'ಆಸೆ' ಧಾರಾವಾಹಿ ನಟಿಗೆ ಉಮಾಶ್ರೀ, ಉಪೇಂದ್ರ ಅಂದ್ರೆ ಬಲು ಇಷ್ಟ; ಈ ನಟಿಯ ಹಿನ್ನೆಲೆಯೇನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಆಸೆ'. ಈ ಧಾರಾವಾಹಿಯಲ್ಲಿ ನಾಯಕಿ ಮೀನಾ ಪಾತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ. ನಾಯಕಿ ಮೀನಾಳದ್ದು ಬಡಕುಟುಂಬ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಆಕೆಯ ಮುಖದ ಮೇಲೆ ಮಂದಹಾಸ ಯಾವತ್ತೂ ಇರುತ್ತಿತ್ತು. ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸು ಕಂಡಿದ್ದ ಮೀನಾ ಮನೆಯ ಆರ್ಥಿಕ ಸಂಕಷ್ಟ ಮನಗಂಡು ಅರ್ಧದಲ್ಲಿಯೆ ಓದನ್ನು ಬಿಟ್ಟಳು. ಹೂವಿನ ವ್ಯಾಪಾರ ಮಾಡಿ ಕುಟುಂಬದ ಏಳಿಗೆಗೆ ಶ್ರಮಿಸುವ ಹೆಣ್ಣು ಮಗಳು ಮೀನಾ. ಜೊತೆಗೆ ತಮ್ಮ ತಂಗಿಯ ವಿದ್ಯಾಭ್ಯಾಸಕ್ಕಾಗಿ ತನ್ನ ಜೀವನವನ್ನೇ ಈಕೆ ಮುಡಿಪಾಗಿಟ್ಟಿದ್ದಾಳೆ ಮೀನಾ.
ಮೀನಾ ಆಗಿ ನಟಿಸುತ್ತಿರುವ ಪ್ರಿಯಾಂಕಾ ಅವರಿಗೆ ನಟನೆಯ ಗೀಳು ಅಂಟಿಕೊಂಟಿದ್ದು ಥಿಯೇಟರ್ ಕ್ಲಬ್ ಮೂಲಕ. ವಿಜಯನಗರ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಓದುತ್ತಿದ್ದ ಈ ನಟಿ ಥಿಯೇಟರ್ ಕ್ಲಬ್ ಸೇರಿಕೊಂಡರು. ಬೇಲೂರು ರಘುನಂದನ್ ಅವರ ರಂಗಚಿರಂತನ ಕ್ಲಬ್ ಸೇರಿದ ಪ್ರಿಯಾಂಕಾ ಆ ರಂಗ ಚಟುವಟಿಕೆಗಳಿಂದ ಪ್ರೇರಣೆ ಪಡೆದುಕೊಂಡರು. "ನಾನು ನಟಿಯಾಗಲು ರಂಗಚಿರಂತನ ಥಿಯೇಟರ್ ಕ್ಲಬ್ ಕಾರಣ. ಅಲ್ಲಿಗೆ ಸೇರಿದ ನಾನು ನಟನೆಯ ರೀತಿ ನೀತಿ ತಿಳಿದುಕೊಂಡೆ" ಎಂದು ಹೇಳುತ್ತಾರೆ ಪ್ರಿಯಾಂಕಾ.

"ನಾನು ಸೈನ್ಸ್ ವಿದ್ಯಾರ್ಥಿನಿಯಾಗಿದ್ದರಿಂದಲೇ ಪ್ರತಿದಿನವೂ ರಂಗಚಟುವಟಿಕೆ ತರಗತಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಒಟ್ಟಾರೆಯಾಗಿ ಎರಡರಿಂದ ಮೂರು ತಿಂಗಳುಗಳ ಕಾಲ ನಾನು ಈ ತರಗತಿಗೆ ಹೋಗಿದ್ದೆ. ನಂತರ ಹೋಗ್ಲಿಕ್ಕೆ ಆಗ್ಲಿಲ್ಲ. ಆದ್ರೆ ಈಗ ನಾನು ಕ್ಲಾಸ್ ಮಿಸ್ ಮಾಡ್ಕೊಂಡೆ ಅಂತ ಅನ್ನಿಸ್ತಿದೆ. ಇನ್ನು ಹೆಚ್ಚಿನ ತರಗತಿಗೆ ಹೋಗ್ಬೇಕಿತ್ತು ಅಂತ ಈಗ ನನಗೆ ಫೀಲ್ ಆಗ್ತಿದೆ" ಎಂದು ಫಿಲ್ಮಿಬೀಟ್ ಜೊತೆಗೆ ಪ್ರಿಯಾಂಕಾ ಹಂಚಿಕೊಂಡಿದ್ದಾರೆ.
