'ಪುಟ್ಟಕ್ಕನ ಮಕ್ಕಳು' ಖ್ಯಾತಿಯ ಸ್ನೇಹಾ ಹೊಸ ಫೋಟೊಶೂಟ್!
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನ್ಯಾಯಕ್ಕಾಗಿ ಹೋರಾಡುವ ಬಜಾರಿ ಸ್ನೇಹಾ, ಪ್ರೇಕ್ಷಕರಿಗೆ ತುಂಬಾನೇ ಇಷ್ಟ. ಸ್ನೇಹಾ ಧಾರಾವಾಹಿಯಲ್ಲಿ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾಳೆ. ಆದರೆ ಕೊಂಚ ಸಿಡುಕು ಬುದ್ಧಿ ಇರುವುದೇ ಮನೆಯವರಿಗೆ ಕಷ್ಟವಾಗಿದೆ.
ಕೆಎಎಸ್ ಆಗುವ ಕನಸಿನ ಹಾದಿಯಲ್ಲಿ ಸ್ನೇಹಾ ಇದ್ದು, ಇದರ ಜೊತೆ ಜೊತೆಗೆ ಸದಾ ನ್ಯಾಯಕ್ಕಾಗಿ ಹೋರಾಡುತ್ತಿರುತ್ತಾಳೆ. ನ್ಯಾಯ ಮಾತಾಡುತ್ತಾ, ಸದಾ ಸಿಡುಕುವ ಸ್ನೇಹಾಳನ್ನು ಕಂಡರೆ ಊರಿನವರಿಗೆಲ್ಲಾ ಸ್ವಲ್ಪ ಭಯ. ತನ್ನ ಜೋರು ಬಾಯಿಂದಲೇ ಪ್ರೇಕ್ಷಕರ ಮನಗೆದ್ದಿದ್ದಾಳೆ.
ಧಾರಾವಾಹಿಯಲ್ಲಿ ಸ್ನೇಹಾ ಆಗಿರುವ ಈಕೆಯ ನಿಜವಾದ ಹೆಸರು ಸಂಜನಾ ಬುರ್ಲಿ ಎಂಬುದೂ ಈಗಾಗಲೇ ಎಲ್ಲರಿಗೂ ಗೊತ್ತಾಗಿದೆ. ನಿಜ ಜೀವನದಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಸಂಜನಾ ಸದ್ಯ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಇದರ ಜೊತೆಗೆ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡಿರುವುದು ವಿಶೇಷ.

ರಂಗಭೂಮಿ ಕಲಾವಿದೆ ಸಂಜನಾ!
ಸಂಜನಾ ಬುರ್ಲಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ. ಸಂಜನಾ ಅವರ ಮೊದಲ ಧಾರಾವಾಹಿ 'ಪತ್ತೆದಾರಿ ಪ್ರತಿಭಾ'. ಈ ಹಿಂದೆ 'ಲಗ್ನಪತ್ರಿಕೆ' ಎಂಬ ಧಾರಾವಾಹಿಯಲ್ಲಿ ಸಂಜನಾ ಬುರ್ಲಿ ನಟಿಸಿದ್ದರು. ಈ ಧಾರಾವಾಹಿ ಅವರಿಗೆ ಒಳ್ಳೆಯ ಬ್ರೇಕ್ ಕೊಡುತ್ತೆ ಎಂದುಕೊಂಡಿದ್ದರು. ಆದರೆ ಅದು ಅರ್ಧಕ್ಕೆ ನಿಂತಾಗ ಬೇಸರಗೊಂಡಿದ್ದರು. ರಂಗಭೂಮಿ ಕಲಾವಿದೆಯಾಗಿರುವ ಸಂಜನಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೇವಲ ಕನ್ನಡ ಅಷ್ಟೇ ಅಲ್ಲದೇ ತಮಿಳಿನಲ್ಲಿಯೂ ನಟಿಸಿದ್ದಾರೆ. ಆದರೆ ಈ ಯಾವ ಸಿನಿಮಾಗಳೂ ಇನ್ನೂ ರಿಲೀಸ್ ಆಗಿಲ್ಲ. ಅದಕ್ಕೆ ಕಾರಣ ಕೋವಿಡ್.

