'ಪುಟ್ಟಕ್ಕನ ಮಕ್ಕಳು' ಪೂರ್ವಿ ಪಾತ್ರಕ್ಕೆ ಭವ್ಯಾಶ್ರೀ ಎಂಟ್ರಿ!
ಟಿಆರ್‌ಪಿಯಲ್ಲೂ ಟಾಪ್ ಸ್ಥಾನವನ್ನು ಗಿಟ್ಟಿಸಿಕೊಂಡಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ದೊಡ್ಡ ಬದಲಾವಣೆಯೊಂದು ಆಗಿದೆ. ಇತ್ತೀಚೆಗಷ್ಟೇ, ಈ ಧಾರಾವಾಹಿಯ ಲಾಯರ್ ಚಂದ್ರು ಪಾತ್ರಧಾರಿ ಬದಲಾಗಿದ್ದರು. ಇದೀಗ ಮತ್ತೊಂದು ಪಾತ್ರವೂ ಬದಲಾಗಿದೆ.
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯನ್ನು ನೋಡುವವರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಸೀರಿಯಲ್ ಕಥೆಯೂ ಅಷ್ಟೇ ಅಚ್ಚುಕಟ್ಟಾಗಿ ಕ್ಯೂರಿಯಾಸಿಟಿಯನ್ನು ಉಳಿಸಿಕೊಂಡು ಕಥೆ ಸಾಗುತ್ತಿದೆ. ಮಂಡ್ಯ ಭಾಷೆಯಲ್ಲಿ ಡೈಲಾಗ್‌ಗಳಿದ್ದು, ಈ ಭಾಷೆಯ ಶೈಲಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
ಈ ಧಾರಾವಾಹಿಯಲ್ಲಿ ಬರುವ ಪೂರ್ವಿ ಪಾತ್ರಧಾರಿಯನ್ನು ಬದಲಾಯಿಸಲಾಗಿದೆ. ಈ ಪಾತ್ರ ಬದಲಾಗಲು ಕಾರಣ ಗೊತ್ತಿಲ್ಲವಾದರೂ, ಈ ಹಿಂದೆ ಚಂದನಾ ಮಹಾಲಿಂಗಯ್ಯ ಪೂರ್ವಿ ಪಾತ್ರವನ್ನು ನಿರ್ವಹಿಸುತ್ತಿದ್ದರು.

ಪೂರ್ವಿ ಪಾತ್ರಕ್ಕೆ ಹೊಸ ಮುಖ!
ಇತ್ತೀಚೆಗೆ ಪೂರ್ವಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಪೂರ್ವಿ ಪಾತ್ರಧಾರಿ ಚಂದನಾ ಮಹಾಲಿಂಗಯ್ಯ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು. ಅದು ಇದೀಗ ನಿಜವಾಗಿದೆ. ಇತ್ತೀಚೆಗಷ್ಟೇ ಚಂದನಾ ಮಹಾಲಿಂಗಯ್ಯ ಮದುವೆಯಾಗಿದ್ದು, ಈ ಕಾರಣಕ್ಕೆ ನಟನೆಯಿಂದ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಂದನಾ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇನ್ನು ಚಂದನಾ ಜಾಗಕ್ಕೆ ಟಿ ಭವ್ಯಶ್ರೀ ಪೂಜಾರಿ ಪೂರ್ವಿಯಾಗಿ ಬಂದಿದ್ದಾರೆ.

ಪೊಲೀಸ್ ಕನಸು ಕೊಂಡು ನಟಿಯಾದ ಭವ್ಯ!
ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ನಟಿ ಭವ್ಯಶ್ರೀ ಪೂಜಾರಿ, ಪೊಲೀಸ್ ಆಗಬೇಕೆಂಬ ಕನಸನ್ನು ಕಂಡಿದ್ದರು. ಮನೆಯಲ್ಲಿ ಕಷ್ಟವೆಂದು ವಿದ್ಯಾಭ್ಯಾಸವನ್ನು ಕೈ ಬಿಟ್ಟ ಈಕೆಗೆ ಆಸರೆಯಾಗಿದ್ದು, ನಟನೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಭವ್ಯಶ್ರೀ ಸುಳ್ಯ ತಾಲೂಕಿನ ಬೆಳ್ಳಾರೆಯವರು. ಬಾಲ್ಯದಲ್ಲಿ ಕಲಿತ ಯಕ್ಷಗಾನ ಹಾಗೂ ಭರತನಾಟ್ಯ ಭವ್ಯಗೆ ರಂಗಭೂಮಿಯಲ್ಲಿ ಅವಕಾಶ ಗಿಟ್ಟಿಸಿತು. ಅಲ್ಲಿಂದ ನಟಿಸಲು ಆರಂಭಿಸಿದ ಭವ್ಯಶ್ರೀಗೆ ನಟನೆ ಆಸರೆಯಾಯಿತು.

ವಿಲನ್ ಪಾತ್ರಗಳೇ ಹೆಚ್ಚು!
ನಟಿ ಭವ್ಯ ಪೂಜಾರಿ ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ನಟಿ ಚಂದ್ರಕಲಾ ಮೋಹನ್, ಭವ್ಯಶ್ರೀಗೆ ರೋಲ್ ಮಾಡೆಲ್ ಅಂತೆ. 'ಅವಳು', 'ಇಂತಿ ನಿನ್ನ ಪ್ರೀತಿಯ', 'ಶಾಂತಂ ಪಾಪಂ', 'ಅಣ್ಣಯ್ಯ', 'ಕಿನ್ನರಿ', 'ಕಮಲಿ', 'ಪತ್ತೆಧಾರಿ ಪ್ರತಿಭಾ', 'ಮಂಗಳಗೌರಿ ಮದುವೆ', 'ಅರಮನೆ ಗಿಳಿ', 'ಸುಂದರಿ', 'ನಾಗಿಣಿ-2' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುವ ಭವ್ಯಶ್ರೀಗೆ ಅತೀ ಹೆಚ್ಚು ವಿಲನ್ ಪಾತ್ರಗಳೇ ಲಭಿಸಿವೆ.

ಸಿನಿಮಾಗಳಲ್ಲೂ ನಟಿಸಿರುವ ಭವ್ಯಶ್ರೀ
ಕಿರುತೆರೆಯಲ್ಲಿರುವ ಭವ್ಯಶ್ರೀ ಪೂಜಾರಿ ಸ್ಯಾಂಡಲ್‌ವುಡ್‌ಗೂ ಎಂಟ್ರಿಕೊಟ್ಟಿದ್ದಾರೆ. ನವರಸ ನಾಯಕ ಜಗ್ಗೇಶ್ ಅಭಿನಯದ 'ತೋತಾಪುರಿ' ಚಿತ್ರದಲ್ಲಿ ಭವ್ರಶ್ರೀ ನಟಿಸಿದ್ದಾರೆ. ಇನ್ನು 'ಕೆಕೆ' ಎಂಬ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಸದ್ಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೆ ಎಂಟ್ರಿಕೊಟ್ಟಿದ್ದು, ಪೂರ್ವಿ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ. ಕಂಠಿಯನ್ನು ಒಲಿಸಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ.


Click it and Unblock the Notifications











