ಮಾತೆತ್ತಿದರೆ ಬಾ ಮೊದಲು ನಮ್ಮ ಜೊತೆ ಮಲಗು ಅಂತಾರೆ, ಮನದ ನೋವು ಹಂಚಿಕೊಂಡ ಬಿಗ್ ಬಾಸ್ ಸ್ಫರ್ಧಿ..!
ಬಣ್ಣದ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತದೆ.
ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ. ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ.

ಇನ್ನು ಮಲಯಾಳಂ ಚಿತ್ರರಂಗದಲ್ಲಿನ ಕಾಮಕಾಂಡದ ಕುರಿತು ಕಳೆದ ವರ್ಷ ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಇನ್ನೊಮ್ಮೆ ಈ ಪಾತ್ರಕ್ಕಾಗಿ ಪಲ್ಲಂಗದ ಬಿರುಗಾಳಿ ಎದ್ದಿದೆ. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾಷೆಯಲ್ಲಿ ಕೂಡ ಕಾಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಸನಮ್ ಶೆಟ್ಟಿ ಸದ್ಯದ ಉದಾಹರಣೆ.
ಹೌದು, ಅಂಬುಲಿ, ಕಥಮ್ ಕಥಮ್, ಪ್ರೇಮಿಕುಡು, ಸಿಂಗಂ 123, ಹೀಗೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಸನಮ್ ಶೆಟ್ಟಿ, 2016ರಲ್ಲಿ ಮಿಸ್ ಸೌತ್ ಇಂಡಿಯಾ ಸ್ಫರ್ಧೆಯಲ್ಲಿ ವಿಜೇತರಾಗಿದ್ದಾರು. ಇನ್ನು, 2020ರಲ್ಲಿ ತಮಿಳಿನಲ್ಲಿ ಪ್ರಸಾರವಾದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೂಡ ಸನಮ್ ಭಾಗಿಯಾಗಿದ್ದರು. ಮಹೇಶ್ ಬಾಬು ಅಭಿನಯದ ಶ್ರೀಮಂತುಡು ಚಿತ್ರದಲ್ಲಿ ಕೂಡ ಚಿಕ್ಕ ಪಾತ್ರವನ್ನು ನಿರ್ವಹಿಸಿದ್ದರು.
ಇಂಥಾ ಸನಮ್ ಶೆಟ್ಟಿ ಈಗ ತಮ್ಮ ಬದುಕಿನ ಕಹಿ ಅನುಭವ ಹಂಚಿಕೊಂಡಿದ್ದಾರೆ. ಮಾತೆತ್ತಿದ್ದರೆ ಸಾಕು ನನ್ನ ಜೊತೆ ಹಾಸಿಗೆ ಹಂಚಿಕೊಳ್ಳೋಕೆ ಬಾ ಎಂದು ಕೆಲ ನಿರ್ಮಾಪಕರು ನನಗೆ ಪೀಡಿಸಿದ್ದಾರೆ ಎಂದು ಹೇಳಿದ್ದಾರೆ. ಮೊದಲು ನೀನು ಬಾ ನನ್ನ ಜೊತೆ ಟೈಮ್ ಸ್ಪೆಂಡ್ ಮಾಡು ಆ ನಂತರ ಬೆಡ್ ಶೇರ್ ಮಾಡು ಆ ನಂತರ ಅವಕಾಶ ಕೊಡುವುದರ ಬಗ್ಗೆ, ಚಿತ್ರದ ಬಗ್ಗೆ, ಸಂಭಾವನೆಯ ಬಗ್ಗೆ ಮಾತನಾಡೋಣ ಎಂದು ನನಗೆ ಅನೇಕರು ಹೇಳಿದ್ದಾರೆ ಎಂದು ಸನಮ್ ತಮಿಳು ಚಿತ್ರರಂಗದ ಮೇಲೆ ಬಾಂಬ್ ಎಸೆದಿದ್ದಾರೆ.
ಮುಂದುವರೆದು ಕಾಲಿವುಡ್‌ನಲ್ಲಿ ಈಗೀಗ ಕಾಸ್ಟಿಂಗ್ ಕೌಚ್ ತುಂಬಾನೇ ಕಾಮನ್ ಆಗಿದೆ ಎಂದಿರುವ ಸನಮ್ ನಾನು ಈ ಬೇಡಿಕೆಗಳನ್ನೆಲ್ಲ ಒಪ್ಪಿಕೊಂಡಿಲ್ಲ, ಈಡೇರಿಸಲಿಲ್ಲ, ನನ್ನಲ್ಲಿರುವ ಕಲೆಯಿಂದ ನನಗೆ ಇಲ್ಲಿ ನೆಲೆಯೂರಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ತಮಿಳು ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಇದೆ ದಿನದಿಂದ ದಿನಕ್ಕೆ ಅದು ಹೆಚ್ಚಾಗುತ್ತಿದೆ ಎಂದು ಹೇಳಿರುವ ಸನಮ್ ನಾಯಕ-ನಾಯಕಿಯರ ಸಂಭಾವನೆ ವಿಚಾರದಲ್ಲಿ ಕೂಡ ಅಜಗಜಾಂತರ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ. ತಮಿಳು ಚಿತ್ರರಂಗದ ಬಗ್ಗೆ ಸನಮ್ ಮಾತನಾಡಿರುವ ಈ ಮಾತುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗಿದೆ. ಸನಮ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಸಿನಿಮಾರಂಗದಲ್ಲಿ ಬಹುತೇಕ ನಾಯಕಿಯರಿಗೆ ಇದೇ ತರಹದ ಅನುಭವವಾಗುತ್ತೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ನಿಮಗೆ ಕಿರುಕುಳ ನೀಡಿದವರ ಹೆಸರನ್ನೇಳಿ ಹೀಗೆ ಅಡ್ಡ ಗೋಡೆಯ ಮೇಲೆ ದೀಪ ಇಡಬೇಡಿ ಎಂಬ ಮಾತನ್ನು ಕೂಡ ಅನೇಕರು ಸನಮ್‌ಗೆ ಹೇಳಿದ್ದಾರೆ.


Click it and Unblock the Notifications











