ಪುಟ್ಟಕ್ಕನ ಮನೆಯಲ್ಲಿ ಕಂಠಿ ಗಂಟಲು ಒಣಗಿದೆ: ಅತ್ತ ನಂಜಮ್ಮ ಕತ್ತಿ ಮಸೆಯುತ್ತಿದ್ದಾಳೆ!
ಬಂಗಾರಮ್ಮನಿಗೆ ಪುಟ್ಟಕ್ಕನ ಮೇಲೆ ಏನೋ ಒಂಥರ ಗೌರವ. ತನ್ನ ಗಂಡನ ಪ್ರಾಣ ಉಳಿಸಿದರು ಎಂಬುದು ಒಂದು ಕಾರಣವಾದರೇ, ಪುಟ್ಟಕ್ಕನ ಮಾತಿನಲ್ಲಿ ಆಗಲಿ, ನಡವಳಿಕೆಯಲ್ಲಾಗಲೀ ಸ್ವಲ್ಪವೂ ಕಲ್ಮಶವಿಲ್ಲ ಎಂಬುದು ಬಂಗಾರಮ್ಮನಿಗೆ ತುಂಬಾ ಹಿಡಿಸಿದ ವಿಚಾರ. ಜೊತೆಗೆ ಯಾರ ಮಾತಿಗೂ ಅಷ್ಟು ಕಿವಿಕೊಡದ ಬಂಗಾರಮ್ಮ, ಪುಟ್ಟಕ್ಕ ಏನಾದರೂ ಹೇಳಿದರೆ ಆ ಮಾತನ್ನು ಕೇಳುತ್ತಾರೆ. ಆ ಕಾರಣದಿಂದಾಗಿಯೇ ಒಂದೆರಡು ಸಲ ತನಗೆ ಆಗದೆ ಇದ್ದರೂ, ನಂಜಮ್ಮನ ಮನೆಗೆ ಒಂದೆರಡು ಸಲ ಹೋಗಿ ಮಾತನಾಡಿಕೊಂಡು ಬಂದಿದ್ದರು. ಆದರೆ ಏನು ಪ್ರಯೋಜವಾಗದೆ ಇದ್ದ ಕಾರಣ ಸುಮ್ಮನಾಗಿದ್ದಾರೆ.
ಆದರೆ ತಮ್ಮ ಮನೆಯಲ್ಲಿ ಏನೇ ಕಾರ್ಯಕ್ರಮ ನಡೆದರು ಅದಕ್ಕೆ ಪುಟ್ಟಕ್ಕನನ್ನು ಅತಿಥಿಯಾಗಿ ಬಂಗಾರಮ್ಮ ಕರೆಯುತ್ತಾರೆ. ಈಗ ಮಗನ ನಿಶ್ಚಿತಾರ್ಥ ಮಾಡುವುದಕ್ಕೆ ಹೊರಟಿದ್ದು, ಮೊದಲ ಅತಿಥಿಯಾಗಿ ಪುಟ್ಟಕ್ಕನನ್ನೇ ಕರೆಯುವುದಕ್ಕೆ ಬಂದಿದ್ದಾರೆ. ಬಂಗಾರಮ್ಮನ ಆಗಮನದಿಂದ ಇಲ್ಲಿ ಎಲ್ಲರೂ ಒಂದೊಂದು ಕಡೆ ಬಚ್ಚಿಟ್ಟುಕೊಳ್ಳುವ ಹಂತಕ್ಕೆ ಬಂದು ತಲುಪಿದ್ದಾರೆ.

