Puttakkana Makkalu-Dhanush: ಆಡಿಷನ್‌ಗಳಲ್ಲಿ ರಿಜೆಕ್ಟ್ ಆಗಿದ್ದ ಈ ನಟ 'ಪುಟ್ಟಕ್ಕನ ಅಳಿಯ ಕಂಠಿ ಆಗಿದ್ದೇಗೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಾಯಕ ಹಾಗೂ ಬಡ್ಡಿ ಬಂಗಾರಮ್ಮನ ಮಗ ಕಂಠಿ ಆಗಿ ಅಭಿನಯಿಸುತ್ತಿರುವ ಧನುಷ್ ಎನ್.ಎಸ್ ಕೋಲಾರ ಜಿಲ್ಲೆಯವರು. ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿರುವ ಧನುಷ್‌ಗೆ ಸಣ್ಣ ವಯಸ್ಸಿನಿಂದಲೂ ನಟನಾಗಿ ಗುರುತಿಸಿಕೊಳ್ಳುವ ಬಯಕೆ.
ಸಿನಿಮಾ ನಟರನ್ನು ನೋಡುವಾಗ ತಾನು ಕೂಡಾ ಅವರಂತೆ ನಟನಾಗಬೇಕು. ಪರದೆಯ ಮೇಲೆ ಕಾಣಿಸಿಕೊಳ್ಳಬೇಕು ಎಂದು ಹಂಬಲಿಸುತ್ತಿದ್ದ ಧನುಷ್ ಇಂದು ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಕಂಠಿ. ಮೊದಲ ಧಾರಾವಾಹಿಯಲ್ಲಿಯೇ ರಗಡ್ ಅವತಾರದ ಮೂಲಕ ಕಿರುತೆರೆಗೆ ಈತ ಕಾಲಿಟ್ಟಿದ್ದರೂ ಹೆಣ್ಣು ಮಕ್ಕಳ ಪ್ರೀತಿಯ ಆರಾಧ್ಯ ದೈವ. ಅನಕ್ಷರಸ್ಥ, ರೌಡಿಸಂ ಮಾಡುವ ಹುಡುಗನಾಗಿ ತೆರೆ ಮೇಲೆ ಈತ ಕಂಡರೂ ಹುಡುಗಿಯರ ಪಾಲಿಗೆ ಚಾಕಲೇಟ್ ಹೀರೋ!

ಮೊದಲ ಆಡಿಶನ್ ಅಲ್ಲ!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಆಡಿಶನ್‌ಗೆ ಮೊದಲು ಧನುಷ್ ಕೆಲವೊಂದು ಆಡಿಶನ್‌ಗಳಿಗೆ ಹೋಗಿದ್ದರು. ಆದರೆ, ಅಲ್ಲಿ ಅವರು ರಿಜೆಕ್ಟ್ ಕೂಡಾ ಆಗಿದ್ದರು. ನಂತರ 'ಪುಟ್ಟಕ್ಕನ ಮಕ್ಕಳು' ಆಡಿಶನ್‌ಗೆ ಹೋದ ಇವರು ಆಯ್ಕೆಯಾದರು. ಅದ್ಭುತ ನಟನೆಯ ಮೂಲಕ ವೀಕ್ಷಕರ ಮನೆ ಮನ ಸೆಳೆದಿರುವ ಧನುಷ್ ಕಳೆದ ವರ್ಷ ನಡೆದ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಬೆಸ್ಟ್ ಮಗ ಅನ್ನೋ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ಕಂಠಿಯಾಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಇವರಿಗೆ ಕಿರುತೆರೆ ಹೊಸತು ಹೊರತು ನಟನೆಯಲ್ಲ.
ಕಿರುಚಿತ್ರ, ಆಲ್ಬಂಗಳಲ್ಲಿ ಮೋಡಿ
'ಅನಿರೀಕ್ಷಿತ', '18+2' ಎಂಬ ಕಿರುಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಧನುಷ್ ಎನ್ ಎಸ್ ವಿಡಿಯೋ ಆಲ್ಬಂಗಳಲ್ಲಿಯೂ ಕಾಣಿಸಿಕೊಂಡಿರುವ ಪ್ರತಿಭೆ. ಹೌದು, 'ನನ್ನ ನಗು' ಹಾಗೂ 'ಮನಸ್ಸೆಲ್ಲಾ ನೀನೆ' ಎನ್ನುವ ವಿಡಿಯೋ ಆಲ್ಬಂಗಳಲ್ಲಿಯೂ ಧನುಷ್ ಅವರು ನಟಿಸಿದ್ದಾರೆ. ಈ ಕಿರುಚಿತ್ರ ಹಾಗೂ ವಿಡಿಯೋ ಆಲ್ಬಂಗಳಿಗೆ ಸಾಕಷ್ಟು ಮೆಚ್ಚುಗೆಯೂ ಕೂಡಾ ವ್ಯಕ್ತವಾಗಿತ್ತು.

ಸಿನಿಮಾದಲ್ಲಿ ನಟಿಸಿದರೆ ಅಚ್ಚರಿಯಲ್ಲ
ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಧನುಷ್ ಅವರು ಮುಂದಿನ ದಿನಗಳಲ್ಲಿ ಹಿರಿತೆರೆಯಲ್ಲಿ ನಾಯಕರಾಗಿ ಮಿಂಚಿದರೆ ಆಶ್ಚರ್ಯವೇನಿಲ್ಲ. ಈಗಾಗಲೇ ತಮ್ಮ ಮುದ್ದಾದ ನೋಟ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಧನುಷ್ ಹಿರಿತೆರೆಗೆ ಕಾಲಿಡುವುದೊಂದೇ ಬಾಕಿ.


Click it and Unblock the Notifications











