನ್ನ ಜೊತೆ ಯಾರು ಇರಲಿಲ್ಲ, ತಾವೊಬ್ಬರೇ ಹೋಟೆಲ್‌ನಲ್ಲಿದ್ದಿದ್ದಾಗಿ ಹೇಳಿದ್ದರು. ಇಲ್ಲಿಂದನೇ ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಅದು ಈಗ ವಿಚ್ಛೇದನದ ಹಂತಕ್ಕೆ ತಲುಪಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಇನ್ನುಳಿದಂತೆ ಚಿತ್ರಾ ತ್ರಿಪಾಠಿ ಅವರ ಈ ವಿಚ್ಛೇದನದ ವಿಚಾರ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಚರ್ಚೆಗೀಡಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರಾ ತ್ರಿಪಾಠಿ ಅವರ ಹೆಸರು ಟ್ರೆಂಡಿಂಗ್‌ನಲ್ಲಿ ಕೂಡ ಇದೆ. ಯಾಕೆಂದರೆ ರಾಷ್ಟ್ರೀಯ ವಾಹಿನಿಗಳಲ್ಲಿ ಕುಳಿತುಕೊಂಡು, ಹಿಂದೂ-ಮುಸ್ಲಿಂ ಸಾಮರಸ್ಯ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವುದು ಅನೇಕರ ಆರೋಪ. ಹೀಗಾಗಿಯೇ ವಿಚ್ಛೇದನ ವಿಚಾರವನ್ನು ಮುಂದಿಟ್ಟುಕೊಂಡು ಚಿತ್ರಾ ವಿರುದ್ಧ ಟ್ವಿಟರ್‌ನಲ್ಲಿ ಹರಿಹಾಯುತ್ತಿರುವ ಅನೇಕರು ತ್ರಿವಳಿ ತಲಾಖ್ ಕುರಿತು ಊರ್ ತುಂಬಾ ತಮ್ಮಲ್ಲಿನ ಜ್ಞಾನವನ್ನು ಹಂಚುತ್ತಿದ್ದ ಚಿತ್ರಾ ತ್ರಿಪಾಠಿಗೆ ತನ್ನ 16 ವರ್ಷಗಳ ದಾಂಪತ್ಯವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಬೇರೆಯವರ ಸಂಬಂಧವನ್ನು ಪ್ರಶ್ನೆ ಮಾಡುತ್ತಿದ್ದವರ ಸಂಬಂಧವೇ ಇಂದು ಹಳಸಿದೆ ಎನ್ನುತ್ತಿದ್ದಾರೆ.ಬೂಟಾಟಿಕೆ ಹೆಚ್ಚು ದಿನ ಉಳಿಯುವುದಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ ಎನ್ನುತ್ತಿದ್ದಾರೆ.
ಇದಿಷ್ಟೇ ಅಲ್ಲ ಏಳು ಜನ್ಮದ ಅನುಬಂಧ ಹದಿನಾರು ವರ್ಷ ಕೂಡ ಉಳಿಯಲಿಲ್ಲ ಎಂದು ಒಬ್ಬರು ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡರೆ, ಮತ್ತೊಬ್ಬರು ಬೆಂಕಿ ಹೊತ್ತಿಕೊಂಡರೆ ಅನೇಕ ಮನೆಗಳು ಭಸ್ಮವಾಗುತ್ತವೆ, ಒಂದು ಕಾಲದಲ್ಲಿ ಚಿತ್ರಾ ತ್ರಿಪಾಠಿ ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ಬಗ್ಗೆ ಚರ್ಚೆಯನ್ನು ಮಾಡುತ್ತಿದ್ದರು, ಆದರೆ ಇವತ್ತು ಅವರೇ ವಿಚ್ಛೇದನ ಪಡೆದಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.ಗಾಜಿನ ಮನೆಯಲ್ಲಿ ಇರುವವರು ಬೇರೆಯವರ ಮನೆಗಳ ಮೇಲೆ ಕಲ್ಲು ಎಸೆಯಬಾರದು ಎಂದಿದ್ದಾರೆ.
ಹಿಂದೂ ಮತ್ತು ಮುಸ್ಲಿಂರನ್ನು ಬೇರ್ಪಡಿಸಲು ಪ್ರಯತ್ನಿಸಿದ ಚಿತ್ರಾ ತ್ರಿಪಾಠಿ ಇಂದು ತಮ್ಮ 16 ವರ್ಷಗಳಿಂದ ಸಂಬಂಧಕ್ಕೆ ಗುಡ್ ಬೈ ಹೇಳಿದ್ದಾರೆ, ಹೊಸ ಜೀವನದ ಈ ಹೊಸ ಅಧ್ಯಾಯ ಶುರು ಮಾಡಿದ ಅತುಲ್ ಅಗರ್‌ವಾಲ್ ಮತ್ತು ಚಿತ್ರಾ ತ್ರಿಪಾಠಿ ಅವರಿಗೆ ಶುಭಾಶಯಗಳು ಎಂದು ಕೂಡ ಮತ್ತೊಬ್ಬರು ಟ್ವಿಟ್ ಮಾಡಿದ್ದಾರೆ.
ಹೀಗೆ ಅನೇಕ ಜನ ಸದ್ಯ ಬಗೆ ಬಗೆಯಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ತಮ್ಮ ತಮ್ಮ ಟೈಮ್ ಲೈನ್‌ನಲ್ಲಿ ಚಿತ್ರಾ ತ್ರಿಪಾಠಿ ಅವರ ಮದುವೆ ಮತ್ತು ವಿಚ್ಛೇದನದ ಕುರಿತು ಚರ್ಚೆಯನ್ನು ಮಾಡುತ್ತಿದ್ದಾರೆ. ಇದೆಲ್ಲದರಿಂದ ಬೇಸತ್ತಿರುವ ಚಿತ್ರಾ ತ್ರಿಪಾಠಿ ಸದ್ಯ ಟ್ವಿಟರ್‌ನಲ್ಲಿ ತಮ್ಮ ಕಾಮೆಂಟ್ ಸೆಕ್ಷನ್‌ನ ಆಫ್ ಮಾಡಿದ್ದಾರೆ. ಒಟ್ನಲ್ಲಿ ಚಿತ್ರಾ ತ್ರಿಪಾಠಿ ಮತ್ತು ಅತುಲ್ ಅಗರ್‌ವಾಲ್ ತಮ್ಮ 16 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದು ದೂರವಾಗಲು ಕಾರಣವನ್ನು ಇಬ್ಬರು ಅಧಿಕೃತವಾಗಿ ಹೇಳಿಲ್ಲ.


Click it and Unblock the Notifications