ಭಯಕ್ಕೆ ಒಣಗುತ್ತಿದೆ ಕಂಠಿಯ ಗಂಟಲು
ಅವ್ವನ ಮೇಲೆ ಕಂಠಿಗೆ ಇರುವ ಭಯ ಅಷ್ಟಿಷ್ಟಲ್ಲ. ಅದೇ ಕಾರಣಕ್ಕೆ ಇಷ್ಟವೇ ಇಲ್ಲದೆ ಹೋದರೂ ಪೂರ್ವಿಯನ್ನು ಮದುವೆಯಾಗುವುದಕ್ಕೆ ಹೊರಟಿದ್ದಾನೆ. ಇದರ ನಡುವೆ ಹೇಗಾದರೂ ಮಾಡಿ ಮೆಸ್ಸ್‌ಗೆ ತನ್ನ ಪ್ರೀತಿಯನ್ನು ಹೇಳಲೇಬೇಕೆಂದುಕೊಂಡು ಕಂಠಿ ಒದ್ದಾಡುತ್ತಿದ್ದಾನೆ. ತನ್ನೆಲ್ಲಾ ಕೆಲಸಗಳನ್ನು ಬದಿಗೊತ್ತಿ ಸ್ನೇಹಾಳ ಜೊತೆ ತಿರುಗುವುದನ್ನೇ ಫುಲ್ ಟೈಮ್ ಕೆಲಸ ಮಾಡಿಕೊಂಡಿದ್ದಾನೆ. ಇದೀಗ ಗಣೇಶನ ಹಬ್ಬಕ್ಕೆ ಎಂದು ಬಂದು ಅವ್ವನ ಕೈನಲ್ಲಿ ಸಿಕ್ಕಿಬೀಳುವ ಹಂತಕ್ಕೆ ಬಂದು ತಲುಪಿದ್ದಾನೆ. ಪುಟ್ಟಕ್ಕನ ಮನೆಗೆ ಅವ್ವ ಬರುತ್ತಾಳೆ ಎಂಬುದು ಗೊತ್ತಿಲ್ಲದೆ ಹಾಯಾಗಿ ಹಬ್ಬ ಎಂಜಾಯ್ ಮಾಡುತ್ತಿದ್ದ. ಆದರೆ ಅವ್ವನ ಎಂಟ್ರಿ ಯಾವಾಗ ಆಯ್ತೋ, ಕಂಠಿ ಮೈಯೆಲ್ಲಾ ನಡುಗಿದೆ. ಗಂಟಲು ಒಣಗಿ ನೀರು ನೀರು ಎನ್ನುತ್ತಿದ್ದಾನೆ.

ಬಂಗಾರಮ್ಮನ ಕಣ್ಣಿಗೆ ಬಿದ್ದೇ ಬಿಟ್ಟಳು ಸ್ನೇಹಾ
ಬಂಗಾರಮ್ಮನನ್ನು ಕಂಡರೆ ಸ್ನೇಹಾಗೆ ಸುತರಾಮ್ ಆಗುವುದಿಲ್ಲ. ಸ್ನೇಹಾಳನ್ನು ಕಂಡರೆ ಬಂಗಾರಮ್ಮ ಕೂಡ ಕೆಂಡಕಾರುತ್ತಾಳೆ. ಆದರೆ ಸ್ನೇಹಾನೇ, ಪುಟ್ಟಕ್ಕನ ಮಗಳು ಎಂಬುದು ಗೊತ್ತಿಲ್ಲ. ಇತ್ತ ಪುಟ್ಟಕ್ಕನ ಎರಡನೇ ಮಗಳನ್ನು ನೋಡಲೇಬೇಕೆಂದು ಬಂಗಾರಮ್ಮ ಕೂಡ ತುಂಬಾ ಆಸೆ ಇಟ್ಟುಕೊಂಡಿದ್ದಾಳೆ. ಆ ಆಸೆ ಈ ಬಾರಿಯ ಗಣೇಶನ ಹಬ್ಬದಲ್ಲಿ ನೆರವೇರಿದೆ. ಸಹನಾಳ ಸ್ನೇಹಿತೆಯನ್ನೇ ಪುಟ್ಟಕ್ಕನ ಎರಡನೇ ಮಗಳು ಎಂದು ಬಂಗಾರಮ್ಮ ತಿಳಿದುಕೊಂಡಿದ್ದು, ಕಂಠಿಗೆ ಮೊದಲ ಅಪಾಯ ತಪ್ಪಿದಂತೆ ಆಗಿದೆ.

