'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋವಿನಿಂದ ಹೊರಬಂದಿದ್ದೇಕೆ ಪುಟ್ಟಕ್ಕನ ಮಗಳು?
ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ವಾಹಿನಿಗಳ ಪೈಕಿ ಜೀ ಕನ್ನಡ ಕೂಡಾ ಒಂದು. ಜೀ ಕನ್ನಡ ವಾಹಿನಿಯಲ್ಲಿ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಪ್ರೀಮಿಯರ್ ಶೋ ಕೂಡಾ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದೆ. ಮಾತಿನ ಮಲ್ಲಿ, ಚಿನಕುರಳಿ ಅನುಶ್ರೀ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಈ ಶೋವಿನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ, ಚಿನ್ನಿ ಪ್ರಕಾಶ್ ಮಾಸ್ಟರ್ ಹಾಗೂ ರಕ್ಷಿತಾ ಪ್ರೇಮ್ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಅಂದ ಹಾಗೇ ಈ ವರ್ಷ ನಾನ್ ಡ್ಯಾನ್ಸರ್‌ಗಳು ಈ ಶೋವಿನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿರುವುದು ವಿಶೇಷ. ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಕಲಾವಿದರುಗಳು, ಇಲ್ಲಿಯ ತನಕ ಒಂದು ಬಾರಿಯೂ ನೃತ್ಯ ಮಾಡದವರು ಈ ಶೋವಿನಲ್ಲಿ ಸ್ಪರ್ಧಿಗಳಾಗಿದ್ದು ಆ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪುಟ್ಟಕ್ಕನ ಹಿರಿಮಗಳು ಸಹನಾ ಆಗಿ ನಟಿಸುತ್ತಿರುವ ಅಕ್ಷರಾ ಗೌಡ ಅವರು ಈ ಶೋವಿನ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಕಾರಣಾಂತರಗಳಿಂದ ಅವರು ಈ ಶೋವಿನಿಂದ ಹೊರಬಂದಿದ್ದಾರೆ. ಆದರೆ ಅವರು ಶೋವಿನಿಂದ ಯಾಕೆ ಹೊರಬಂದರು ಎಂಬ ಕಾರಣ ಮಾತ್ರ ಇನ್ನೂ ಬಹಿರಂಗವಾಗಿಲ್ಲ.
ಇನ್ನು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಹಿರಿಮಗಳು ಸಹನಾ ಆಗಿ ಅಭಿನಯಿಸುತ್ತಿರುವ ಅಕ್ಷರ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿದ್ದು ಪೋಷಕ ಪಾತ್ರದ ಮೂಲಕ. 'ರಕ್ಷಾಬಂಧನ' ಧಾರಾವಾಹಿಯಲ್ಲಿ ಕಾರ್ತಿಕ್ ತಂಗಿಯಾಗಿ ನಟಿಸುವ ಮೂಲಕ ಅಭಿನಯಕ್ಕೆ ಕಾಲಿಟ್ಟ ಈಕೆ ನಟಿಸಿದ್ದು ಪೋಷಕ ಪಾತ್ರದಲ್ಲಿ. ಆದರೂ ನಟನೆಯ ಮೂಲಕ ಗಮನ ಸೆಳೆದ ಬೆಡಗಿ.
ತದ ನಂತರ ನಾಯಕಿಯಾಗಿ ಭಡ್ತಿ ಪಡೆದ ಅಕ್ಷರ ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಉದಯ ವಾಹಿನಿಯಲ್ಲಿ ರಮೇಶ್ ಇಂದಿರಾ ಅವರ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ ಭಕ್ತಿಪ್ರಧಾನ ಧಾರಾವಾಹಿ 'ಅಮ್ನೋರು'ನಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

ಇದೀಗ ಸಹನಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಮಿಂಚುತ್ತಿರುವ ಈಕೆಗೆ ಕಾಲೇಜಿನಲ್ಲಿ ನಟಿಯಾಗಬೇಕು ಎಂಬ ಕನಸಿತ್ತಂತೆ. ತನ್ನ ಕನಸು ನನಸು ಮಾಡಿಕೊಂಡಿರುವ ಈಕೆ ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲೂ ಸಕತ್ ಆ್ಯಕ್ಟೀವ್ ಆಗಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳುವ ಅಕ್ಷರ ಅವುಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.


Click it and Unblock the Notifications