"ನನಗೆ ಮೊದಲಿನಿಂದಲೂ ನಟನೆಯತ್ತ ವಿಶೇಷ ಒಲವಿತ್ತು. ಇದರ ಜೊತೆಗೆ ನಾನು ರೀಲ್ಸ್ ಕೂಡಾ ಮಾಡ್ತಿದ್ದೆ. ಇನ್‌ಸ್ಟಾಗ್ರಾಂನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ನಾನು ಮಾಡಿರುವಂತಹ ವಿಡಿಯೋ, ರೀಲ್ಸ್, ಟಿಕ್ ಟಾಕ್‌ಗಳನ್ನು ಹಂಚಿಕೊಳ್ಳುತ್ತಿದ್ದೆ. ಸೀರಿಯಲ್ ನೋಡ್ತಿದ್ದಾಗ ನಾನು ಕೂಡಾ ನಟಿಯಾಗಬೇಕು ಎಂದು ಅಂದುಕೊಳ್ಳುತ್ತಿದ್ದೆ. ಆಗ ತಾನೇ ಡಿಗ್ರಿ ಮುಗಿದ ಕಾರಣ ಆಡಿಶನ್‌ಗಳನ್ನು ಅಟೆಂಡ್ ಮಾಡುವ ತಯಾರಿ ಮಾಡುತ್ತಿದ್ದೆ. ಫಿಸಿಕಲಿ ಹಾಗೂ ಮೆಂಟಲಿ ಆಗಿ ಪ್ರೀಪೇರ್ ಮಾಡಿಕೊಳ್ಳುತ್ತಿದ್ದೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ಪ್ರಿಯಾಂಕಾ ಹೇಳುತ್ತಾರೆ.
"ಆ ಸಮಯದಲ್ಲಿ ಕಲರ್ಸ್ ಕನ್ನಡ ವಾಹಿನಿಯಿಂದ ಕಾಲ್ ಬಂದಿತ್ತು. ಆಡಿಶನ್ ಇದೆ, ಸ್ವಲ್ಪ ಅರ್ಜೆಂಟ್ ಇದೆ, ಈಗಲೇ ಭಾಗವಹಿಸಿ ಎಂದು ಕಾಲ್‌ನಲ್ಲಿ ಹೇಳಿದ್ದರು. ಶಾಕ್ ಆಯಿತು ನನಗೆ. ನಿಜಾನಾ, ಸುಳ್ಳಾ ಎಂದು ನಂಬಲಾಗಲಿಲ್ಲ. ಕನ್‌ಫ್ಯೂಸ್‌ನಲ್ಲಿದ್ದೆ. ಸರಿ, ಹೋಗೋಣ, ಟ್ರೈ ಮಾಡೋಣ ಅಂತ ಹೋದೆ. ಅವರು ಲಂಗ ದಾವಣಿ ಹಾಕ್ಕೊಂಡು ಬನ್ನಿ ಅಂತ ಹೇಳಿದ್ರು. ಹಾಗೇ ಹೋಗಿದ್ದೆ. ಮತ್ತೆ ಆಡಿಶನ್‌ನಲ್ಲಿ ಅವ್ರು ಕೊಟ್ಟ ಕ್ಯಾಸ್ಟ್ಯೂಮ್ ಹಾಕೊಂಡೆ" ಎಂದು ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ಹೇಳುತ್ತಾರೆ ಪ್ರಿಯಾಂಕಾ.

"ಪಾತ್ರದ ಬಗ್ಗೆ ಹೇಳಿದರು. ಸೀನ್ ಪೇಪರ್ ಕೂಡಾ ಕೊಟ್ಟರು. ಮೊದಲ ಆಡಿಶನ್ ಆದ ಕಾರಣ ನರ್ವಸ್ ಆಗಿದ್ದೆ. ಲುಕ್ ಟೆಸ್ಟ್ ಆಯ್ತು. ಆಡಿಶನ್ ಕೊಟ್ಟೆ. ಮರುದಿನ ಬನ್ನಿ ಅಂದ್ರು. ನಾನು ಆಯ್ಕೆ ಆಗ್ತೀನಾ, ಇಲ್ವಾ ಎಂಬ ಗೊಂದಲ ಕಾಡ್ತಿತ್ತು. ಜೊತೆಗೆ ಮನೆಯಲ್ಲೂ ಹೇಳೋದಕ್ಕೆ ಹೋಗ್ಲಿಲ್ಲ. ನಾನು ಮಾಡೆಲಿಂಗ್ ಮಾಡ್ತಿದ್ದೆ. ಮೇಕ್ ಓವರ್ ಶೂಟ್‌ಗಳಿಗೆ ಹೋಗ್ತಿದ್ದೆ. ಅದನ್ನೇ ಹೇಳಿದ್ದೆ. ಮರುದಿನ ಕಾಲ್ ಮಾಡಿ ನೀವು ಸೆಲೆಕ್ಟ್ ಆಗಿದ್ದೀರಾ ಎಂದು ಹೇಳಿದ್ರು. ಎರಡು ದಿನ ಆದ ಮೇಲೆ ಪ್ರೋಮೋ ಶೂಟ್, ಶೂಟಿಂಗ್ ಶುರು ಅಂತ ಹೇಳಿದ್ರು. ಇದೆಲ್ಲಾ ನಿಜಾನಾ ಅಲ್ಲ ಕನಸಾ ಎಂದು ಅನ್ನಿಸಿಬಿಟ್ಟಿತ್ತು" ಎಂದು ಪ್ರಿಯಾಂಕಾ ಆ ಅನುಭವಗಳನ್ನು ನೆನಪಿಸಿಕೊಂಡಿದ್ದಾರೆ.
