ವಸುದೇವ ಕುಟುಂಬ ಕಲಾವಿದರಿಗೆ ಸಿಗದ ಸಂಭಾವನೆ ; ನಡುರಸ್ತೆಯಲ್ಲಿ ಬಿಗ್ ಬಾಸ್ ಹಂಸ ಅಬ್ಬರಕ್ಕೆ ಬೆದರಿ ಓಡಿದ ನಿರ್ಮಾಪಕ
ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ .. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಈ ಕಡೆ ಬರುತ್ತಾರೆ. ಕೆಲವರು ತೆರೆಯ ಮುಂದೆ ಬಂದರೆ, ಕೆಲವರು ತೆರೆಯ ಹಿಂದೆ ಕಸರತ್ತು ಮಾಡುತ್ತಾರೆ. ಹಣವಂತರು ನಿರ್ಮಾಪಕ ಎಂಬ ಸಿಂಹಾಸನದ ಮೇಲೆ ವಿರಾಜಮಾನರಾಗುತ್ತಾರೆ.
ಆದರೆ.. ಅಂದುಕೊಂಡಂತೆ ಅಲ್ಲ ಈ ಬಣ್ಣದ ಲೋಕ. ಲಾಭ ಮಾಡುವ ಆಸೆಯಲ್ಲಿ ಬರುವ ನಿರ್ಮಾಪಕರ ಪಾಲಿಗೆ ಇದು ಕೆಂಡದ ಹಾದಿ. ನೀರಿನಂತೆ ಹಣ ಪೋಲಾಗುತ್ತಿರುತ್ತೆ. ಇನ್ನೂ ಆರ್ಥಿಕ ಶಿಸ್ತು ಸರಿಯಾದ ರೂಪುರೇಶೆ ಇರದಿದ್ದರೆ ಕಥೆ ಖತಂ. ಇದಕ್ಕೆ ''ವಸುಧೇವ ಕುಟುಂಬ'' ಧಾರಾವಾಹಿಯ ಸುತ್ತ ಎದ್ದ ವಿವಾದದ ಹುತ್ತ ಮತ್ತು ಇಂದು (ಮೇ 1) ಕಾರ್ಮಿಕರ ದಿನದಂದೇ ನಡೆದ ಬೀದಿ ರಂಪ ಸದ್ಯದ ಉದಾಹರಣೆ.

ಹೌದು, ''ವಸುಧೇವ ಕುಟುಂಬ''.. ಕಳೆದ ಸೆಪ್ಟೆಂಬರ್ ನಲ್ಲಿ ಶುರುವಾದ ಧಾರಾವಾಹಿ. ಖ್ಯಾತ ನಟ ಅವಿನಾಶ್ ಅವರನ್ನು ಮತ್ತೆ ಕಿರುತೆರೆಗೆ ಕರೆದುಕೊಂಡು ಬಂದ ಈ ಧಾರಾವಾಹಿಯಲ್ಲಿ ಜನಪ್ರಿಯ ನಟಿ ಅಂಜಲಿ ಕೂಡ ಇದ್ದಾರೆ.
ಇವರಲ್ಲದೇ ಭಾವನಾ ಪಾಟೀಲ್, ಚೈತ್ರ ತೋಟದ್, ಬೃಂದಾ ಕಶ್ಯಪ್, ಹಂಸ ನಾರಾಯಣಸ್ವಾಮಿ, ಭಗತ್, ಅನೂಪ್, ಹೀಗೆ ಹಲವರು ಈ ವಸುಧೇವ ಕುಟುಂಬದ ಭಾಗವಾಗಿದ್ದಾರೆ.
