Sanjana Burli: ಬೆಳ್ಳಿತೆರೆಯಲ್ಲಿ ಮಿಂಚಲಿರುವ 'ಪುಟ್ಟಕ್ಕನ ಮಗಳು' ಸಂಜಾನ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಉಮಾಶ್ರೀ ಪುತ್ರಿಯಾಗಿ ನಟಿ ಸಂಜನಾ ಬುರ್ಲಿ ಅಭಿನಯಿಸುತ್ತಿದ್ದಾರೆ. ವಿಭಿನ್ನ ಪಾತ್ರದಲ್ಲಿ ಸಂಜನಾ ಕಾಣಿಸಿಕೊಳ್ಳುತ್ತಿದ್ದು, ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದು ಹೇಗೆ, ವಿದ್ಯಾಭ್ಯಾಸ ಮ್ಯಾನೇಜ್ ಮಾಡುತ್ತಿರುವುದು ಹೇಗೆ? ಪಾತ್ರ ಏನು ಡಿಮ್ಯಾಂಡ್ ಮಾಡುತ್ತದೆ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
Recommended Video

ಕನಸುಗಳ ಬೆನ್ನೇರಿ ಹೊರಟ ಅನೇಕರು ತಮ್ಮ ಕನಸುಗಳನ್ನು ನನಸು ಮಾಡಲು ಶ್ರಮ ಮಡುತ್ತಾರೆ. ತಾವು ಕಂಡಿರುವಂತಹ ಕನಸುಗಳನ್ನು ನನಸು ಮಾಡುವುದಕ್ಕಾಗಿ ಹರಸಾಹಸ ಮಾಡುತ್ತಾರೆ. ಶತಾಯಗತಾಯ ಪ್ರಯತ್ನ ಪಟ್ಟು ಕನಸು ನನಸು ಮಾಡಿದಾಗ ದೊರಕುವ ಆನಂದವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಸಂಜನಾ ಸಹ ಅದಕ್ಕೆ ಹೊರತಾಗಿಲ್ಲ! ಯಾಕೆಂದರೆ ಬಾಲ್ಯದಿಂದಲೂ ಈಕೆಗೆ ನಟನಾ ಲೋಕದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಮಹಾದಾಸೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಲಗ್ನಪತ್ರಿಕೆ ಧಾರಾವಾಹಿಯಲ್ಲಿ ನಾಯಕಿ ಮಯೂರಿ ಆಗಿ ನಟಿಸುವ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿರುವ ಸಂಜನಾ ಬುರ್ಲಿ ಇಂಜಿನಿಯರಿಂಗ್ ಪದವೀಧರೆಯೂ ಹೌದು! ಮಹಾನಗರಿಯ ಅಂಬೇಡ್ಕರ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ಸಂಜನಾಗೆ ಬಾಲ್ಯದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳತ್ತ ವಿಶೇಷ ಒಲವು.

ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸ್ನೇಹಾ
ಎಳವೆಯಿಂದಲೂ ತಾನೊಬ್ಬ ನಟಿಯಾಗಬೇಕು, ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಕನಸು ಕಂಡಿದ್ದ ಸಂಜನಾ ಕಲೆಯ ವಿವಿಧ ಪ್ರಕಾರಗಳಾದ ನೃತ್ಯ, ನಾಟಕ, ಏಕಪಾತ್ರಾಭಿನಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದರು. ತದ ನಂತರ ನಟನಾ ಕ್ಷೇತದಲ್ಲಿ ಮುಂದುವರಿಯುವ ನಿರ್ಧಾರ ಮಾಡಿದ್ದ ಸಂಜನಾ ತಮ್ಮ ನಟನೆಯ ಕನಸಿಗೆ ಬುನಾದಿ ಹಾಕಿಕೊಳ್ಳಲು ರಂಗತಂಡದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಖಡಕ್ ಸ್ನೇಹಾ ಪಾತ್ರ ಮಾಡುತ್ತಿರುವ ನಟಿ ಸಂಜನಾ ಬುರ್ಲಿ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ತಯಾರಾಗಿದ್ದಾರೆ. ಸಂಜನಾ ನಟನೆಯ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ಆದಷ್ಟು ಬೇಗ ಸಿನಿಮಾ ರಿಲೀಸ್ ಆಗಲಿದೆ.