"ಆಡಿಶನ್‌ಗೆ ಅನೇಕ ಜನ ಬಂದಿದ್ರು. ಈಗಾಗಲೇ ಕಿರುತೆರೆಯಲ್ಲಿ ಗುರುತಿಸಿಕೊಂಡವರು ಬಂದಿದ್ರು. ಇವರುಗಳ ಮಧ್ಯೆ ನಾನು ಆಯ್ಕೆಯಾಗುತ್ತಾನಾ ಎಂಬ ಗೊಂದಲ ಕೂಡಾ ಕಾಡಿತ್ತು. ಯಾಕೆಂದ್ರೆ, ಅದು ನಾಯಕಿಯ ಪಾತ್ರ. ನಾನು ಸೈಡ್ ಕ್ಯಾರೆಕ್ಟರ್ ಅಂತ ಅಂದುಕೊಂಡಿದ್ದೆ. ಮೈನ್ ಲೀಡ್ ಅಂತ ಹೇಳಿದಾಗ ಖುಷಿಯಾಯ್ತು. ಮನೆಯಲ್ಲಿ ಹೇಳಿದಾಗಲೂ ಎಲ್ಲರೂ ಖುಷಿ ಪಟ್ಟರು. ಪ್ರೋಮೋ ಶೂಟ್ ಆಯ್ತು. ಎರಡು ದಿನಕ್ಕೆ ಟೆಲಿಕಾಸ್ಟ್ ಆಯ್ತು. ಬ್ಯಾನರ್ ಬಂತು. ಪೋಸ್ಟರ್ ಆಯ್ತು. ಫ್ಯಾಮಿಲಿ, ಫ್ರೆಂಡ್ಸ್ ಅವರಿಗೆ ಶಾಕ್ ಆಯ್ತು" ಎಂದು ಆಡಿಷನ್ ದಿನಗಳನ್ನು ಪ್ರಿಯಾಂಕಾ ನೆನೆದಿದ್ದಾರೆ.
"ಇದೀಗ ಆಸೆ ಧಾರಾವಾಹಿಯಲ್ಲಿ ನಾನು ನಟಿಸುತ್ತಿದ್ದೇನೆ. ರಮೇಶ್ ಅರವಿಂದ್ ನಿರ್ಮಾಣದ ಧಾರಾವಾಹಿಯ ಭಾಗವಾಗಿರುವುದಕ್ಕೆ ಖುಷಿ ಇದೆ. ಜೊತೆಗೆ ಹಿರಿಯ ಕಲಾವಿದರುಗಳೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ದೊರಕಿದೆ. ಉತ್ತಮ ಕತೆ, ಪಾತ್ರ ದೊರಕಿದರೆ ನಾನು ಸಿನಿಮಾದಲ್ಲಿ ನಟಿಸಲು ತಯಾರಿದ್ದೇನೆ. ನಟನೆಯ ಹೊರತಾಗಿ ಡ್ಯಾನ್ಸ್ ಕೂಡಾ ನನ್ನ ಆಸಕ್ತಿಯ ಕ್ಷೇತ್ರ. ಈಗ ಅದನ್ನು ಕಲಿಯುತ್ತಿದ್ದೇನೆ" ಎನ್ನುತ್ತಾರೆ. ಅಂದ್ಹಾಗೆ, ಪ್ರಿಯಾಂಕಾಗೆ ಹಿರಿಯ ನಟಿ ಉಮಾಶ್ರೀ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಎಂದರೆ ತುಂಬಾನೇ ಇಷ್ಟ.


Click it and Unblock the Notifications











