'ಪುಟ್ಟಕ್ಕನ ಮಕ್ಕಳು', 'ಅಮೃತಧಾರೆ', 'ಶ್ರೀರಸ್ತು ಶುಭಮಸ್ತು' ಸಮಾಗಮ: ದಾವಣಗೆರೆಯಲ್ಲಿ ತಾರೆಯರ ಜಾತ್ರೆ
ಸಿನಿಮಾಗಿಂತ ಕಿರುತೆರೆಯನ್ನು ನೋಡುವ ವೀಕ್ಷಕರ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಧಾರಾವಾಹಿಗಳನ್ನು ನೋಡುವವರ ಸಂಖ್ಯೆ ದೊಡ್ಡದೇ ಇದೆ. ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗಗಳಲ್ಲಿ ಧಾರಾವಾಹಿಗಳಿಗೆ ಕ್ರೇಜ್ ಜೋರಾಗಿಯೇ ಇದೆ.
ಹೀಗಾಗಿ ಜೀ ಕನ್ನಡ ಬೆಣ್ಣೆ ನಗರಿ ದಾವಣಗೆರೆಗೆ ಮೂರು ಧಾರಾವಾಹಿಯ ಕಲಾವಿದರನ್ನು ಕಳುಹಿಸಿಕೊಟ್ಟಿದೆ. 'ಪುಟ್ಟಕ್ಕನ ಮಕ್ಕಳು','ಅಮೃತಧಾರೆ', 'ಶ್ರೀರಸ್ತು ಶುಭಮಸ್ತು' ಅಂತಹ ಜನಪ್ರಿಯ ಧಾರಾವಾಹಿಗಳು ತಾರೆಯರು ಒಂದೆಡೆಗೆ ಒಟ್ಟಿಗೆ ಸೇರಿಕೊಂಡಿದ್ದಾರೆ.

ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಜೀ ಕನ್ನಡದ ಈ ಮೂರು ಧಾರಾವಾಹಿಯ ತಾರೆಯರು ಒಟ್ಟಿಗೆ ಸೇರಿದ್ದರು. ಇಲ್ಲಿಯೇ 'ಜಾತ್ರೆ ಕಲ್ಯಾಣೋತ್ಸವ' ಕಾರ್ಯಕ್ರಮ ಕೂಡ ನಡೀತು. 'ಪುಟ್ಟಕ್ಕನ ಮಕ್ಕಳು', 'ಅಮೃತಧಾರೆ', 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ನಟ-ನಟಿಯರಿಗೆ ದಾವಣಗೆರೆಯ ಅಭಿಮಾನಿಗಳಿಂದ ಅಭೂತಪೂರ್ವ ಪ್ರೋತ್ಸಾಹ ಸಿಕ್ಕಿದೆ. ಈ ಕುರಿತು ಮೂರೂ ತಂಡಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದೆ.
ಯಾವ್ಯಾವ ನಟರು ಭಾಗಿಯಾಗಿದ್ದರು
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ ಧನುಷ್, ಸಂಜನಾ ಬುರ್ಲಿ, ಅಕ್ಷರ, ಪವನ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಆಗಮಿಸಿದ್ದರು. 'ಶ್ರೀ ರಸ್ತು ಶುಭಮಸ್ತು' ಧಾರಾವಾಹಿ ಕಡೆಯಿಂದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಜಿತ್ ಹಂಧೆ, ಸುಧಾರಾಣಿ, ಅರ್ಫಾ ಷರೀಫ್, ಶಶಿಧರ್, ಲಾವಣ್ಯ, ಶಶಿಧರ್, ನಕುಲ್, ದರ್ಶಿತ್, ಸದಾನಂದ್, ಸುಷ್ಮಿತಾ, ಗಜೇಂದ್ರ ಉಪಸ್ಥಿತಿಯಿತ್ತು. ಹಾಗೇ ಅಮೃತಧಾರೆ ಧಾರಾವಾಹಿ ಲೀಡ್ ರೋಲ್‌ನಲ್ಲಿ ನಟಿಸುತ್ತಿರುವ ರಾಜೇಶ್ ನಟರಂಗ, ಛಾಯಾಸಿಂಗ್, ಶಶಿ ಹೆಗ್ಡೆ, ಸಾರಾ ಅಣ್ಣಯ್ಯ ತಮ್ಮ ಅನುಭವಗಳನ್ನು ಹಂಚಿಕೊಂಡರು.

