ಸೂಪರ್‌ಸ್ಟಾರ್ ರಚನಾ ಜೊತೆ ಟ್ವಿಂಕಲ್ ಮಿಂಚಿದ ಪ್ರಿಯಾಂಕಾ ಕಾಮತ್; ಈ ನಟಿಯ ಹಿನ್ನೆಲೆಯೇನು?
ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಚೆಂದುಳ್ಳಿ ಚೆಲುವೆಯ ಹೆಸರು ಪ್ರಿಯಾಂಕಾ ಕಾಮತ್. ನವಿರಾದ ಅಭಿನಯದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣವನ್ನೇ ಉಣಬಡಿಸುತ್ತಿದ್ದ ಪ್ರಿಯಾಂಕಾ ಕಾಮತ್ ಇದೀಗ ನಟಿಯಾಗಿ ಮೋಡಿ ಮಾಡುತ್ತಿದ್ದಾರೆ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ನಿನಗಾಗಿ' ಧಾರಾವಾಹಿಯಲ್ಲಿ ಪ್ರಿಯಾಂಕಾ ಕಾಮತ್ ಅಭಿನಯಿಸುತ್ತಿದ್ದಾರೆ.
ನಾಯಕಿ ಸೂಪರ್ ಸ್ಟಾರ್ ಅರ್ಚನಾ ಅವರ ಪರ್ಸನಲ್ ಅಸಿಸ್ಟೆಂಟ್ ಪಾತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ಟ್ವಿಂಕಲ್ ಎನ್ನುವ ಪಾತ್ರಕ್ಕೆ ಪ್ರಿಯಾಂಕಾ ಜೀವ ತುಂಬುತ್ತಿದ್ದು, ನಟನೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಅಸಲಿಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆಯಾಗಿರುವ ಈಕೆ ಪಿಕೆ ಎಂದೇ ಕಿರುತೆರೆಯಲ್ಲಿ ಫೇಮಸ್ಸು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ 'ಚಾಂಪಿಯನ್'ನ ಆಡಿಶನ್‌ಗೆ ಪ್ರಿಯಾಂಕಾ ಬಂದಿದ್ದರು. ಆಶ್ಚರ್ಯ ಎಂಬಂತೆ ಆಡಿಶನ್ ನೀಡಿದ ನಟಿ ಆಯ್ಕೆಯೂ ಆಗಿದ್ದರು. ಆ ಸಮಯದಲ್ಲಿ ನಟಿಗೆ ಅಂತಿಮ ವರ್ಷದ ಪರೀಕ್ಷೆ ನಡೆಯುತ್ತಿದ್ದ ಕಾರಣ ಕೊನೆಯ ಆಡಿಶನ್‌ಗೆ ಬರುವುದು ಕಷ್ಟ ಎಂದು ತಿಳಿಸಿದ್ದರಂತೆ. ಆದರೆ, ಪರೀಕ್ಷೆ ಮುಗಿದ ಬಳಿಕ ಆಡಿಶನ್‌ಗೆ ಅಟೆಂಡ್ ಆಗುವ ಅವಕಾಶವೂ ಆಕೆಗೆ ದೊರಕಿತ್ತು. ಆಯ್ಕೆಯಾದ ನಟಿ ಬರೋಬ್ಬರಿ ಮೂರು ತಿಂಗಳುಗಳ ಕಾಲ ಆ ಶೋನಲ್ಲಿ ಇದ್ದು ಪ್ರೇಕ್ಷಕರನ್ನು ರಂಜಿಸಿದ್ದರು.
'ಚಾಂಪಿಯನ್' ರಿಯಾಲಿಟಿ ಶೋ ಬಳಿಕ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದ್ದ ಹೊಚ್ಚ ಹೊಸ ಶೋ 'ಮಜಾಭಾರತ'ದಲ್ಲಿ ಭಾಗವಹಿಸುವಂತೆ ಪ್ರಿಯಾಂಕಾ ಅವರಿಗೆ ವಾಹಿನಿಯಿಂದ ಕರೆ ಬಂದಿತಂತೆ. ಆಫರ್ ಬಂದಾಗ ಪ್ರಿಯಾಂಕಾ ಅವರಿಗೆ ಸಹಜವಾಗಿ ಖುಷಿ ಆದರೂ ನಟನೆಯ ಬಗ್ಗೆ ಅರಿವಿಲ್ಲದ ಕಾರಣ ಒಪ್ಪಲು ಭಯವಾಯಿತಂತೆ. ವಾಹಿನಿಯವರ ಒತ್ತಾಯಕ್ಕೆ ಮಣಿದು ಒಪ್ಪಿದರಂತೆ.
ಮುಂದೆ 'ಮಜಾಭಾರತ' ಶೋವಿನ ಮೂರು ಸೀಸನ್ ಗಳಲ್ಲೂ ಕಾಣಿಸಿಕೊಂಡ ಪ್ರಿಯಾಂಕಾ ಮುಂದೆ 'ಗಿಚ್ಚಿಗಿಲಿಗಿಲಿ' ಶೋವಿನಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಲ್ಲದೆ ನಟನೆಯ ಮೂಲಕ ವೀಕ್ಷಕರನ್ನು ಸೆಳೆದಿದ್ದರು. ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ನಟನೆಯ 'ಸಿಂಗ' ಸಿನಿಮಾದಲ್ಲಿ ನಾಯಕಿಯ ಗೆಳತಿಯಾಗಿಯೂ ಈಕೆ ಅಭಿನಯಿಸಿದ್ದಾರೆ.

ಸದ್ಯ ಪ್ರಿಯಾಂಕಾ ಕಾಮತ್ ಇದೀಗ ಟ್ವಿಂಕಲ್ ಆಗಿ ಕಿರುತೆರೆಯಲ್ಲಿ ನಟಿಸುತ್ತಿದ್ದು ಆ ಮೂಲಕ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.


Click it and Unblock the Notifications











