ಸಾಲ ಮಾಡಿದ್ದೇ ನನ್ನ ಜೀವನದ ದೊಡ್ಡ ತಪ್ಪು - ಪ್ರಕಾಶ್ ಬೆಳವಾಡಿ
ಎಷ್ಟೇ ದೊಡ್ಡ ವ್ಯಕ್ತಿ ಆಗಿದ್ದರೂ, ಜೀವನದಲ್ಲಿ ಕೆಲವು ತಪ್ಪುಗಳು ನಮ್ಮಿಂದ ಆಗಿ ಬಿಡುತ್ತವೆ. ಅದನ್ನು ಒಪ್ಪಿಕೊಂಡಾಗ ಆ ವ್ಯಕ್ತಿ ಮತ್ತಷ್ಟು ದೊಡ್ಡವನಾಗುತ್ತಾನೆ. ಅದೇ ರೀತಿ ಪ್ರಕಾಶ್ ಬೆಳವಾಡಿ ಕೂಡ ತಮ್ಮ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ.
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಬಂದಿದ್ದ ನಟ, ರಂಗಕರ್ಮಿ ಪ್ರಕಾಶ್ ಬೆಳವಾಡಿ ಅನೇಕ ವಿಷಯಗಳ ಬಗ್ಗೆ ನೇರವಾಗಿ ಮಾತನಾಡಿದರು. ಅದರಲ್ಲಿಯೂ ತಾವು ಮಾಡಿದ ಸಾಧನೆ ಮಾತ್ರವಲ್ಲದೆ, ತಮ್ಮ ತಪ್ಪುಗಳನ್ನು ಕೂಡ ಅಷ್ಟೇ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಕಾರ್ಯಕ್ರಮದ ಕೊನೆಯಲ್ಲಿ ಪ್ರತಿ ಸಂಚಿಕೆಯಲ್ಲಿ, ಪ್ರತಿ ಅತಿಥಿಗಳಿಗೂ ರಮೇಶ್ ಕೇಳುವ ಹಾಗೆ ಒಂದು ಪ್ರಶ್ನೆ ಮುಂದಿಟ್ಟರು. 'ನೀವು ಯಾರಿಗಾದರೂ ಕ್ಷಮೆ ಕೇಳುವುದಿದ್ದರೆ ಕೇಳಬಹುದು' ಎಂದರು. ಆಗ ಪ್ರಕಾಶ್ ಬೆಳವಾಡಿ ತಮ್ಮ ಕುಟುಂಬಕ್ಕೆ ಕ್ಷಮೆ ಕೇಳಿದರು...

ಸಾಲ ಮಾಡಿದ್ದೇ ದೊಡ್ಡ ತಪ್ಪು
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ಬೆಳವಾಡಿ ''ನಾನು ಎಲ್ಲದಕ್ಕಿಂತ ದೊಡ್ಡ ತಪ್ಪು ಮಾಡಿದ್ದು ಸಾಲ ಮಾಡಿರುವುದು. ಸಿನಿಮಾಗಾಗಿ ತುಂಬ ಸಾಲ ಮಾಡಿದ್ದೇನೆ. ಸಿಟ್ಟು ಬಂದಾಗ ಸಾಲ ಮಾಡಿದ್ದೇನೆ. ಯಾವುದೇ ಕಂಪನಿ ಕಟ್ಟಲು ಸಾಲ ಕೇಳಿದ್ದೇನೆ. ಮನೆ ಮುಂದೆ ಸಾಲಗಾರರು ನಿಂತಿರುವುದು ಬಹಳ ಅವಮಾನ ಆಗಿವೆ.'' ಎಂದು ತಮ್ಮ ತಪ್ಪನ್ನು ಹೇಳಿಕೊಂಡರು.

