"ಮತ್ತೊಮ್ಮೆ ತೆರೆ ಮೇಲೆ ಭೇಟಿ ಆಗೋಣ"; ನೆಟ್ಟಿಗರಿಗೆ 'ಪುಟ್ಟಕ್ಕನ ಮಗಳು' ನಟಿ ಸಂಜನಾ ಬುರ್ಲಿ ವಿದಾಯ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಪುಟ್ಟಕ್ಕನ ಮಕ್ಕಳು' ಕೂಡಾ ಒಂದು. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಪುಟ್ಟಕ್ಕನ ಎರಡನೇ ಮಗಳು ಸ್ನೇಹಾಳಾಗಿ ಅಭಿನಯಿಸುತ್ತಿರುವ ಸಂಜನಾ ಬುರ್ಲಿ ಇದೀಗ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದಾರೆ. ಸರಿಸುಮಾರು ಮೂರು ವರ್ಷಗಳ ಕಾಲ ಸ್ನೇಹಾ ಆಗಿ ಅಭಿನಯಿಸಿದ್ದ ಸಂಜನಾ ಬುರ್ಲಿ ತನ್ನ ನಟನೆಯ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಇದೀಗ ಮೂರು ವರ್ಷದ ಬಳಿಕ ಈಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಸ್ನೇಹಾ ಪಾತ್ರದಿಂದ ಹೊರಬಂದಿದ್ದಾರೆ. ಈ ವಿಚಾರವನ್ನು ಸ್ವತಃ ಸಂಜನಾ ಅವರೇ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ. "ನಮಸ್ತೆ ಪ್ರಿಯರೇ, ಎಲ್ಲಾ ಅಮೂಲ್ಯ ಅಭಿಮಾನಿಗಳು ಫಾಲೋವರ್‌ಗಳೊಂದಿಗೆ ಒಂದು ಸುದ್ದಿಯನ್ನು ಹಂಚಿಕೊಳ್ಳ ಬಯಸುತ್ತೇನೆ. ಪ್ರತಿಯೊಂದು ದೊಡ್ಡ ವಿಷಯವೂ ಕೊನೆಗೊಳ್ಳುತ್ತದೆ. ಈ ಮಹತ್ವದ ಪಾತ್ರದೊಂದಿಗೆ ನನ್ನ ಪ್ರಯಾಣವೂ ಕೊನೆಗೊಳ್ಳುತ್ತದೆ" ಎಂದು ಸಂಜನಾ ಬರೆದುಕೊಂಡಿದ್ದಾರೆ.

ಇದರ ಜೊತೆಗೆ "ಕಳೆದ ಮೂರು ವರ್ಷಗಳಿಂದ ನಾನು ಸ್ನೇಹಾ ಪಾತ್ರಕ್ಕೆ ಜೀವ ತುಂಬಿದ್ದೇನೆ. ಜೊತೆಗೆ ಅದು ನನ್ನ ನಟನಾ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಇದೀಗ ವಿದಾಯ ಹೇಳುವ ಸಮಯ ಬಂದಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಆಗಿ ನಟಿಸುವ ಸುವರ್ಣಾವಕಾಶ ದೊರೆತಿರುವುದಕ್ಕೆ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ. ನನಗೆ ಈ ಉತ್ತಮ ಪಾತ್ರವನ್ನು ನೀಡಿದ್ದಕ್ಕಾಗಿ ಮತ್ತು ಸ್ನೇಹಾ ಆಗಿ ನನ್ನನ್ನು ಆಯ್ಕೆ ಮಾಡಿದ ಜೀ ಕನ್ನಡ ಚಾನೆಲ್ ಮತ್ತು ಪ್ರೊಡಕ್ಷನ್ ಹೌಸ್‌ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು" ಎಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದರ ಜೊತೆಗೆ "ಕೆಲವು ಅನಿವಾರ್ಯ ಸಂದರ್ಭಗಳು ಮತ್ತು ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ಭಾರವಾದ ಹೃದಯದಿಂದ ಸ್ನೇಹಾ ಪಾತ್ರದಿಂದ ಹೊರಬಂದಿದ್ದೇನೆ. ಈ ಪ್ರಾಜೆಕ್ಟ್‌ನಲ್ಲಿನ ಈ ಪಾತ್ರಕ್ಕಾಗಿ ಹಾಗೂ ಈ ಪಾತ್ರದಿಂದ ನಾನು ನಟನಾಗಿ ಪಡೆದ ಅಪಾರ ಪ್ರೀತಿ ಮತ್ತು ಮನ್ನಣೆಯು ನನ್ನ ದೊಡ್ಡ ಪ್ರಶಸ್ತಿ ಮತ್ತು ಪ್ರತಿಫಲವಾಗಿದ್ದು ಅದು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ನಿಮ್ಮಲ್ಲಿ ಹೆಚ್ಚಿನವರು ಪಾತ್ರವು ಸಾಯುವುದನ್ನು ನೋಡಲು ದುಃಖಿತರಾಗಿದ್ದೀರಿ ಎಂದು ನನಗೆ ತಿಳಿದಿದೆ,.ಆದರೆ, ನಾಯಕಿಯಾಗಿ ನಾನು ಇಟ್ಟಿರುವ ಸಮರ್ಪಣೆಗೆ ಬದಲಿ ಇರಲು ಸಾಧ್ಯವಿಲ್ಲ ಎಂದು ಅದು ತೋರಿಸುತ್ತದೆ. ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳೋಣ" ಎಂದು ಸಂಜನಾ ಬುರ್ಲಿ ಬರೆದುಕೊಂಡಿದ್ದಾರೆ.

ರಂಗಭೂಮಿಯ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡ ಉತ್ತರ ಕರ್ನಾಟಕದ ಬೆಡಗಿ ಸಂಜನಾ ಬುರ್ಲಿ ನವೀನ್ ಕೃಷ್ಣ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪತ್ತೇಧಾರಿ ಪ್ರತಿಭಾ' ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದರು. ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ ನಾಯಕಿ ಮಯೂರಿ ಆಗಿ ನಟಿಸಿದ ಈಕೆ ಹಿರಿತೆರೆಯಲ್ಲಿ ಮೋಡಿ ಮಾಡಿದ್ದಾರೆ.
'ಸ್ನೇಹರ್ಷಿ' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ಸಂಜನಾ ಬುರ್ಲಿ ಮುಂದೆ 'ವೀಕೆಂಡ್', 'ರಾಧಾ ಮಿಸ್ಸಿಂಗ್ ರಮಣ ಸರ್ಚಿಂಗ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











