'ಸೇವಂತಿ'ಯಲ್ಲಿ ನಟಿಸುತ್ತಿದ್ದ ಬಿಗ್‌ಬಾಸ್ ಶಿಶಿರ್ ಶಾಸ್ತ್ರಿಯ ಬದಲು ಬಂದ ಪ್ರಶಾಂತ್ ಭಾರದ್ವಾಜ್ ಹಿನ್ನೆಲೆಯೇನು?
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಸೇವಂತಿ' ಕೂಡಾ ಒಂದು. 'ಸೇವಂತಿ' ಧಾರಾವಾಹಿಯಲ್ಲಿ ನಾಯಕ ಲಾಯರ್ ಅರ್ಜುನ್ ಆಗಿ ಅಭಿನಯಿಸಿದ್ದ ಶಿಶಿರ್ ಶಾಸ್ತ್ರಿ ಅವರು ಈ ಬಾರಿಯ ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದರು.
ಬರೋಬ್ಬರಿ 77 ದಿನಗಳ ಕಾಲ ದೊಡ್ಮನೆಯಲ್ಲಿದ್ದು ಕಿರುತೆರೆ ವೀಕ್ಷಕರ ಮನೆ, ಮನ ಸೆಳೆದಿದ್ದ ಶಿಶಿರ್ ಶಾಸ್ತ್ರಿ 77 ದಿನಕ್ಕೆ ಮನೆಯಿಂದ ಹೊರಬಂದಿದ್ದರು. ಇದರ ನಡುವೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೇವಂತಿ' ಧಾರಾವಾಹಿಯಲ್ಲಿ ಬದಲಾವಣೆಯೂ ಆಗಿದೆ. ಹೌದು, ಅರ್ಜುನ್ ಪಾತ್ರದಲ್ಲಿ ನಟಿಸುತ್ತಿದ್ದ ಶಿಶಿರ್ ಶಾಸ್ತ್ರಿ ದೊಡ್ಮನೆಯೊಳಗೆ ಹೋಗಿದ್ದ ಕಾರಣ ಇದೀಗ ಆ ಜಾಗಕ್ಕೆ ಬೇರೆ ನಟನ ಎಂಟ್ರಿಯಾಗಿದೆ.

ದಶಕಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಲನ' ಧಾರಾವಾಹಿಯಲ್ಲಿ ನಾಯಕ ಸಮರ್ಥ್ ಪಾತ್ರದಲ್ಲಿ ಬಣ್ಣ ಹಚ್ಚಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಪ್ರಶಾಂತ್ ಭಾರದ್ವಾಜ್ ಇದೀಗ ಅರ್ಜುನ್ ಆಗಿ ಮೋಡಿ ಮಾಡುತ್ತಿದ್ದಾರೆ. ಆ ಮೂಲಕ ಮತ್ತೆ ಕನ್ನಡ ಕಿರುತೆರೆಯಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಪ್ರಶಾಂತ್ ಭಾರದ್ವಾಜ್.
'ಮಿಲನ' ಧಾರಾವಾಹಿಯ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆತ್ಮಬಂಧನ' ಧಾರಾವಾಹಿಯಲ್ಲಿ ನಾಯಕನಾಗಿ ಪ್ರಶಾಂತ್ ನಟಿಸಿದ್ದರು. ಆದರೆ, ಮುಂದೆ ಕಾರಣಾಂತರಗಳಿಂದ ಧಾರಾವಾಹಿಯು ತನ್ನ ಪ್ರಸಾರ ನಿಲ್ಲಿಸಿತ್ತು. ಮುಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಜಮಾನಿ' ಧಾರಾವಾಹಿಯಲ್ಲಿ ನಾಯಕನಾಗಿ ಮೋಡಿ ಮಾಡಿದ ಪ್ರಶಾಂತ್ ಭಾರದ್ವಾಜ್ ಅವರು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿ ವೀಕ್ಷಕರ ಮನ ಸೆಳೆದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋವಿನಲ್ಲಿ ಭಾಗವಹಿಸಿರುವ ಪ್ರಶಾಂತ್ ಭಾರದ್ವಾಜ್ ಅಲ್ಲಿ ತಮ್ಮ ನೃತ್ಯದ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆದಿದ್ದರು. ಇದರ ನಡುವೆ ತೆಲುಗಿನ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಪ್ರಶಾಂತ್ ಆ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನಟನಾ ಕಂಪನ್ನು ಪಸರಿಸಿದ್ದಾರೆ.
ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಪ್ರಶಾಂತ್ ಭಾರದ್ವಾಜ್‌ಗೆ ಅಭಿನಯಿಸಲು ಇಂತಹದೇ ಪಾತ್ರಗಳು ಬರಬೇಕು ಎಂಬ ಬಯಕೆಯಿಲ್ಲ. ಅದರ ಬದಲಿಗೆ ಅಭಿನಯಿಸಲು ಅವಕಾಶ ಇರುವಂತಹ ಪಾತ್ರಗಳು ಸಿಗಬೇಕು ಎಂಬುದೇ ಪ್ರಶಾಂತ್ ಅವರ ಅಂಬೋಣ. ಒಟ್ಟಿನಲ್ಲಿ ಸಿಕ್ಕಂತಹ ಅವಕಾಶಗಳನ್ನು ಉಪಯೋಗಿಸಬೇಕು ಎನ್ನುತ್ತಾರೆ ಪ್ರಶಾಂತ್ ಭಾರದ್ವಾಜ್.
ಪ್ರಶಾಂತ್ ಭಾರದ್ವಾಜ್ ಅವರು ಇಂದು ನಟನಾಗಿ ಹೊರಹೊಮ್ಮಿದ್ದಾರೆ ಎಂದರೆ ಅದಕ್ಕೆ 'ಮಿಲನ' ಧಾರಾವಾಹಿಯೇ ಮುಖ್ಯ ಕಾರಣ. ಪ್ರಶಾಂತ್ ಅವರು 'ಮಿಲನ' ಧಾರಾವಾಹಿಗೆ ಆಯ್ಕೆಯಾದಾಗ ಅವರಿಗೆ ನಟನೆಯ ಬಗ್ಗೆ ಯಾವೊಂದು ವಿಚಾರಗಳು ತಿಳಿದಿರಲಿಲ್ಲ. ಆ ಧಾರಾವಾಹಿಯ ನಿರ್ದೇಶಕರು ಮತ್ತು ಸಹಕಲಾವಿದರುಗಳ ಪ್ರೋತ್ಸಾಹ, ಬೆಂಬಲದಿಂದ ಪ್ರಶಾಂತ್ ಅವರು ನಟನೆಯ ಆಗು ಹೋಗುಗಳನ್ನು ತಿಳಿದುಕೊಂಡರು. ಇಂದು ಪರಿಪೂರ್ಣ ನಟನಾಗಿ ತೆರೆಯ ಮೇಲೆ ಮಿಂಚುತ್ತಿದ್ದಾರೆ.


Click it and Unblock the Notifications











