Pavan Kumar: ಹೀರೊ, ವಿಲನ್ ಎರಡೂ ಪಾತ್ರಕ್ಕೂ ಸೈ ಈ ಮಲೆನಾಡ ಮುರಳಿ
ಮಲೆನಾಡಿನ ಹುಡುಗ ನಟನಾಗಬೇಕು ಎಂದು ಕನಸು ಕಂಡಿದ್ದಲ್ಲದೇ, ಅದನ್ನು ಈಗ ನಿಜ ಕೂಡ ಮಾಡಿಕೊಂಡಿದ್ದಾರೆ. ಅವರೇ ಎಲ್ಲರ ಮೆಚ್ಚಿನ ನಟ ಪವನ್ ಕುಮಾರ್.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ವೀಕ್ಷಕರ ಫೇವರಿಟ್ ಧಾರಾವಾಹಿಯಲ್ಲಿ ಒಂದು. ಈ ಸೀರಿಯಲ್‌ನಲ್ಲಿ ಪುಟ್ಟಕ್ಕನ ಹಿರಿ ಮಗಳು ಸಹನಾಳ ಪತಿ ಮುರಳಿಯ ಪಾತ್ರದಲ್ಲಿ ನಟ ಪವನ್ ಕುಮಾರ್ ಅಭಿನಯಿಸುತ್ತಿದ್ದಾರೆ.

ಪವನ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆತನಿಗೆ ಧಾರಾವಾಹಿ ತಂಡದವರೆಲ್ಲಾ ವಿಶ್ ಮಾಡಿ ಸಂಭ್ರಮಿಸಿದ್ದಾರೆ. ಪವನ್ ಅವರ ಕಿರುತೆರೆ ಜರ್ನಿ ಬಗ್ಗೆಯೂ ಈ ಲೇಖನದಲ್ಲಿ ತಿಳಿಯೋಣ ಬನ್ನಿ.
ನಟನೆ ಕರಗತ ಮಾಡಿಕೊಂಡ ನಟ
ಕಿರುತೆರೆಯಲ್ಲಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟ ಪವನ್ ಕುಮಾರ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಪವನ್ ಕುಮಾರ್‌ಗೆ ಮೊದಲಿನಿಂದಲೂ ನಟನಾಗಬೇಕು ಎಂಬ ಕನಸಿತ್ತು. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ ಪದವಿ ಪಡೆದುಕೊಂಡಿದ್ದಾರೆ. ಬಳಿಕ ಬಣ್ಣದ ಲೋಕದತ್ತ ಮುಖ ಮಾಡಿದರು. ನಟನೆ ಕಲಿಯಲು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಸೇರಿಕೊಂಡು ತರಬೇತಿ ಪಡೆದುಕೊಂಡಿದ್ದಾರೆ. ಟೆಂಟ್ ಸಿನಿಮಾ ಶಾಲೆಯ ಮೂಲಕ ಅಭಿನಯವನ್ನು ಕಲಿಯುತ್ತಿದ್ದರು. ಟೆಂಟ್ ಸಿನಿಮಾದಲ್ಲಿ 4 ತಿಂಗಳ ಕಾಲ ಕಲಿತ ಬಳಿಕ 'ಮಾದಕ' ಎಂಬ ಕಿರುತೆರೆ ಧಾರಾವಾಹಿಯಲ್ಲಿ ನಟಿಸಿ ಜನ ಮನ ಗೆದ್ದರು.

ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟ
ಪವನ್‌ಗೆ ಮೊದಲಿಗೆ ಅವಕಾಶಗಳ ಮಹಾಪೂರವೇ ಹರಿದು ಬಂದಿತ್ತು. 'ಪತ್ತೆಧಾರಿ ಪ್ರತಿಭಾ', 'ನಾ ನಿನ್ನ ಬಿಡಲಾರೆ', 'ಮಹಾಕಾಳಿ' ಹೀಗೆ ಅನೇಕ ಪೌರಾಣಿಕ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಿನ್ನರಿ' ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆಕೃತಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ವಿಲನ್ ಆಗಿ ಅಬ್ಬರಿಸಿದ್ದರು. ಸದ್ಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.
ಸಿನಿಮಾದಲ್ಲೂ ನಟಿಸಿರುವ ಪವನ್
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮುರಳಿ ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ದೇವಿರಪುರದ ಕಾಲೇಜ್ ಲೆಕ್ಚರರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಭೂಮಿಕಾ ಶೆಟ್ಟಿ ಜೊತೆಗೆ 'ಸಂಚಿನ ಸುಳಿ'ಯಲ್ಲಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಸೇರಿದಂತೆ ಎರಡರಿಂದ ಮೂರು ಸಿನಿಮಾಗಳಲ್ಲಿ ಪವನ್ ಅವರು ನಟಿಸಿದ್ದಾರೆ. ಇದಲ್ಲದೇ, ನಟಿ ಸಂಜನಾಬುರ್ಲಿ ಅವರೊಂದಿಗೆ ಕೆಲ ವೀಡಿಯೋ ಸಾಂಗ್ಸ್‌ಗೆ ಹೆಜ್ಜೆ ಹಾಕಿದ್ದಾರೆ. ಮಲೆನಾಡು ಮೂಲದ ಪವನ್ ಕುಮಾರ್ ಕಿರುತೆರೆಯಲ್ಲಿ ಹಲವು ಏಳು ಬೀಳು ಕಂಡಿದ್ದಾರೆ. ಕೆಲವೊಮ್ಮೆ ಮುಜುಗರ ಆದರೂ ಕೂಡ ಸಿಕ್ಕ ಎಲ್ಲಾ ಅವಕಾಶವನ್ನು ಬಳಸಿಕೊಂಡಿದ್ದಾರೆ.
ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ಪವನ್
ಪವನ್ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಆತನಿಗೆ ಸಂಜನಾ ಬುರ್ಲಿ, ನಟಿ ಅಕ್ಷರಾ ಕೂಡ ವಿಶ್ ಮಾಡಿ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಸ್ಟೋರಿ ಹಾಕಿದ್ದಾರೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ತಂಡದಲ್ಲಿ ನಟ ಪವನ್ ಕುಮಾರ್ ಅವರ ಹುಟ್ಟು ಹಬ್ಬ ಸಂಭ್ರಮವನ್ನು ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











