'ಕನ್ನಡ ಮೀಡಿಯಂ ಕಾವೇರಿ'ಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಲು ಬಂದ ಪ್ರಿಯಾ ಆಚಾರ್
ವಿಭಿನ್ನ ರೀತಿಯ ರಿಯಾಲಿಟಿ ಶೋಗಳ ಜೊತೆಗೆ ವಿನೂತನ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೆ ಉಣಬಡಿಸುತ್ತಿರುವ ವಾಹಿನಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯೂ ಒಂದು.
ಇದೇ ಸ್ಟಾರ್ ಸುವರ್ಣದಲ್ಲಿ 'ಕಾವೇರಿ ಕನ್ನಡ ಮೀಡಿಯಂ' ಎನ್ನುವ ಹೊಸ ಧಾರಾವಾಹಿಯೊಂದು ಶೀಘ್ರದಲ್ಲಿ ಶುರುವಾಗಲಿದ್ದು ಅದರಲ್ಲಿ ನಾಯಕಿ ಕಾವೇರಿಯಾಗಿ ಪ್ರಿಯಾ ಜೆ ಆಚಾರ್ ಅಭಿನಯಿಸುತ್ತಿದ್ದಾರೆ.

'ಗಟ್ಟಿಮೇಳ' ಮೂಲಕ ಕಿರುತೆರೆಗೆ ಎಂಟ್ರಿ
ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ನಾಯಕಿಯಾಗಿ ನಟಿಸಲಿರುವ ಪ್ರಿಯಾ ಜೆ ಆಚಾರ್ ಕಿರುತೆರೆಗೆ ಕಾಲಿಟ್ಟಿದ್ದು ಪೋಷಕ ಪಾತ್ರದ ಮೂಲಕ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ'ದಲ್ಲಿ ನಾಯಕಿ ಅಮೂಲ್ಯ ತಂಗಿ ಅದಿತಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಪ್ರಿಯಾ ಜೆ ಆಚಾರ್ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.
ಐಶ್ವರ್ಯಾಳಾಗಿ ತೆಲುಗಿಗೆ ಎಂಟ್ರಿ
ತೆಲುಗಿನ 'ಆನಂದರಾಗಂ' ಧಾರಾವಾಹಿಯಲ್ಲಿ ನಾಯಕಿ ಐಶ್ವರ್ಯಾ ಆಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಗೆ ಪಾದಾರ್ಪಣೆ ಮಾಡಿದ ಪ್ರಿಯಾ ಜೆ ಆಚಾರ್ ಅಲ್ಲಿಯೂ ಕೂಡಾ ವೀಕ್ಷಕರ ಮನ ಸೆಳೆಯುವಲ್ಲಿ ಸೈ ಎನಿಸಿಕೊಂಡರು. ಮನೋಜ್ಞ ನಟನೆಯ ಮೂಲಕ ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ ಪ್ರಿಯಾ ಜೆ ಆಚಾರ್ ಸಿನಿಮಾದಲ್ಲಿಯೂ ಮಿಂಚಿದ ಪ್ರತಿಭೆ.

ಧಮಾಕಾದಲ್ಲಿ ನಟನೆ
ಲಕ್ಷ್ಮಿ ರಮೇಶ್ ನಿರ್ದೇಶನದ ಸಿನಿಮಾ ಧಮಾಕಾದಲ್ಲಿ ನಟಿಸುವ ಮೂಲಕ ಹಿರಿತೆರೆಯಲ್ಲಿಯೂ ಕಮಾಲ್ ಮಾಡಿದ್ದಾರೆ ಪ್ರಿಯಾ. ಶಿವರಾಜ್ ಕೆ.ಆರ್.ಪೇಟೆ ಮತ್ತು ನಯನಾ ಮುಖ್ಯಭೂಮಿಕೆಯಲ್ಲಿರುವ 'ಧಮಾಕಾ' ಸಿನಿಮಾದಲ್ಲಿ ಪ್ರಿಯಾ ಆಚಾರ್ ನಟಿಸಿದ್ದು, ಸಿದ್ಧು ಮೂಲಿಮನಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಟಿಕ್ ಟಾಕ್ ಸ್ಟಾರ್ ಆಗಿ ಫೇಮಸ್
ಸಣ್ಣ ವಯಸ್ಸಿನಿಂದಲೂ ನಟನೆಯಲ್ಲಿ ವಿಶೇಷ ಒಲವು ಹೊಂದಿದ್ದ ಪ್ರಿಯಾ ಆಚಾರ್ ಟಿಕ್ ಟಾಕ್ ಸ್ಟಾರ್ ಆಗಿಯೂ ಗುರುತಿಸಿಕೊಂಡಿದ್ದರು. ಬಹುಶಃ ಇಂದು ಆಕೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರೆ ಅದಕ್ಕೆ ಟಿಕ್ ಟಾಕ್ ವಿಡಿಯೋಗಳೇ ಕಾರಣ. ಅವರ ಟಿಕ್ ಟಾಕ್ ವಿಡಿಯೋಗಳಿಂದಲೇ ನಟಿಯಾಗುವ ಸುವರ್ಣಾವಕಾಶ ಪಡೆದುಕೊಂಡಿದ್ದರು.
ರಿಯಾಲಿಟಿ ಶೋವಿನಲ್ಲಿ ಭಾಗಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್'ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಪ್ರಿಯಾ ಆಚಾರ್ ಕಿರುತೆರೆ ನಟ ಅಭಿಷೇಕ್ ದಾಸ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಪ್ರತಿ ವಾರವೂ ವಿಭಿನ್ನ ರೀತಿಯ ಕಾನ್ಸೆಪ್ಟ್‌ಗಳೊಂದಿಗೆ ವೀಕ್ಷಕರ ಜೊತೆಗೆ ತೀರ್ಪುಗಾರರ ಮನ ಸೆಳೆಯುವಲ್ಲಿ ಈ ಜೋಡಿ ಯಶಸ್ವಿಯಾಗಿತ್ತು.
ಸಹನಟನೊಂದಿಗೆ ಮದುವೆ
'ಧಮಾಕಾ' ಸಿನಿಮಾದಲ್ಲಿ ತಮ್ಮ ಜೊತೆ ನಾಯಕನಾಗಿ ನಟಿಸಿದ್ದ ಸಿದ್ಧು ಮೂಲಿಮನಿ ಜೊತೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು ನಟಿ ಪ್ರಿಯಾ ಆಚಾರ್. ಡ್ಯಾನ್ಸ್ ಕರ್ನಾಟದ ಡ್ಯಾನ್ಸ್ ಫ್ಯಾಮಿಲಿ ವಾರ್ ರಿಯಾಲಿಟಿ ಶೋವಿನಲ್ಲಿ ಭಾಗವಹಿಸಿದ್ದ ಪ್ರಿಯಾ ಆಚಾರ್ ಸಿದ್ಧು ಮೂಲಿಮನಿ ನಡುವೆ ಸ್ನೇಹ ಆರಂಭವಾಗಿತ್ತು. ಮುಂದೆ 'ಧಮಾಕಾ' ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ಈ ಜೋಡಿಯ ನಡುವೆ ಪ್ರೀತಿಯು ಉಂಟಾಯಿತು. ಮನೆಯವರ ಒಪ್ಪಿಗೆ ಪಡೆದ ಈ ಜೋಡಿ ಇತ್ತೀಚೆಗ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.


Click it and Unblock the Notifications











