'ಪುಟ್ಟಕ್ಕನ ಮಕ್ಕಳು' ಕಥೆ ಮುಗೀತಾ? ಹೊಸ ಪ್ರಯತ್ನದ ಬಗ್ಗೆ ಆರೂರು ಜಗದೀಶ್ ಮಾತು
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು' ಯಶಸ್ಸಿಯಾಗಿ 1000 ಸಂಚಿಕೆಗಳನ್ನು ಪೂರೈಸಿದೆ. ತಂಡ ಈ ಸಂಭ್ರಮವನ್ನು ಬಹಳ ಅದ್ಧೂರಿಯಾಗಿ ಆಚರಿಸಿದೆ. ಇದರ ಬೆನ್ನಲ್ಲೇ ಧಾರಾವಾಹಿಯನ್ನು ಮುಗಿಸುತ್ತಾರಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಬಹಳ ದಿನಗಳಿಂದ ಇಂತಹ ಉಹಾಪೋಹ ಇದೆ.
ಈ ಹಿಂದೆ ಸಂಜನಾ ಬುರ್ಲಿ ಧಾರಾವಾಹಿಯಿಂದ ಹೊರಬಂದಾಗಲೇ 'ಪುಟ್ಟಕ್ಕನ ಮಕ್ಕಳು' ಕಥೆ ಕೂಡ ಮುಗಿತು ಎನ್ನುವ ಗುಸುಗುಸು ಶುರುವಾಗಿತ್ತು. ಅದರೆ ಅದನ್ನೆಲ್ಲಾ ಸುಳ್ಳಾಗಿಸಿ ಇದೀಗ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇವತ್ತಿಗೂ ಒಳ್ಳೆ ಟಿಆರ್‌ಪಿ ಪಡೆದುಕೊಂಡು ಧಾರಾವಾಹಿ ಮುಂದುವರೆಯುತ್ತಿದೆ. ವೀಕ್ಷಕರ ಪ್ರೀತಿಗೆ ತಂಡ ಖುಷಿಯಾಗಿದೆ.

2021, ಡಿಸೆಂಬರ್ 13ರಂದು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಪ್ರಸಾರ ಆರಂಭವಾಗಿತ್ತು. ಅಲ್ಲಿಂದ ಯಶಸ್ವಿಯಾಗಿ ಮುಂದುವರೆದಿದೆ. ತೆಲುಗಿನ 'ರಾಧಮ್ಮ ಕೂತುರು' ಧಾರಾವಾಹಿ ರೀಮೆಕ್ ಆಗಿದ್ದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಿಸಿಕೊಂಡು ಹೊಸ ಹೊಸ ಟ್ವಿಸ್ಟ್ ಕೊಡುತ್ತಾ ಕಥೆಯನ್ನು ಬೆಳೆಸಲಾಗಿತ್ತು. ವೀಕ್ಷಕರ ಮನಗೆಲ್ಲುವಲ್ಲಿ ಧಾರಾವಾಹಿ ಯಶಸ್ಸು ಕಂಡಿದೆ. ಜನಪ್ರಿಯ ನಟಿ ಉಮಾಶ್ರೀ ಮುಖ್ಯಪಾತ್ರದಲ್ಲಿ ನಟಿಸಿರುವುದು ಇದಕ್ಕೆ ಪ್ರಮುಖ ಕಾರಣ ಎಂದರೆ ತಪ್ಪಾಗುವುದಿಲ್ಲ.