ಆದರೆ.. ಒಂದೇ ಬೇರು, ಕವಲು ನೂರು ಎಂಬ ಅಡಿ ಬರಹ ಹೊಂದಿರುವ ಈ ವಸುಧೇವ ಕುಟುಂಬದ ಮನೆ ಬಾಗಿಲು ಸದ್ಯ ಒಡೆದು ಚೂರು ಆಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ನಿರ್ಮಾಪಕ ನಡು ರಸ್ತೆಯಲ್ಲಿ ಅಡ್ಡಹಾಕಿ ಪೇಮೆಂಟ್ ಕೊಡುವಂತೆ ಧಾರಾವಾಹಿಯ ನಟಿಯರಾದ ಹಂಸ ಮತ್ತು ಚೈತ್ರಾ ಕೇಳಿದ್ದು, ನಿರ್ಮಾಪಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಹೌದು, ಅಸಲಿಗೆ ಪ್ರತಿ ತಿಂಗಳು 25ರಂದು ''ವಸುಧೇವ ಕುಟುಂಬ'' ಧಾರಾವಾಹಿಯ ಕಲಾವಿದರಿಗೆ ನಿರ್ಮಾಣದ ಜವಾಬ್ಧಾರಿ ಹೊತ್ತಿರುವ ಕೋರಮಂಗಲ ಟಾಕೀಸ್‌ನ ಅನಿಲ್ ನೀಡಬೇಕಿತ್ತು. ಆದರೆ.. ಕಳೆದೆರಡು ತಿಂಗಳಿಂದ ಹಣ ಸಂದಾಯವಾಗಿಲ್ಲ.

ಮದುವೆಯ ಸನ್ನಿವೇಶದ ಚಿತ್ರೀಕರಣಕ್ಕೆ ಹೆಚ್ಚಿನ ಹಣ ಪೋಲಾಗಿರಬಹುದು ಎಂದುಕೊಂಡು ಕಲಾವಿದರು ಕೂಡ, ನಿರ್ಮಾಪಕರು ಮಾಡ್ಕೊಂಡ ಮನವಿಗೆ ಮನ್ನಣೆ ಹಾಕಿದ್ದಾರೆ. ಮಾರ್ಚ್ ಹತ್ತರಂದು ಸಂಭಾವನೆ ಸಿಗಬಹುದೆಂದು ಕಾದು ಕುಂತಿದ್ದಾರೆ. ಆದರೆ, ಮಾರ್ಚ್ ಕಳೆದು ಏಪ್ರಿಲ್ ಮುಗಿದರೂ ಕೂಡ ಬರಬೇಕಿದ್ದ ಹಣ ಬಂದಿಲ್ಲ.
''ಬಿಗ್ ಬಾಸ್'' ಖ್ಯಾತಿಯ ಹಂಸ ಅವರಿಗೆ ಮೂರು ಲಕ್ಷ ರೂಪಾಯಿ ಬಾಕಿ ಹಣ ನಿರ್ಮಾಪಕರು ಉಳಿಸಿಕೊಂಡಿದ್ದಾರೆ. ಚೈತ್ರಾ ಅವರ ಕಥೆ ಕೂಡ ಸೇಮ್. ಕೇಳಿದರೆ ಉತ್ತರ ಕೊಡಲ್ಲ, ಫೋನ್ ರಿಸೀವ್ ಮಾಡಲ್ಲ. ಹೀಗಾಗಿಯೇ ಇಂದು (ಮೇ 1)
ನಾಗರಬಾವಿಯಲ್ಲಿ ನಿರ್ಮಾಪಕರು ನಡೆಸುತ್ತಿರುವ ''ತತ್ಸವಿ ಹೋಟೆಲ್'' ಬಳಿ ಯಾವ ಮುನ್ಸೂಚನೆ ನೀಡದೇ ಹಂಸ, ಚೈತ್ರಾ ಹಾಗೂ ಯೂನಿಟ್ನ ಇತರೆ ಕೆಲವು ಮಂದಿ ಬಂದಿದ್ದಾರೆ. ನಿರ್ಮಾಪಕರನ್ನು ಸಂಭಾವನೆಗಾಗಿ ಒತ್ತಾಯಿಸಿದ್ದಾರೆ. ಆದರೆ ಹಣ ನೀಡದ ನಿರ್ಮಾಪಕರು ರೌಡಿಸಂ ಮಾಡುತ್ತಿದ್ದೀರಾ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಹಂಸಾ ಗುಡುಗುತ್ತಿದ್ದಂತೆಯೇ ನಿರ್ಮಾಪಕ ಅನಿಲ್ ತಮ್ಮ ಪತ್ನಿ ಜೊತೆ ಅಲ್ಲಿಂದ ಪಲಾಯನ ಮಾಡಿದ್ದಾರೆ.
