ಹಿರಿತೆರೆಗೆ ಕಾಲಿಟ್ಟ ಪ್ರಕೃತಿ ಪ್ರಸಾದ್.. ಯಾವ ಸಿನಿಮಾ ಗೊತ್ತಾ?
ಕಿರುತೆರೆಯ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಅನೇಕರು ಮುಂದೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ರಾಧಿಕಾ ಪಂಡಿತ್, ರಚಿತಾ ರಾಮ್, ಮಯೂರಿ, ಅದಿತಿ ಪ್ರಭುದೇವ ಹೀಗೆ ಅನೇಕ ನಟ ನಟಿಯರು ಇಂದು ಹಿರಿತೆರೆಯಲ್ಲಿಯೂ ತಂದ ನಟನೆಯ ಮೂಲಕ ಗುರುತಿಸಿಕೊಂಡಿದ್ದಾರೆ. ಆ ಸಾಲಿಗೆ ಹೊಸದಾಗಿ ಸೇರಿದ್ದಾರೆ ನಟಿ ಪ್ರಕೃತಿ ಪ್ರಸಾದ್. ಅಂದ ಹಾಗೇ ಯಾರು ಈ ಪ್ರಕೃತಿ ಪ್ರಸಾದ್ ಎಂಬ ಕುತೂಹಲ ನೊಮಗೆ ಮೂಡುವುದು ಸಹಜ. ಬೆರಳೆಣಿಕೆ ಧಾರಾವಾಹಿಗಳಲ್ಲಿ ನಟಿಸಿರುವ ಈಕೆ ನಟನೆಯ ಮೂಲಕ ಗುರುತಿಸಿಕೊಂಡಿರುವ ಬೆಡಗಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ರಾಜಕಾರಣಿ ಮುನಿಸ್ವಾಮಿ ಮಗಳು ಪೂರ್ವಿಯಾಗಿ ನಟಿಸಿರುವ ಪ್ರಕೃತಿ ಪ್ರಸಾದ್ ಅವರು ಇದೀಗ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಹೌದು, ನಟ ಹರೀಶ್ ರಾಜ್ ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ 'ವೆಂಕಟೇಶಾಯ ನಮಃ'ದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಪ್ರಕೃತಿ ಪ್ರಸಾದ್. ಆ ಮೂಲಕ ಹಿರಿತೆರೆಯಲ್ಲೂ ನಾಯಕಿಯಾಗಿ ನಟಿಸುವ ಸುವರ್ಣಾವಕಾಶವನ್ನು ಈಕೆ ಪಡೆದುಕೊಂಡಿದ್ದಾರೆ.

ಅಂದ ಹಾಗೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ನಾಯಕಿ ಅಹಲ್ಯಾಳ ತಂಗಿ ನಮೃತಾ ಆಗಿ ಅಭಿನಯಿಸಿದ್ದರು ಪ್ರಕೃತಿ ಪ್ರಸಾದ್. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಪ್ರಕೃತಿ ಮುಂದೆ ಕಾರಣಾಂತರಗಳಿಂದ ನಮೃತಾ ಪಾತ್ರದಿಂದ ಹೊರಬಂದಿದ್ದರು.
ನಂತರ ಮಲೆಯಾಳಂನ 'ಅಮ್ಮಕ್ಕಿಲಿಕ್ಕೂಡು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ನಟನಾ ಕಂಪನ್ನು ಈಕೆ ಪಸರಿಸಿದ್ದಾರೆ.
