'ಬೆಸ್ಟ್ ಪೋಷಕ ನಟಿ' ಪ್ರಶಸ್ತಿ ಪಡೆದ ಪುಟ್ಟಕ್ಕನ ಮಗಳು; ಅವಾರ್ಡ್ ಗೆದ್ದ ಖುಷಿಯಲ್ಲಿ ತೇಲುತ್ತಿರೋ ಅಕ್ಷರಾ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಪುಟ್ಟಕ್ಕನ ಮಕ್ಕಳು' ಒಂದು. ಪುಟ್ಟಕ್ಕನ ಹಿರಿಮಗಳು ಸಹನಾಳಾಗಿ ನಟಿಸಿ ಸೈ ಎನಿಸಿಕೊಂಡಿರುವ ಚೆಂದುಳ್ಳಿ ಚೆಲುವೆಯ ಹೆಸರು ಅಕ್ಷರ ಗೌಡ. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ಅಕ್ಷರ ಗೌಡ ಇದೀಗ ಬೆಸ್ಟ್ ಪೋಷಕ ನಟಿ ಹೌದು.
ಜೀ ಕುಟುಂಬ ಅವಾರ್ಡ್ಸ್ ಇತ್ತೀಚೆಗಷ್ಟೇ ಬಹಳ ಅದ್ಧೂರಿಯಾಗಿ ನಡೆದಿದ್ದು ಅದರಲ್ಲಿ ಬೆಸ್ಟ್ ಪೋಷಕ ನಟಿ ಪ್ರಶಸ್ತಿ ಅಕ್ಷರ ಗೌಡ ಅವರ ಪಾಲಾಗಿದೆ. "ಬೆಸ್ಟ್ ಪೋಷಕ ನಟಿ ಅವಾರ್ಡ್ ಸಿಕ್ಕಿದೆ. ನನಗಂತೂ ತುಂಬಾನೇ ಖುಷಿ ಆಗುತ್ತಿದೆ. ನಾನು ಇಲ್ಲಿಯವರೆಗೆ ಬರುವುದಕ್ಕೆ ಸಪೋರ್ಟ್ ಮಾಡಿದ್ದಕ್ಕೆ ಎಲ್ಲರಿಗೂ ತುಂಬಾ ತುಂಬಾ ಧನ್ಯವಾದಗಳು" ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ ಅಕ್ಷರ ಗೌಡ.

ಅಂದ ಹಾಗೇ ಕಳೆದ ಮೂರು ವರ್ಷಗಳಿಂದ ಸಹನಾ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಅಕ್ಷರ ಗೌಡ ಅವರ ನಟನೆಯ ನಂಟು ಶುರುವಾಗಿದ್ದು ಪೋಷಕ ಪಾತ್ರದಿಂದ. ಹೌದು, ಕಲರ್ಸ್ ಕನ್ನಡ ವಾಹಿನಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ತಂಗಿಯಾಗಿ ಕಾಣಿಸಿಕೊಂಡಿದ್ದರು ಅಕ್ಷರ. ಪೋಷಕ ಪಾತ್ರವಾಗಿದ್ದರೂ ಮುದ್ದಾದ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದರು ಅಕ್ಷರ.
ಮುಂದೆ ಟಿ ಆರ್ ಪಿ ಕಾರಣದಿಂದ 'ರಕ್ಷಾಬಂಧನ' ಧಾರಾವಾಹಿಯು ಇದ್ದಕ್ಕಿದ್ದಂತೆ ತನ್ನ ಪ್ರಸಾರ ನಿಲ್ಲಿಸಿತ್ತು. 'ರಕ್ಷಾಬಂಧನ' ಧಾರಾವಾಹಿಯ ನಂತರ 'ಅಮ್ನೋರು' ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ ಈಕೆ ಪೋಷಕ ಪಾತ್ರದಿಂದ ನಾಯಕ ನಟಿಯಾಗಿ ಬಡ್ತಿಯನ್ನು ಪಡೆದಿದ್ದರು. ಜನಪ್ರಿಯ ನಿರ್ದೇಶಕ ರಮೇಶ್ ಇಂದಿರಾ ಅವರ ನಿರ್ದೇಶನದಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಭಕ್ತಿಪ್ರಧಾನ ಧಾರಾವಾಹಿ 'ಅಮ್ನೋರು'ವಿನಲ್ಲಿ ಅಕ್ಷರ ಗೌಡ ಅಭಿನಯಿಸಿದ್ದರು.

ಮುಂದೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಸಹನಾ ಆಗಿ ನಟಿಸಿದ ಈಕೆ ಕಳೆದ ಮೂರು ವರ್ಷಗಳಿಂದ ಆ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಿಸಿ ಇದೀಗ ಬೆಸ್ಟ್ ಪೋಷಕ ನಟಿ ಪ್ರಶಸ್ತಿ ಪಡೆದುಕೊಂಡಿರುವ ಈಕೆಗೆ ಇದು ಮೊದಲ ಪ್ರಶಸ್ತಿ ಏನಲ್ಲ. ಈ ಹಿಂದೆ ಆಕೆ ನೆಚ್ಚಿನ ಮಗಳು, ನೆಚ್ಚಿನ ಸಹೋದರಿ ಪ್ರಶಸ್ತಿಯನ್ನು ಕೂಡಾ ಪಡೆದುಕೊಂಡಿದ್ದರು.
ಇನ್ನು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅಕ್ಷರ ಅವರು ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗಲೇ ನಟಿಯಾಗಬೇಕು ಎಂದು ಬಯಸಿದ ಬೆಡಗಿ. ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಮಹಾದಾಸೆ ಹೊಂದಿರುವ ಅಕ್ಷರ ಗೌಡ ತಮ್ಮ ಕನಸನ್ನು ನನಸು ಮಾಡಿಕೊಂಡ ಗಟ್ಟಿಗಿತ್ತಿ. ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿರುವ ಈಕೆ 105k ಫಾಲೋವರ್ಸ್ ಹೊಂದಿದ್ದಾರೆ. ಬಿಡುವಾದಾಗಲೆಲ್ಲಾ ಫೋಟೋ, ವಿಡಿಯೋಗಳನ್ನು ಶೇರ್ ಮಾಡುವ ಈಕೆ ಫಾಲೋವರ್ಸ್ ಅನ್ನು ಎಂಟರ್‌ಟೈನ್ ಮಾಡುವುದಕ್ಕೆ ಮರೆಯುವುದಿಲ್ಲ.


Click it and Unblock the Notifications