ತಂದೆ ದೂರಾಗಿ ತಬ್ಬಲಿಯಾದ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿ ಅವರಿಗೆ ಬದುಕಿನ ದಾರಿ ತೋರಿಸಲು ಹೋರಾಡುವ ಗಟ್ಟಿಗಿತ್ತಿ ಪುಟ್ಟಕ್ಕನ ಕಥೆ ಇದು. ಪುಟ್ಟಕ್ಕನಿಗೆ ಸಹನಾ(ಅಕ್ಷರಾ), ಸ್ನೇಹಾ(ಸಂಜನಾ ಬುರ್ಲಿ), ಸುಮಾ(ಶಿಲ್ಪಾ) ಮಕ್ಕಳಾಗಿ ನಟಿಸುತ್ತಿದ್ದಾರೆ. ಮೆಸ್ ನಡೆಸುತ್ತಾ ಜೀವನ ಸಾಗಿಸುವ ಪುಟ್ಟಕ್ಕನಿಗೆ ಎದುರಾಗುವ ಸವಾಲುಗಳು ಒಂದೆರಡಲ್ಲ. ಇಬ್ಬರೂ ಮಕ್ಕಳು ಮದುವೆಯಾಗಿ ಅತ್ತೆ ಮನೆಯಲ್ಲಿ ಸಂಕಷ್ಟ ಎದುರಿಸುತ್ತಾರೆ. ಕೊನೆಗೆ ಸ್ನೇಹಾ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಆ ನೋವನ್ನೆಲ್ಲಾ ನುಂಗಿ ಪುಟ್ಟಕ್ಕ ಬದುಕಿನ ಬಂಡಿ ಎಳೆಯುವ ಕಥೆ ಇಲ್ಲಿದೆ.
ರಮೇಶ್ ಪಂಡಿತ್, ಮಂಜು ಭಾಷಿನಿ, ಶ್ವೇತಾ, ಸಾರಿಕಾ, ಧನುಷ್ ಸೇರಿ ದೊಡ್ಡ ತಾರಾಗಣ ಧಾರಾವಾಹಿಯಲ್ಲಿದೆ. ಆರಂಭದ ವಾರಗಳಲ್ಲೇ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಭರ್ಜರಿ ಟಿಆರ್‌ಪಿ ಗಳಿಸಿತ್ತು. ನಡುವೆ ಒಮ್ಮೆ ಟಿಆರ್‌ಪಿ ಕಮ್ಮಿ ಆಗಿತ್ತು. ಧಾರಾವಾಹಿ ಪ್ರಸಾರದ ಸಮಯ ಬದಲಾಗಿತ್ತು. ಆದರೂ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಇದೀಗ ಹರಡಿರುಗ ವದಂತಿ ಬಗ್ಗೆ ನಿರ್ಮಾಪಕ, ನಿರ್ದೇಶಕ ಆರೂರು ಜಗದೀಶ್ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
"ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಟಿಆರ್‌ಪಿ ಬಹಳ ಚೆನ್ನಾಗಿದೆ. ಜೀ-5 ಮಾರ್ಕೆಟಿಂಗ್‌ನಲ್ಲಿ ಈ ಧಾರಾವಾಹಿಯೇ ಮುಂದಿದೆ. ಹಾಗಾಗಿ ಸದ್ಯಕ್ಕೆ ನಡೆದುಕೊಂಡು ಹೋಗುತ್ತಿದೆ. ಎಷ್ಟು ದಿನ ಮುಂದುವರೆಯುತ್ತದೆ ಎನ್ನುವುದು ವಾಹಿನಿಗೆ ಬಿಟ್ಟಿದ್ದು. ಇನ್ನು 150-200 ಎಪಿಸೋಡ್ ಮಾಡಲು ನಮಗೆ ವಾಹಿನಿಯಿಂ ಆಶ್ವಾಸನೆ ಸಿಕ್ಕಿದೆ. ಯಾಕಂದರೆ ಟಿಆರ್‌ಪಿ ಇರುವಾಗ, ಮಾರ್ಕೆಟಿಂಗ್ ಲೀಡ್ ಇರುವಾಗ ವಾಹಿನಿ ಅದನ್ನು ಟಚ್ ಮಾಡುವುದಿಲ್ಲ" ಎಂದು ಆರೂರು ಜಗದೀಶ್ ಮಾಹಿತಿ ನೀಡಿದ್ದಾರೆ.