ಮುಂದೆ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಪೂರ್ವಿಯಾಗಿ ಕನ್ನಡ ಕಿರುತೆರೆಗೆ ಕಂ ಬ್ಯಾಕ್ ಆದ ಪ್ರಕೃತಿ ಪ್ರಸಾದ್ ಕಿರುತೆರೆ ಪಯಣ ಶುರುವಾಗಿದ್ದು 'ಸೌಭಾಗ್ಯವತಿ' ಧಾರಾವಾಹಿಯ ಮೂಲಕ. 'ಸೌಭಾಗ್ಯವತಿ' ಧಾರಾವಾಹಿಯ ನಂತರ ಈಕೆ ಬಣ್ಣ ಹಚ್ಚಿದ್ದು 'ಗಂಗಾ' ಧಾರಾವಾಹಿಯಲ್ಲಿ. ಉತ್ತರ ಕನ್ನಡ ಸೊಬಗಿನ 'ಗಂಗಾ' ಧಾರಾವಾಹಿಯಲ್ಲಿ ನಾಯಕ ಸಾಗರ್‌ನ ಪ್ರೇಯಸಿಯಾಗಿ ಪ್ರಕೃತಿ ಪ್ರಸಾದ್ ಕಾಣಿಸಿಕೊಂಡಿದ್ದರು. ಅಂದ ಹಾಗೇ ಈಕೆ ಧಾರಾವಾಹಿಯ ಕೊನೆಯ ಹಂತದಲ್ಲಿದ್ದಾಗ ಕೆಲವೊಂದು ಸಂಚಿಕೆಗಳಲ್ಲಷ್ಟೇ ಕಾಣಿಸಿಕೊಂಡಿದ್ದರು. ಜೊತೆಗೆ ಇದು ನೆಗೆಟಿವ್ ಶೇಡ್ ಇರುವ ಪಾತ್ರವಾಗಿದ್ದು ಮೊದಲ ಬಾರಿಗೆ ಖಳನಾಯಕಿಯಾಗಿ ಗೆದ್ದಿದ್ದರು ಪ್ರಕೃತಿ ಪ್ರಸಾದ್.
ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನಸಾರೆ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ ಪ್ರಕೃತಿ ಪ್ರಸಾದ್, ನಾಯಕಿ ಪ್ರಾರ್ಥನಾ ತಂಗಿ ಪಾವನಿಯಾಗಿ ಕಾಣಿಸಿಕೊಂಡಿದ್ದರು. ನಟಿಸಿದ್ದು ಪೋಷಕ ಪಾತ್ರದಲ್ಲಿ ಆಗಿದ್ದರೂ, ಪ್ರಮುಖ ಪಾತ್ರದಷ್ಟೇ ಪ್ರಾಮುಖ್ಯತೆ ಪಾವನಿ ಪಾತ್ರಕ್ಕಿತ್ತು. ಪಾವನಿ ಪಾತ್ರದ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಈಕೆ ನಂತರ ಅಭಿನಯಿಸಿದ್ದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬೆಟ್ಟದ ಹೂ' ಧಾರಾವಾಹಿಯಲ್ಲಿ.
'ಬೆಟ್ಟದ ಹೂ' ಧಾರಾವಾಹಿಯಲ್ಲಿ ನಾಯಕಿ ಮಾಲಿನಿಯ ಪಾತ್ರಕ್ಕೆ ಜೀವ ತುಂಬಿರುವ ಪ್ರಕೃತಿ ಪ್ರಸಾದ್ ಆ ಧಾರಾವಾಹಿಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರಗಳು ಎರಡನ್ನೂ ಒಟ್ಟಿಗೆ ನಿಭಾಯಿಸಿದ ಪ್ರತಿಭಾವಂತೆ. ನಟನೆಯ ಹೊರತಾಗಿ ಸ್ನಾತಕೋತ್ತರ ಪದವೀಧರೆಯಾಗಿರುವ ಈಕೆ ಮೊದಲ ಬಾರಿ ಬಣ್ಣ ಹಚ್ಚಿದಾಗ ಪಿಯುಸಿ ವಿದ್ಯಾರ್ಥಿನಿಯಾಗಿದ್ದರು.
ಬಾಲ್ಯದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಪ್ರಕೃತಿ ಪ್ರಸಾದ್ ನಟಿ ರೂಪಾ ಪ್ರಭಾಕರ್ ಅವರಿಂದ ನಟನಾ ತರಬೇತಿಯನ್ನು ಕೂಡಾ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಒಳ್ಳೆಯ ಪಾತ್ರ ಸಿಕ್ಕರೆ, ಉತ್ತಮ ಅವಕಾಶ ದೊರೆತರೆ ಸಿನಿಮಾದಲ್ಲಿ ನಟಿಸಬೇಕು ಎಂಬುದು ಇವರ ಕನಸಾಗಿತ್ತು. ಆ ಕನಸನ್ನು ಈಕೆ ಇದೀಗ ನನಸು ಮಾಡಿಕೊಂಡಿದ್ದಾರೆ. 'ವೆಂಕಟೇಶಾಯ ನಮಃ' ದ ಮೂಲಕ ಹಿರಿತೆರೆಗೆ ಕಾಲಿಟ್ಟಿದ್ದು ತಮ್ಮ ನಟನೆಯ ಮೂಲಕ ಸಿನಿಪ್ರಿಯರ ಮನ ಸೆಳೆಯಲಿದ್ದಾರೆ.


Click it and Unblock the Notifications











