ಪ್ರಪಂಚದ 8ನೇ ಅದ್ಭುತ: ಮತ್ತೆ ಕಾಡಿಗೆ ಹೋದ 'ಪುಟ್ಟಗೌರಿ'
ಕನ್ನಡ ಧಾರಾವಾಹಿಗಳು ಪದೇ ಪದೇ ಹೊಸ ಹೊಸ ವಿಚಾರಗಳಿಗೆ ಸುದ್ದಿಯಾಗುತ್ತೆ. ಅದರಲ್ಲೂ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಪುಟ್ಟಗೌರಿ ಮದುವೆ' ಅಂತೂ ಗೌರಿಯ ಸಾಹಸಗಳಿಗೆ ಹೆಚ್ಚು ಸದ್ದು ಮಾಡುತ್ತೆ.
ಬಹುಶಃ ಕಳೆದ ಕೆಲ ತಿಂಗಳುಗಳ ಹಿಂದೆ ಪುಟ್ಟಗೌರಿ ಕಾಡಿನಲ್ಲಿ ಮಾಡಿದ ಅತ್ಯದ್ಭುತ ಸಾಹಸಗಳನ್ನ ನೀವು ಮರೆತಿರುವುದಿಲ್ಲ. ಹುಲಿಯಿಂದ ತಪ್ಪಿಸಿಕೊಂಡಿದ್ದು, ಬೆಟ್ಟದಿಂದ ಕೆಳಗೆ ಬಿದ್ದಿದ್ದು, ಕಾಲಿಗೆ ಚಪ್ಪಲಿ ಇಲ್ಲದೇ ಇಡೀ ಅರಣ್ಯವೇ ಸುತ್ತಾಡಿದ್ದು, ಕಾಡು ಜನರಿಂದ ಬಚಾವ್ ಆಗಿದ್ದು, ಹಾವಿನ ಕೆನ್ನೆಗೆ ಹೊಡೆದಿದ್ದು, ಹೀಗೆ ವಿವಿಧ ಹಂತಗಳಲ್ಲಿ ಗೌರಿ ಯಶೋಗಾಥೆ ನೋಡಿದ್ರಿ.
ನಂತರ ಕೊನೆಗೂ ಕಾಡಿನಿಂದ ಸುರಕ್ಷತೆಯಿಂದ ನಾಡಿಗೆ ವಾಪಸ್ ಆದ ಪುಟ್ಟಗೌರಿ ಆಮೇಲೆ ಶತ್ರುಗಳನ್ನ ಬೆಂಡೆತ್ತಿದ್ದು ಬೇರೆ ಕಥೆ. ಈಗ ವಿಷ್ಯ ಏನಪ್ಪಾ ಅಂದ್ರೆ, ಪುಟ್ಟಗೌರಿ ಮತ್ತೆ ಕಾಡಿಗೆ ಹೋಗಿದ್ದಾಳೆ. ಈ ಬಾರಿ ಅದೇನೇನೂ ಸಾಹಸ ನೋಡ್ಬೇಕೋ ಗೊತ್ತಿಲ್ಲ. ಅಷ್ಟಕ್ಕೂ, ಗೌರಿ ಪುನಃ ಕಾಡಿಗೆ ಯಾಕೆ ಹೋದ್ಲು.? ಮುಂದೆ ಓದಿ.....

ಹಳ್ಳಿಯಿಂದ ಕಿಡ್ನ್ಯಾಪ್
ಪುಟ್ಟಗೌರಿ ಅವರ ಹಳ್ಳಿಯ ಜಾತ್ರೆಯಿಂದ ಗೌರಿಯನ್ನ ಕಿಡ್ನ್ಯಾಪ್ ಮಾಡಲಾಗಿದೆ. ಗೌರಿಯನ್ನ ಮದುವೆಯಾಗಲು ಬಂದಿದ್ದ ವಧುವೇ ಗೌರಿಯನ್ನ ಕಿಡ್ನ್ಯಾಪ್ ಮಾಡಿದ್ದಾನೆ. ಕಪಾಳಕ್ಕೆ ಹೊಡೆದು ಅವಮಾನ ಮಾಡಿದ್ದ ಗೌರಿಯನ್ನ ಸೇಡು ತೀರಿಸಿಕೊಳ್ಳಲು ನೂತನ್ ಅಪಹರಣ ಮಾಡಿದ್ದಾನೆ.