ಆರೂರು ಜಗದೀಶ್ ತಮ್ಮ ಮುಂದಿನ ಕನಸುಗಳ ಬಗ್ಗೆ ಮಾತನಾಡಿದ್ದಾರೆ. ಸದ್ಯಕ್ಕೆ ಒಂದು ಮೈಕ್ರೋ ಸೀರಿಸ್ ಮಾಡಿ ಮುಗಿಸಿದ್ದಾರೆ. ಇತ್ತೀಚೆಗೆ ಮೈಕ್ರೊ ಸೀರಿಸ್ ಎನ್ನುವ ಹೊಸ ಕಲ್ಪನೆ ಶುರುವಾಗಿದೆ. ಸೋಶಿಯಲ್ ಮೀಡಿಯಾ ರೀಲ್ಸ್‌ಗೆ ಪೈಪೋಟಿ ಎನ್ನುವಂತೆ ಆಪ್‌ಗಳಲ್ಲಿ ಸಣ್ಣ ಸಣ್ಣ ಎಪಿಸೋಡ್‌ಗಳಾಗಿ ಕಥೆ ಹೇಳುವ ಪ್ರಯತ್ನ ಅದು. ಈಗಾಗಲೇ ನಟ, ನಿರ್ದೇಶಕ ದಿಲೀಪ್ ರಾಜ್ ಕೂಡ ಇಂತದ್ದೇ ಪ್ರಯತ್ನದಲ್ಲಿದ್ದಾರೆ. ಆ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಇತ್ತೀಚೆಗೆ ಮಾಹಿತಿ ನೀಡಿದ್ದರು.
ಆರೂರು ಜಗದೀಶ್ ಮಾತನಾಡಿ "ಜೀ-5ನಿಂದ ಹೊಸದೊಂದು ಆಪ್ ಸಿದ್ಧವಾಗುತ್ತಿದೆ. ಅಲ್ಲಿ ಆ ಮೈಕ್ರೋ ಸೀರಿಸ್ ಪ್ರಸಾರ ಆಗುತ್ತದೆ. ಒಂದೊಂದು ನಿಮಿಷದ ಎಪಿಸೋಡ್‌ಗಳಾಗಿ ಇದು ಮೂಡಿ ಬರುತ್ತದೆ. ಸ್ಕಂದ, 'ಸೀತಾರಾಮ' ಧಾರಾವಾಹಿಯ ಬಾಲನಟಿ ರಿತು ಸಿಂಗ್ ಹಾಗೂ ತನ್ವಿ ರಾವ್ ಈ ಮೈಕ್ರೊ ಸೀರಿಸ್‌ನಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದು ಎಡಿಟಿಂಗ್ ನಡೀತಿದೆ. ನಾನೇ ನಿರ್ಮಿಸಿ, ನಿರ್ದೇಶನ ಮಾಡಿದ್ದೇನೆ. ಜುಲೈ 15ರ ಬಳಿಕ ಬಿಡುಗಡೆ ಆಗಬಹುದು" ಎಂದಿದ್ದಾರೆ.
ಮೆಗಾ ಸೀರಿಯಲ್ ಮಾಡಿಕೊಂಡು ಬಂದವರು ಆರೂರು ಜಗದೀಶ್. ಸಿನಿಮಾ ಮಾಡುವ ಆಸೆ ಕೂಡ ಇತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೂ ಹೊಸದಾಗಿ ಏನಾದರೂ ಮಾಡಬೇಕು ಎನ್ನುವ ತುಡಿತ ಇತ್ತು. ಇಂತಹ ಸಮಯದಲ್ಲೇ ಜೀ5ನಿಂದ ಮೈಕ್ರೋ ಸೀರೀಸ್ ಮಾಡುವ ಅವಕಾಶ ಬಂದಾಗ ಮಾಡೋಣ ಎಂದು ಒಪ್ಪಿಕೊಂಡಿದ್ದಾರೆ. 'ಅಯ್ಯನ ಮನೆ' ರೀತಿ ಜೀ-5ಗಾಗಿ ಮಿನಿ ವೆಬ್ ಸೀರಿಸ್ ಮಾಡುವ ಪ್ರಯತ್ನ ಕೂಡ ನಡೀತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನು ಜೀ ಕನ್ನಡಕ್ಕಾಗಿಯೇ ಮತ್ತೊಂದು ಧಾರಾವಾಹಿ ಮಾಡುವ ಬಗ್ಗೆಯೂ ಆಲೋಚಿಸುತ್ತಿದ್ದಾರೆ.


Click it and Unblock the Notifications