ಸಿನಿಮಾಗಳಲ್ಲಿ ನಟಿಸುತ್ತಿರುವ ಸಂಜನಾ!
ಮೊದಲು ಸಂಜನಾ ಬುರ್ಲಿ ಅವರು ಸ್ನೇಹಾ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಕಳೆದ ವರ್ಷ ಸಂಜನಾ ಅವರು 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಟ್ರೈಲರ್ ಹಾಗೂ ಹಾಡು ರಿಲೀಸ್ ಆಗಿದೆ. ಸಿನಿಮಾ ರಿಲೀಸ್‌ಗಾಗಿ ಸಂಜನಾ ವೈಟ್ ಮಾಡುತ್ತಿದ್ದಾರೆ. ಇನ್ನು ಅನಂತ್ ನಾಗ್ ಅವರ ಜೊತೆಗೆ ವೀಕೆಂಡ್ ಸಿನಿಮಾ ಹಾಗೂ ನಾನ್ ವೆಜ್ ಎಂಬ ಚಿತ್ರದಲ್ಲೂ ಸಂಜನಾ ನಟಿಸಿದ್ದು, ತಮಿಳಿನ ಚಿತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಮುಂದಿನ ದಿನಗಳಲ್ಲೂ ಒಳ್ಳೊಳ್ಳೆಯ ಪಾತ್ರಗಳು ಬಂದರೆ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.

ಓದು ಮುಖ್ಯ.. ನಟನೆ ಇಷ್ಟ!
ಸಂಜನಾ ಇಂಜಿನಿಯರಿಂಗ್ ಸ್ಟೂಡೆಂಟ್. ಸಂಜನಾಗೆ ಓದುವುದು ದೊಡ್ಡ ಕನಸಾದರೆ, ನಟನೆ ಫ್ಯಾಷನ್ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಅವರು ತಮ್ಮ ಓದಿನ ಜೊತೆಗೆ ನಟನೆಯನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಎಂಟನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಸಂಜನಾ ಕಾಲೇಜು ಮುಗಿದ ಮೇಲೆ ಶೂಟಿಂಗ್‌ಗೆ ಬರುತ್ತಾರೆ. ಶೂಟಿಂಗ್ ಸಮಯದಲ್ಲೂ ಬಿಡುವು ಸಿಕ್ಕರೆ ಓದಿಕೊಳ್ಳುತ್ತಾರಂತೆ. ಇನ್ನು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲೂ ಸಂಜನಾ ಐಎಎಸ್ ಆಗಲು ಶ್ರಮಿಸುತ್ತಿದ್ದಾರೆ. ಈ ಧಾರಾವಾಹಿಯಿಂದ ಸಂಜನಾ ಅವರಿಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆಗಳು ಸಿಗುತ್ತಿದ್ದು, ಖುಷಿಯಾಗುತ್ತಿದೆ ಎಂದು ಹೇಳಿದರು.

ನಟಿ ಸಂಜನಾ ಫೋಟೊಶೂಟ್!
ಇನ್ನು ಸಂಜನಾ ಬುರ್ಲಿ ಅವರ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದು, ಕಂಠಿ ಹಾಗೂ ಸಂಜನಾ ಇಬ್ಬರೂ ಯಾವಾಗ ಪ್ರೀತಿಸಲು ಆರಂಭಿಸುತ್ತಾರೋ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ, ಕಂಠಿ ಹಾಗೂ ಸಂಜನಾ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು, ಇದರ ವಿಡಿಯೋವನ್ನು ಜೀ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಇದನ್ನು ನೋಡಿದ ಪ್ರೇಕ್ಷಕರು ಖುಷಿ ಪಟ್ಟಿದ್ದರು. ಇನ್ನು ಆಗಾಗ ಫೋಟೊಶೂಟ್ ಮಾಡಿಸುವ ಸಂಜನಾ ಅವರು, ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಹಸಿರು ಗೌನ್‌ನಲ್ಲಿ ಫೋಟೊಶೂಟ್ ಮಾಡಿಸಿದ್ದು, ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ.


Click it and Unblock the Notifications











