Raksha Nimbargi: ಪ್ರೀತಿಯ ಅರಸಿಯಾಗಿ ಬಂದ ಹೊಸ ನಾಯಕಿ ಬಗ್ಗೆ ನಿಮಗೆಷ್ಟು ಗೊತ್ತು?
ಹಲವು ದಶಕಗಳಿಂದಲೂ ಉದಯ ಟಿವಿ ಉತ್ತಮವಾದ ಮನರಂಜನೆ ಕಾರ್ಯಕ್ರಮಗಳನ್ನು ಕೊಡುತ್ತಾ ಜನಮನವನ್ನು ಗೆದ್ದಿದೆ. ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗಿವೆ. ಅತ್ಯುತ್ತಮ ಕಥೆಯುಳ್ಳ ಧಾರಾವಾಹಿಗಳನ್ನು ಪ್ರಸಾರ ಮಾಡಿ ವೀಕ್ಷಕರ ಮೆಚ್ಚುಗೆ ಪಡೆದಿರುವ ಉದಯವಾಹಿನಿ ನೂರಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ.
ಈಗಾಗಲೇ ಉದಯ ಟಿವಿಯಲ್ಲಿ ಹಲವು ಧಾರಾವಾಹಿಗಳು ಮೂಡಿ ಬರುತ್ತಿವೆ. ಈಗ ಇದರ ಜೊತೆಗೆ ಮತ್ತೊಂದು ಹೊಸ ಧಾರಾವಾಹಿ ಶುರುವಾಗಿದೆ.

ಸೋಮವಾರದಿಂದಲೇ ಉದಯ ಟಿವಿಯಲ್ಲಿ 'ಪ್ರೀತಿಯ ಅರಸಿ' ಎಂಬ ನೂತನ ಸೀರಿಯಲ್ ಆರಂಭವಾಗಿದ್ದು, ಇದೂ ಕೂಡ ಪ್ರೇಮ ಕಥೆಯನ್ನು ಆಧರಿಸಿದೆ.
ಪ್ರತಿದಿನ ರಾತ್ರಿ 9ಕ್ಕೆ ಹೊಸ ಧಾರಾವಾಹಿ ಪ್ರಸಾರವಾಗುತ್ತಿದ್ದು, ಈ ಧಾರಾವಾಹಿಯಲ್ಲಿ ನಾಯಕ ರಾಕಿ ಹಾಗೂ ನಾಯಕಿ ಅಂಜಲಿ ಇಬ್ಬರೂ ವಿಚಿತ್ರ ಆಲೋಚನೆಗಳನ್ನು ಹೊಂದಿರುವವರು. ನಾಯಕಿ ಅಂಜಲಿ ಕಂಪನಿಯ ಸಿಇಒ ಆಗಬೇಕೆಂದು ಕನಸು ಕಾಣುತ್ತಿದ್ದಾಳೆ. ಈಗಾಗಲೇ, 99 ಗಂಡುಗಳನ್ನು ನೋಡಿ ರಿಜೆಕ್ಟ್ ಮಾಡಿರುವ ನಾಯಕಿಗೆ ಅಜ್ಜಿಯೇ ಎಲ್ಲಾ.
ಮತ್ತೊಂದು ಹೊಸ ಧಾರಾವಾಹಿ ಶುರು
ಗಂಡು-ಹೆಣ್ಣು ಎನ್ನುವುದಕ್ಕಿಂತಲೂ ಇಬ್ಬರೂ ಸಮಾನರು ಎಂದು ನಂಬಿರುವವಳು. ಇನ್ನು ನಾಯಕ ರಾಕಿ ಕುಟುಂಬವೇ ಸರ್ವಸ್ವ ಎಂದು ನಂಬಿದ್ದಾನೆ. ಕುಟುಂಬಕ್ಕಾಗಿ ಸದಾ ಮಿಡಿಯುವ ರಾಕಿ ಅಂಜಲಿಯನ್ನು ಹೇಗೆ ಭೇಟಿಯಾಗುತ್ತಾನೆ..? ನಾಯಕಿ ನಾಯಕ ಇಬ್ಬರೂ ಒಬ್ಬರನ್ನು ಮತ್ತೊಬ್ಬರು ಒಪ್ಪಿ ಹೇಗೆ ಮದುವೆಯಾಗುತ್ತಾರೆ. ಇವರಿಬ್ಬರ ನಡುವೆ ಪ್ರೀತಿ ಹೇಗೆ ಚಿಗುರೊಡೆಯುತ್ತದೆ ಎಂಬುದೇ ಕುತೂಹಲ.