'ಶ್ರೀರಸ್ತು ಶುಭಮಸ್ತು' ಒಪ್ಪುವಾಗ ಅಂಜಿದ್ದ ಸುಧಾರಾಣಿ
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿ ಪಾತ್ರದಲ್ಲಿ ಹಿರಿಯ ನಟಿ ಸುಧಾರಾಣಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯನ್ನು ಒಪ್ಪಿಕೊಳ್ಳುವಾಗ ಸುಧಾರಾಣಿಗೆ ಅಳುಕಿತ್ತಂತೆ. "ಸಮಾಜ ಏನೆಂದುಕೊಳ್ಳುತ್ತೋ, ಯಾವ ರೀತಿ ಸಮಾಜದಲ್ಲಿ ಪ್ರಭಾವ ಬೀರುತ್ತೋ ಎಂಬ ಅಂಜಿಕೆ ಇತ್ತು. ಯಾಕೆಂದರೆ ನನ್ನ ನಿಜ ಜೀವನದಲ್ಲಿ ನಡೆದ ಕೆಲ ಘಟನೆಗಳು ಈ ಕಥೆಯಲ್ಲಿವೆ. ಹಾಗಾಗಿ, ವೈಯಕ್ತಿಕವಾಗಿಯೂ ಭಯವಿತ್ತು. ಮುಂಬರುವ ಕಥೆಯಲ್ಲಿ ಕೆಲ ಸೂಕ್ಷ್ಮ ವಿಚಾರಗಳಿವೆ. ಆದರೆ, ಈಗ ಆ ಭಯ ಇಲ್ಲವಿಲ್ಲ" ಎಂದು ಸುಧಾರಾಣಿ ತಿಳಿಸಿದ್ದಾರೆ.
ಛಾಯಾ ಸಿಂಗ್-ರಾಜೇಶ್ ಮಾತು
ಹೊಸ ಧಾರಾವಾಹಿ 'ಅಮೃತಧಾರೆ'ಯ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಕೂಡ ತಮ್ಮ ಪಾತ್ರ, ಸೀರಿಯಲ್ ಬಗ್ಗೆ ಮಾತಾಡಿದ್ರು. "ಸಿನಿಮಾ ಹಾಗೂ ಧಾರಾವಾಹಿಯಲ್ಲಿ ನಟಿಸುವುದು ಬೇರೆ ಬೇರೆ ಎನಿಸುತ್ತಿಲ್ಲ. ಈಗ ಧಾರಾವಾಹಿಗಳು ಬರುತ್ತಿರುವುದನ್ನು ನೋಡಿದರೆ ಯಾವ ಸಿನಿಮಾಗಿಂತ ಕಡಿಮೆ ಏನಿಲ್ಲ. ಸೆಟ್ ದೊಡ್ಡದಿರುತ್ತದೆ. ತಾರಾಗಣವೂ ದೊಡ್ಡಿದಿದೆ. 'ಅಮೃತಧಾರೆ' ಧಾರಾವಾಹಿಯನ್ನು ಜನರು ಮೆಚ್ಚಿ ಕೊಂಡಿದ್ದಾರೆ. ಇದು ಖುಷಿ ಕೊಟ್ಟಿದೆ" ಎಂದು ಛಾಯಾ ಸಿಂಗ್ ಹೇಳಿದ್ದಾರೆ. ಇತ್ತ ರಾಜೇಶ್ ನಟರಂಗ "ಅಮೃತಧಾರೆ ಸೀರಿಯಲ್‌ನಲ್ಲಿ ನಾನು ಮದುವೆಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ. ನಿಮ್ಮ ಅಪೇಕ್ಷೆಯಿದ್ದರೆ ಆಗುತ್ತೇನೆ ಬಿಡಿ. ಪುಟ್ಟಕ್ಕನ ಮಕ್ಕಳು, ಶ್ರೀರಸ್ತು ಶುಭಮಸ್ತು, ಅಮೃತಧಾರೆ ಧಾರವಾಹಿಯ ತಂಡಗಳು
ಒಂದೆಡೆ ಸೇರಿದ್ದು ಖುಷಿ ಕೊಟ್ಟಿದೆ" ಎಂದಿದ್ದಾರೆ.
ಬೆಣ್ಣೆ ದೋಸೆ ಸವಿಯಲು ಬಂದ ತಾರೆಯರು
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಧನುಷ್, ಸಂಜನಾ ಬುರ್ಲಿ, ಅಕ್ಷರ, ಪವನ್ ಕುಮಾರ್, ಸದಾನಂದ, ಸುಶ್ಮಿತಾ ಸೇರಿದಂತೆ ಹಲವರು ಆಗಮಸಿದ್ದರು. ಅಲ್ಲದೇ 'ಅಮೃತಧಾರೆ' ಹಾಗೂ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಲಾವಣ್ಯ, ಸಾರಾ ಅಣ್ಣಯ್ಯ, ಅಜಿತ್ ಹಂಧೆ, ನಕುಲ್, ಶಶಿಧರ್, ದರ್ಶಿತ್, ಸೇರಿದಂತೆ ಅನೇಕ ಕಲಾವಿದರು ಹಾಜರಿದ್ದರು.
ದಾವಣಗೆರೆ ಎಂದರೆ ಬೆಣ್ಣೆದೋಸೆ ಫೇಮಸ್. ದಾವಣಗೆರೆಗೆ ಹೋಗುತ್ತೇವೆ ಎಂದರೆ ಸಾಕು ಎಲ್ಲರೂ ಕೇಳುವುದು ಒಂದೇ. ಅಲ್ಲಿಗೆ ಹೋದರೆ ದಾವಣಗೆರೆ ಬೆಣ್ಣೆ ದೋಸೆ ತಿನ್ನದೇ ಹಾಗೆ ವಾಪಸ್ ಬರಬೇಡಿ ಎಂದು. ನಾವು ಇಲ್ಲಿಗೆ ಬಂದಿದ್ದೇವೆ. ಬೆಣ್ಣೆ ನಗರಿಯ ಬೆಣ್ಣೆ ಮನಸ್ಸುಗಳಿಗೆ ನಾವೆಲ್ಲರೂ ಇಷ್ಟವಾಗಿದ್ದೇವೆ. ಅವರ ಪ್ರೀತಿ, ವಿಶ್ವಾಸ ಸಂಪಾದನೆ ಮಾಡುವ ಜೊತೆಗೆ ನಮ್ಮ ನಟನೆ ಸೇರಿದಂತೆ ಬೇರೆ ಏನಾದರೂ ಅಂಶಗಳನ್ನು ಸೇರಿಸಬೇಕಾ, ಬದಲಾಯಿಸಿಕೊಳ್ಳಬೇಕಾ ಎಂಬ ಕುರಿತು ಚರ್ಚಿಸಲು ಬಂದಿದ್ದಾಗಿ ತಾರೆಯರು ತಿಳಿಸಿದ್ದಾರೆ.


Click it and Unblock the Notifications