ದುಡಿದು ಹಣ ವಾಪಸ್ ಕೊಡುತ್ತೇನೆ
''ನಾನು ಇನ್ನು ಎಷ್ಟೋ ಜನರಿಗೆ ಹಣ ವಾಪಸ್ ನೀಡಿಲ್ಲ. ಖಂಡಿತ ಮುಂದೆ ದುಡಿದು ವಾಪಸ್ ಕೊಡುತ್ತೇನೆ. ಇದರಿಂದ ನನ್ನ ಹೆಂಡತಿ ಮಕ್ಕಳು ಎಲ್ಲರಿಗೂ ಕಾಟ ನೀಡಿದ್ದೇನೆ ಅದಕ್ಕೆ ನಾನು ಕ್ಷಮೆ ಕೇಳುತ್ತೇನೆ.'' ಎಂದ ಪ್ರಕಾಶ್ ಬೆಳವಾಡಿ ತಮ್ಮ ತಪ್ಪುಗಳು ಹಾಗೂ ಅದರಿಂದ ಕುಟುಂಬಕ್ಕೆ ಆದ ತೊಂದರೆಯನ್ನು ಬಿಚ್ಚಿಟ್ಟರು.

ನನಗೆ ಡಿಸಿಪ್ಲಿನ್ ಇಲ್ಲ
''ನನಗೆ ಡಿಸಿಪ್ಲಿನ್ ಇಲ್ಲ, ನಾನು ಏನೇ ಮಾಡಿದರೂ ಅತಿಯಾಗಿ ಮಾಡುತ್ತೇನೆ. ಊಟ ನೀರು ಬಿಟ್ಟು ಕೆಲಸ ಮಾಡುತ್ತೇನೆ. ರಾಕ್ಷಸ ರೀತಿ ಕೆಲಸ ಮಾಡುತ್ತೇನೆ'' ಎಂದು ತಮ್ಮ ಸಾಧನೆ ಮಾತ್ರವಲ್ಲದೆ, ಮಿತಿಗಳನ್ನು ಕೂಡ ಯಾವುದೇ ಸಂಕೋಚ ಇಲ್ಲದೆ ವೀಕ್ಷಕರ ಮುಂದೆ ಇಟ್ಟರು.

ನಾವು ಬೆಂಗಳೂರನ್ನು, ಕನ್ನಡವನ್ನು ಪ್ರೀತಿಸುವವರು
''ನಾವು ಮಾಡಬೇಕಾದ ದೊಡ್ಡ ಕೆಲಸ ಇದೆ. ಯಾಕೆಂದರೆ, ನಾವು ಬೆಂಗಳೂರನ್ನು ಪ್ರೀತಿಸುವವರು, ಕನ್ನಡವನ್ನು ಪ್ರೀತಿಸುವವರು, ಕಲೆಯನ್ನು ಪ್ರೀತಿಸುವವರು. ನಮ್ಮಿಂದ ಭಾರತ ಉಳಿಯುತ್ತದೆ ಹೊರತು ಭಾರತದಿಂದ ಲಾಭ ಮಾಡಿಕೊಳ್ಳಲು ಹುಟ್ಟಿರುವವರಿಂದ ಭಾರತ ಉಳಿಯುವುದಿಲ್ಲ. ನಿಮ್ಮ ತಾಯಿಯನ್ನು ಯಾವುದೇ ಪ್ರಶ್ನೆ ಕೇಳದೆ ಹೇಗೆ ಪ್ರೀತಿಸುತ್ತೀರೋ ಅದೇ ರೀತಿ ನಿಮ್ಮ ಭಾಷೆಯನ್ನು, ನಾಡನ್ನು, ಸಂಸ್ಕೃತಿಯನ್ನು ಪ್ರೀತಿಸಿ ಎಂದು ಕೇಳಿಕೊಳ್ಳುತ್ತೇನೆ.'' ಎಂದು ಅದ್ಭುತವಾಗಿ ಕಾರ್ಯಕ್ರಮದಲ್ಲಿ ಪ್ರಕಾಶ್ ಬೆಳವಾಡಿ ಮಾತನಾಡಿದರು.


Click it and Unblock the Notifications