ಒಂದು ವಾರದಿಂದ ಕಾಡಿನಲ್ಲಿ ವಾಸ
ಗೌರಿಯನ್ನ ಹಳ್ಳಿಯಿಂದ ಅಪಹರಣ ಮಾಡಿರುವ ನತಾನ್ ಮತ್ತು ಗೌರಿ ಒಂದು ವಾರದಿಂದ ಕಾಡಿನಲ್ಲಿ ಅಲೆದಾಡುತ್ತಿದ್ದಾರೆ. ಗೌರಿಯನ್ನ ಪಡೆಯಬೇಕು ಎಂಬ ಆಸೆಯಿಂದ ನೂತನ್ ಗೌರಿಯನ್ನ ಪೀಡಿಸುತ್ತಿದ್ದಾನೆ. ಅವನಿಂದ ತಪ್ಪಿಸಿಕೊಳ್ಳಲು ಗೌರಿ ಹರ ಸಾಹಸ ಪಡುತ್ತಿದ್ದಾಳೆ.

ಗೌರಿಯನ್ನ ಹುಡುಕಲು ಪೊಲೀಸರು ಪ್ರಯತ್ನ
ಮತ್ತೊಂದೆಡೆ, ಅಪಹರಣಕ್ಕೋಳಗಾಗಿರುವ ಗೌರಿಯನ್ನ ಹುಡುಕಲು ಪೊಲೀಸರು, ಗೌರಿ ತಂದೆ ಎಲ್ಲರೂ ಕಾಡಿಗೆ ಬಂದಿದ್ದಾರೆ. ಎಷ್ಟೇ ಕಷ್ಟಪಟ್ಟರು ಗೌರಿಯನ್ನ ಹುಡುಕಲು ಪೊಲೀಸರಿಂದ ಸಾಧ್ಯವಾಗುತ್ತಿಲ್ಲ.

ತಪ್ಪಿಸಿಕೊಂಡ ಗೌರಿ ಎಲ್ಲಿದ್ದಾಳೆ ಗೊತ್ತಾ.?
ನೂತನ್ ಕೈಯಿಂದ ತಪ್ಪಿಸಿಕೊಂಡು ಬಂದಿರುವ ಗೌರಿ ಈಗ ಗುಹೆಯೊಂದಕ್ಕೆ ಸೇರಿಕೊಂಡಿದ್ದಾಳೆ. ಈ ಗುಹೆಯಲ್ಲಿ ಮಹಾಕಾಳಿ ವಿಗ್ರಹವಿದೆ. ಈ ವಿಗ್ರಹ ಕಂಡು ಗೌರಿ ನಿಟ್ಟಿಸಿರು ಬಿಟ್ಟಿದ್ದಾಳೆ. ದೇವಿ ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುತ್ತಿದ್ದಾಳೆ.

ಹಳೆ ಜಾಗಕ್ಕೆ ಬಂದ್ಲಾ ಗೌರಿ.?
ಹಿಂದೊಮ್ಮೆ ಕೂಡ ಗೌರಿ ಕಾಡಿಗೆ ಬಂದಾಗ, ಕಾಡು ಜನರ ಬಳಿ ಸಿಕ್ಕಿ ಹಾಕಿಕೊಂಡಿದ್ದಳು. ಈ ಸಮಯದಲ್ಲೂ ಇಂತಹದ್ದೇ ಕಾಳಿ ವಿಗ್ರಹ ಇತ್ತು. ಬಹುಶಃ ಅದೇ ಜಾಗಕ್ಕೆ ಗೌರಿ ಮತ್ತೆ ಬಂದಿದ್ದಾಳ ಎಂಬ ಕುತೂಹಲ ಕಾಡುತ್ತಿದೆ.

ಮುಂದೆ ಏನಾಗಬಹುದು.?
ಕಾಡಿಗೂ ಪುಟ್ಟಗೌರಿಗೂ ಒಂದು ರೀತಿ ಅವಿನಬಾವ ಸಂಬಂಧ. ಈ ಕಾಡಿಗೆ ಗೌರಿ ಹೋದ್ರೆ, ಅಲ್ಲಿ ಅದೇನ್ ಸಾಹಸಗಳನ್ನ ನೋಡ್ಬೇಕು ಎಂಬ ಕಾತುರ ವೀಕ್ಷಕರದ್ದು. ಸದ್ಯ, ಗೌರಿ ಕಾಡಿನಲ್ಲಿ ಇದ್ದಾಳೆ, ಅದೇನ್ ಆಗುತ್ತೋ ಕಾದು ನೋಡೋಣ.....


Click it and Unblock the Notifications