ಸುನಾಮಿ ಕಿಟ್ಟಿ ಈಗ ತಕಧಿಮಿತ ಡ್ಯಾನ್ಸಿಂಗ್ ಸ್ಟಾರ್
ಈಟಿವಿ ಕನ್ನಡ ವಾಹಿನಿಯ ಜನಪ್ರಿಯ ಡ್ಯಾನ್ಸಿಂಗ್ ರಿಯಾಲಿಟಿ ಶೋ 'ತಕಧಿಮಿತ ಡ್ಯಾನ್ಸಿಂಗ್ ಸ್ಟಾರ್'ನಲ್ಲಿ ಸುನಾಮಿ ಕಿಟ್ಟಿ ಜೋಡಿ ನೃತ್ಯ ತಾರೆಗಳಾಗಿ ಹೊರ ಹೊಮ್ಮಿದ್ದಾರೆ. ಅಂತಿಮ ಹಣಾಹಣಿಯಲ್ಲಿದ್ದ ಮೂರು ಜೋಡಿಗಳನ್ನು ಹಿಂದಿಕ್ಕಿ, ಸುನಾಮಿ ಕಿಟ್ಟಿ ಹಾಗೂ ದಿಶಾ ಜೋಡಿ ಮುನ್ನುಗ್ಗಿದೆ. ಈ ಮೂಲಕ ಎಚ್ ಡಿ ಕೋಟೆಯ ತರಕಾರಿ ಮಾರಾಟಗಾರ ಪ್ರದೀಪ ಅಲಿಯಾಸ್ ಸುನಾಮಿ ಕಿಟ್ಟಿ ಡ್ಯಾನ್ಸಿಂಗ್ ಸ್ಟಾರ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಗ್ರ್ಯಾಂಡ್ ಫಿನಾಲೆ ಎಪಿಸೋಡು ಈ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ. ಇದಕ್ಕೂ ಮುನ್ನ ಕಿಟ್ಟಿ ವಿಜೇತನಾಗಿರುವ ಸುದ್ದಿ ಸೋರಿಕೆಯಾಗಿದೆ. ಎಚ್ ಡಿ ಕೋಟೆಯ ಸುನಾಮಿ ಕಿಟ್ಟಿಗೆ 10 ಲಕ್ಷ ರೂ.ಗಳ ನಗದು ಬಹುಮಾನ ಮೊತ್ತ ಸಿಕ್ಕಿದೆ.
'Incredible ಇಂಡಿಯಾದಲ್ಲೊಂದು Impossible ಜರ್ನಿ' ಎಂಬ ಅಡಿಬರಹವಿದ್ದ ಈ ಟಿವಿ ವಾಹಿನಿಯ ಇಂಡಿಯನ್ ರಿಯಾಲಿಟಿ ಶೋನ ಚಾಂಪಿಯನ್ ಆಗಿ ಸುನಾಮಿ ಕಿಟ್ಟಿ ಹೊರ ಹೊಮ್ಮಿದ್ದನ್ನು ಇಲ್ಲಿ ಸ್ಮರಿಸಬಹುದು.['ಇಂಡಿಯನ್' ಶೋ ಗೆದ್ದ ಪ್ರದೀಪ]

ಅಂತಿಮ ಸುತ್ತಿನಲ್ಲಿ ಶಮಿತಾ ಮಲ್ನಾಡ್ ಅವರ ತೀವ್ರ ಪೈಪೋಟಿ ನಡುವೆ ಸುನಾಮಿ ಕಿಟ್ಟಿ ಜನರ ಮನ ಗೆದ್ದು ಜಯ ಗಳಿಸುವಲ್ಲಿ ಸಫಲರಾಗಿದ್ದಾರೆ. ಉಳಿದಂತೆ ಅನುಪಮಾ ಭಟ್, ಸಾನಿಯಾ ಐಯರ್ ಅವರು ಅಂತಿಮ ಹಂತದಲ್ಲಿದ್ದರು.
ಬಿಡದಿಯ ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದ ಗ್ರಾಂಡ್ ಫಿನಾಲೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಹಾ ತೀರ್ಪುಗಾರರಾಗಿದ್ದರು. ಜತೆಗೆ ಎಂದಿನಂತೆ ತೀರ್ಪುಗಾರರಾದ ನಿರ್ದೇಶಕ ಗುರುಪ್ರಸಾದ್, ನಟ ಯೋಗೇಶ್, ನಟಿ ರಕ್ಷಿತಾ ಪ್ರೇಮ್ ಇದ್ದರು. ಅಕುಲ್ ಬಾಲಾಜಿ ನಿರೂಪಣೆಯ ಈ ವರ್ಣರಂಜಿತ ಕಾರ್ಯಕ್ರಮ ವಾರಾಂತ್ಯದಲ್ಲಿ ಪ್ರಸಾರವಾಗಲಿದೆ.


Click it and Unblock the Notifications