ಈ ಕುರಿತು ಮಾಧ್ಯಮದವರ ಎದುರು ಮಾತನಾಡಿರುವ ಹಂಸಾ ಮತ್ತು ಚೈತ್ರಾ, ಇದೊಂದು ಕಚಡಾ ನಿರ್ಮಾಣ ಸಂಸ್ಥೆ, ಯಾರಿಗೂ ಸಹ ಸರಿಯಾಗಿ ಪೇಮೆಂಟ್ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಇವರಿಂದ ಬೇರೆ ಧಾರಾವಾಹಿ ಅವಕಾಶವನ್ನೂ ಸಹ ಕಳೆದುಕೊಂಡಿದ್ದೇವೆ ಎಂದಿದ್ದಾರೆ.
ಯೂನಿಟ್ ಅವರನ್ನು ಕ್ಷುಲ್ಲಕವಾಗಿ ನೋಡಿಕೊಂಡಿದ್ದಾರೆ. ಹಳಸಿದ ಅನ್ನ ಹಾಕಿದ್ದಾರೆ ಎಂದು ಕೂಡ ಹೇಳಿರುವ ಹಂಸಾ ನಮಗೆ ಏನೇ ಆರೋಗ್ಯ ಸಮಸ್ಯೆಯಾದರೂ ಕೂಡ ನಾವು ಕೆಲಸ ಮಾಡಿಕೊಡಬೇಕು, ಸಮಾಜದಲ್ಲಿ ನಮಗೆ ಮರ್ಯಾದೆ, ಗೌರವ ಇದೆ ಎಂದು ಸುಮ್ಮನಾಗಿದ್ದೇವು ಆದರೆ ಈಗ ಮಾತನಾಡಲೇಬೇಕಿದೆ ಎಂದು ಹೇಳಿದ್ಧಾರೆ.
ಮುಂದುವರೆದು ನಾವು ಹೊರಗಡೆ ಶೂಟಿಂಗ್‌ಗೆ ಹೋದಾಗ ಮೂಲಭೂತ ವ್ಯವಸ್ಥೆ ಕೂಡ ಮಾಡುವುದಿಲ್ಲ ಎಂದು ಹೇಳಿರುವ ಹಂಸಾ, ಶೌಚಾಲಯದ ವ್ಯವಸ್ಥೆ ಇರಲ್ಲ, ಕುಡಿಯಲು ನೀರು ಕೂಡ ಸಿಗಲ್ಲ ಎಂದು ಹೇಳಿದ್ಧಾರೆ. ಔಟ್‌ಡೋರ್ ಶೂಟ್ ಇದ್ದಾಗ ವಾಶ್‌ರೂಮ್ ಕೂಡ ಇರೋದಿಲ್ಲ, ನಾವು ಬಯಲಿಗೆ ಹೋಗಿದ್ದೇವೆ ಎಂದು ಹೇಳಿರುವ ಹಂಸಾ ಮತ್ತು ಚೈತ್ರಾ ಸದ್ಯ ಬ್ಯಾಟರಾಯಣಪುರ ಪೊಲೀಸ್ ಸ್ಟೇಷನ್ ನಲ್ಲಿ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ಧಾರೆ.


Click it and Unblock the Notifications