'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದ ಟ್ರೈಲರ್ ಬಿಡುಗಡೆ
'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಪ್ರೀತಿ, ಸಸ್ಪೆನ್ಸ್, ಆಕ್ಷನ್, ಫುಲ್ ಪ್ಯಾಕೇಜ್ ಇರುವ ಸಿನಿಮಾ ಇದಾಗಿದೆ. ಮೈಸೂರು ಮೂಲದವರಾದ ಅಮೇರಿಕನ್ ಪ್ರಜೆ ಯಶಸ್ವಿ ಶಂಕರ್ ನಿರ್ಮಾಣ ಮಾಡಿರುವ ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್ ಸಿನಿಮಾದ ಮೂಲಕ ರಾಘವ್ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಚೊಚ್ಚಿಲ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದ್ದಾರೆ.

ಧಾರಾವಾಹಿ ಜೊತೆಗೆ ಸಿನಿಮಾ ಕ್ಷೇತ್ರದಲ್ಲಿಯೂ ಬ್ಯುಸಿ
ಎಂ ಎನ್.ಎಂ.ಶ್ರೀಕಾಂತ್ ಚೊಚ್ಚಲ ನಿರ್ದೇಶನದ ಚಿತ್ರ ಇದು. ಈ ಚಿತ್ರದಲ್ಲಿ ಸಂಜನಾ ಬುರ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರದ್ದು ಆರ್ಕಿಟೆಕ್ಟ್ ವಿದ್ಯಾರ್ಥಿನಿಯ ಪಾತ್ರ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಯಮುನಾ ಶ್ರೀನಿಧಿ, ಗೋಪಿನಾಥ್ ಭಟ್ ಮುಂತಾದವರು ಕೂಡ ಈ ಚಿತ್ರದಲ್ಲಿ ಕಾಣಸಿಗುತ್ತಾರೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜೊತೆಗೆ ಸಿನಿಮಾ ಕ್ಷೇತ್ರದಲ್ಲಿಯೂ ಬ್ಯುಸಿಯಾಗಿರುವ ಸಂಜನಾ ಅವರು ಕನ್ನಡ ಮತ್ತು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಅವರು 'ವೀಕೆಂಡ್' ಹೆಸರಿನ ಸಿನಿಮಾದಲ್ಲಿ ನಾಯಕಿಯಾಗಿದ್ರು.

ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ ಸಂಜನಾ
ಸಂಜನಾ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದು, ಏಕಕಾಲಕ್ಕೆ ಶಿಕ್ಷಣ, ಸಿನಿಮಾ ಕಡೆಯೂ ಗಮನ ನೀಡುತ್ತಿದ್ದಾರೆ.
ತಮಿಳಿನಲ್ಲಿ ಈಶ್ವರ್ ಕೊಟ್ಟಾವೆ ನಿರ್ದೇಶನದ ಮಹಿಳಾ ಪ್ರಧಾನ ಹೊಸ ಸಿನಿಮಾದಲ್ಲಿ ಸಂಜನಾ ನಟಿಸಿದ್ದಾರೆ. ಇಲ್ಲಿ ಸಂಜನಾ ಬುರ್ಲಿ ಬ್ಲ್ಯಾಕ್ ಮೆಜಿಷಿಯನ್ ಪಾತ್ರದಲ್ಲಿ ನಟಿಸಿದ್ದು, ಅದರಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಶೇಡ್ ಇವೆಯಂತೆ. ಅರವಿಂದ್ ಕೌಶಿಕ್ ನಿರ್ದೇಶನದ 'ಸ್ಟೀಲ್ ಪಾತ್ರೆ ಸಾಮಾನು' ಚಿತ್ರದಲ್ಲೂ, ನಿಸಾರ್ ಅಹಮ್ಮದ್ ನಿರ್ದೇಶನದ 'ಸ್ನೇಹರ್ಷಿ' ಎಂಬ ಚಿತ್ರದಲ್ಲಿ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಸಂಜನಾ ಬುರ್ಲಿ ನಟಿಸಿದ್ದಾರೆ.


Click it and Unblock the Notifications