ಸ್ನೇಹಾಳಿಂದ ಬೇಸರಗೊಂಡ ನಂಜಮ್ಮ
ಬಂಗಾರಮ್ಮ ಬಂದ ಕೂಡಲೇ ಸ್ನೇಹಾ, ನಂಜಮ್ಮ, ಚಂದ್ರು ಮತ್ತು ಪಲ್ಲವಿಯನ್ನು ಮನೆಯೊಳಗೆ ಕರೆದುಕೊಂಡು ಬಂದಿದ್ದಾಳೆ. ಆಗ ನಂಜಮ್ಮ ಯಾಕವ್ವ ಸ್ನೇಹಾ ಅವರಿಗೆ ಹೆದರಿಕೊಂಡು ಇಲ್ಲಿಗೆ ಕರೆದುಕೊಂಡು ಬಂದಿದ್ದು ಎಂದಾಗ, ಅದು ಹೆದರಿಕೊಂಡು ಅಲ್ಲಮ್ಮ. ಹಬ್ಬದ ದಿನ ಜಗಳವಾಗಬಾರದು ಎಂಬ ಕಾರಣಕ್ಕೆ ಎಂದಿದ್ದಾರೆ. ಮೊದಲೇ ಬಂಗಾರಮ್ಮ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾಳೆ. ಅದಕ್ಕೆ ಜ್ಯೂಸ್ ತರಲು ಒಳಗೆ ಹೋದಾಗ, ಪಲ್ಲವಿ ಮತ್ತಷ್ಟು ಮನಸ್ಸು ಕೆಡಿಸಿದ್ದಾಳೆ. ಈ ಇಬ್ಬರು ಏನಾದರೂ ಕ್ಲೋಸ್ ಆಗಿಬಿಟ್ಟರಾ ಅಂತ ಯೋಚಿಸಿದ ನಂಜಮ್ಮ, ಕಂಠಿಯ ವಿಚಾರವನ್ನು ಸ್ನೇಹಾ ಮುಂದೆ ಎತ್ತಿದ್ದಾಳೆ.

ಇಕ್ಕಟ್ಟಿನಲ್ಲಿ ಸಿಲುಕಿರುವ ಚಂದ್ರು
ಅತ್ತ ಚಂದ್ರು ಮತ್ತು ವಸು ಜೀವನ ಸರಿಯಾಗುತ್ತಿಲ್ಲ. ಇತ್ತ ಕಂಠಿ ಸಿಕ್ಕಾಪಟ್ಟೆ ಸುಳ್ಳನ್ನು ಹೇಳಿಕೊಂಡು ಸ್ನೇಹಾಳ ಬಳಿ ಕ್ಲೋಸ್ ಆಗುತ್ತಿದ್ದಾನೆ. ಈಗಾಗಲೇ ಚಂದ್ರು ವಾರ್ನಿಂಗ್ ಕೂಡ ಮಾಡಿದ್ದಾನೆ. ನನ್ನ ಮತ್ತು ವಸು ಜೀವನ ಸರಿಯಾಗಿರಬೇಕು ಎಂದರೆ ನೀನು ಸ್ನೇಹಾಳ ಬಳಿ ಸತ್ಯ ಹೇಳು ಅಂತ. ಆದರೆ ಅದನ್ನು ಬಿಟ್ಟು ಕಂಠಿ ಈಗ ಗಣೇಶನ ಹಬ್ಬದಲ್ಲಿ ಮನೆ ಮಗನಂತೆ ಓಡಾಡುತ್ತಿದ್ದಾನೆ. ಪ್ರಸಾದ ಹಂಚುವುದಕ್ಕೆ ನಾನು ಸಹಾಯ ಮಾಡುತ್ತೀನಿ ಎಂದರೂ ಬೇಡ ಅಣ್ಣಯ್ಯ ನಾನು ಮತ್ತು ಶ್ರೀನೇ ಹಂಚುತ್ತೀವಿ ಎಂದಿದ್ದಾಳೆ. ಇದನ್ನೇ ಯೋಚಿಸುತ್ತಾ ಚಂದ್ರು ಗೊಂದಲಕ್ಕೀಡಾಗಿದ್ದಾನೆ.


Click it and Unblock the Notifications