ಧಾರಾವಾಹಿಯಲ್ಲಿ ಯಾರೆಲ್ಲಾ ಇದ್ದಾರೆ..?
ಇನ್ನು 'ಪ್ರೀತಿಯ ಅರಸಿ' ಧಾರಾವಾಹಿಯನ್ನು ಶೃತಿ ನಾಯ್ಡು ಅವರು ನಿರ್ದೇಶಿಸುತ್ತಿದ್ದು, ರಮೇಶ್ ಇಂದಿರಾ ಬಂಡವಾಳ ಹೂಡಿದ್ದಾರೆ. ಈ ಧಾರಾವಾಹಿಯಲ್ಲಿ ಪೃಥ್ವಿ ಶೆಟ್ಟಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ನಾಯಕಿಯಾಗಿ ಹೊಸ ಪ್ರತಿಭೆಗೆ ಅವಕಾಶ ಮಾಡಿಕೊಟ್ಟಿದ್ದು, ರಕ್ಷಾ ನಿಂಬರ್ಗಿ ನಾಯಕಿ ಅಂಜಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಗಿರಿಜಾ ಲೊಕೇಶ್, ಜೈಜಗದೀಶ್, ಪದ್ಮಾವಾಸಂತಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉಳಿದಂತೆ ರಾಧಾ ಜೈರಾಮ್, ಮಿಥುನ್ ತೇಜಸ್ವಿ, ನಾಗೇಂದ್ರ ಅರಸ್, ವೆಂಕಟೇಶ್, ಪ್ರತಿಮಾ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕ ಪೃಥ್ವಿ ನಟಿಸಿರುವ ಧಾರಾವಾಹಿಗಳು
ನಟ ಪೃಥ್ವಿ ಶೆಟ್ಟಿ ಈಗಾಗಲೇ ಕೆಲ ಧಾರಾವಾಹಿಗಳಲ್ಲಿ ನಟಿಸಿ, ವೀಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ನಾಗಪಂಚಮಿ ಧಾರಾವಾಹಿಯಲ್ಲೂ ಪೃಥ್ವಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ, ಪರಭಾಷೆಯಲ್ಲೂ ಪೃಥ್ವಿ ನಟಿಸಿದ್ದು, ತೆಲುಗಿನ 'ಮಹಿಷಾ' ಎಂಬ ಸಿನಿಮಾಗೆ ಬಣ್ಣ ಹಚ್ಚಿದ್ದಾರೆ. ಸದ್ಯ ಈಗ ನಾಯಕನ ಪಾತ್ರದಲ್ಲಿ 'ಪ್ರೀತಿಯ ಅರಸಿ' ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಧಾರಾವಾಹಿ ನಾಯಕ ಪೃಥ್ವಿ ಅವರಿಗೆ ದೊಡ್ಡ ಬ್ರೇಕ್ ತಂದು ಕೊಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಯಾರು ನಾಯಕಿ ರಕ್ಷಾ ನಿಂಬರ್ಗಿ?
ಇನ್ನು ನಾಯಕಿ ಪಾತ್ರಕ್ಕೆ ಹೊಸ ನಟಿಯ ಆಗಮನವಾಗಿದ್ದು, ಆಕೆಯ ಹೆಸರು ರಕ್ಷಾ ನಿಂಬರ್ಗಿ. ಈಕೆ ಮಾಡೆಲ್ ಆಗಿದ್ದು, ಈಗ ನಟಿಯಾಗುವ ಕನಸು ಹೊತ್ತು ಬಂದಿದ್ದಾರೆ. ಮೂಲತಃ ಹುಬ್ಬಳ್ಳಿಯವರಾದ ರಕ್ಷಾ ಅವರು ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. '1/2 ಹಾಫ್' ಎಂಬ ಸಿನಿಮಾಗೂ ಕೂಡಾ ರಕ್ಷಾ ಬಣ್ಣ ಹಚ್ಚಿದ್ದು, ಮತ್ತೊಂದು ಚಿತ್ರದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ಕಿರುತೆರೆಗೆ ಎಂಟ್ರಿ ಕೊಡುವ ಮೂಲಕ ಹೊಸ ಹೆಜ್ಜೆ ಇಟ್ಟಿದ್ದು. ರಕ್ಷಾ ಅವರಿಗೆ ಒಳ್ಳೆಯದಾಗಲಿ ಎಂದು ಹರಸೋಣ.


Click it and Unblock the Notifications











