ಪುಟ್ಟಕ್ಕನ ಮನೆಗೆ ಕುಡಿದು ಬಂದ ಮುರಳಿಗೆ ಶಾಕ್; ಅಮ್ಮ ಅರೆಸ್ಟ್.. ಸಹನಾ ಮೇಲೆ ಗೂಬೆ ಕೂರಿಸಿದ ಪತಿ
ಮಗಳು ಸಹನಾ ತೆಗೆದುಕೊಂಡಿರುವ ನಿರ್ಧಾರ ಪುಟ್ಟಕ್ಕನ ಮನಸ್ಸಿಗೆ ಬಹಳ ನೋವನ್ನು ತಂದುಕೊಟ್ಟಿತು. ಹಾಗೆಯೇ ತನ್ನ ಗಂಡ ಕಟ್ಟಿರುವ ತಾಳಿ ಬಿಚ್ಚಿ ಕೊಡುತ್ತಾಳೆ. ತಾಳಿಗೆ ಇರುವ ಬೆಲೆ ಇಷ್ಟೇನಾ ಎಂದು ಬಹಳ ಬೇಸರದಿಂದ ಇರುತ್ತಾಳೆ. ಸಹನಾ ಮಾಡಿದ ಕೆಲಸಕ್ಕೆ ಪುಟ್ಟಕ್ಕ, ಸಹನಾ ಬಳಿ ಮಾತು ಕೂಡ ಆಡುತ್ತಿಲ್ಲಾ. ಎಷ್ಟೇ ಕಷ್ಟ ಬಂದರು ಸಹನಾ ತಾಳಿ ತೆಗೆಯಬಾರದಾಗಿತ್ತು ಎನ್ನುವುದು ಪುಟ್ಟಕ್ಕನ ವಾದ. ಆದರೂ ಏನು ಮಾತನಾಡದೆ ಸಹನಾ ಮಾತ್ರ ಸುಮ್ಮನೆ ಇರುತ್ತಾಳೆ.
ಕುಡಿದ ಮತ್ತಿನಲ್ಲಿದ್ದ ಗೋಪಾಲ ಮನೆಯ ಹೊರಗೆ ಜಗುಲಿಯಲ್ಲಿ ಮಲಗಿರುತ್ತಾನೆ. ಅಷ್ಟರಲ್ಲಿ ಮುರಳಿ ಕುಡಿದ ನಶೆಯಲ್ಲಿ ಸಹನಾ ಮನೆಗೆ ಬರುತ್ತಾನೆ. ಪುಟ್ಟಕ್ಕನನ್ನು ಜೋರಾಗಿಯೇ ಕರೆಯುವ ಮುರಳಿ ಮನೆಯಿಂದ ಹೊರಗೆ ಬರುವಂತೆ ಹೇಳುತ್ತಾನೆ. ಆ ಕೂಡಲೇ ಪುಟ್ಟಕ್ಕ ಹಾಗೂ ಆಕೆಯ ಮಕ್ಕಳು ಮನೆಯ ಹೊರಗೆ ಬರುತ್ತಾರೆ.

ಆಗ ತನ್ನ ಪತ್ನಿಗೆ "ಸಹನಾ ಅವರೇ, ನಾನು ನಿಮ್ಮ ಮೇಲೆ ಬಹಳ ಪ್ರೀತಿ ಇಟ್ಟುಕೊಂಡು ಇದ್ದೆ. ಬಹಳ ಹಚ್ಚಿಕೊಂಡು ಇದ್ದೆ. ಆದರೆ, ನೀವು ಮಾಡಿದ್ದೇನು? ನಾನು ಕಟ್ಟಿರುವ ತಾಳಿಯನ್ನು ಎಲ್ಲರೆದುರು ಕೊಟ್ಟಿರಿ. ನೀವು ತಾಳಿಗೆ ಕೊಡುವ ಮರ್ಯಾದೆ ಇದೇನಾ? ನನಗೆ ಎಷ್ಟು ಬೇಸರ ಆಯಿತು" ಎಂದಾಗ, ಸಹನಾ ಹೇಳುತ್ತಾರೆ. "ನನ್ನ ಮೇಲೆ ನಿಮಗೆ ಅಷ್ಟು ಪ್ರೀತಿ ಇದ್ದರೆ, ನೀವು ನನ್ನ ಮಾತನ್ನು ಸ್ವಲ್ಪವಾದರೂ ನಂಬುತ್ತಿದ್ರಿ. ಆದರೆ, ನಿಮಗೆ ನನ್ನ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲ. ನನಗೆ ಯಾವತ್ತೂ ನಿಮ್ಮ ಮನೆಯವರು ಊಟದಲ್ಲಿ ವಿಷ ಬೆರೆಸಿ ಕೊಟ್ಟರೋ ಅವತ್ತೇ ನಾನು ಸತ್ತು ಹೋದೆ" ಎಂದು ಖಡಕ್ ಆಗಿ ಹೇಳುತ್ತಾಳೆ.
ಮುರಳಿ ತಾಯಿ ಅರೆಸ್ಟ್
ಅಷ್ಟರಲ್ಲಿ ಮುರಳಿಗೆ ಕರೆ ಬರುತ್ತದೆ. ನಿನ್ನ ತಾಯಿಯನ್ನು ಪೊಲೀಸರು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ. ಬೇಗ ಬಾ ಎಂದು ಭಾವ ಫೋನ್ ಮಾಡುತ್ತಾರೆ. ಅಷ್ಟರಲ್ಲಿ ಮುರಳಿಗೆ ಶಾಕ್ ಆಗುತ್ತದೆ. ಮುರಳಿ, ಸಹನಾ ಬಳಿ ಬಂದು ಹೇಳುತ್ತಾನೆ. "ನನ್ನ ತಾಯಿ ಮೇಲೆ ಕಂಪ್ಲೇಂಟ್ ಕೊಟ್ಟು ಅರೆಸ್ಟ್ ಮಾಡಿದಿರಿ ಅಲ್ವಾ? ಇದೆಲ್ಲ ಸರಿ ಅಲ್ಲ ಸಹನಾ ಅವರೇ" ಎಂದು ಹೇಳಿದಾಗ. ಪುಟ್ಟಕ್ಕಗೆ ಮತ್ತಷ್ಟು ಭಯ ಆಗುತ್ತದೆ. "ಅಯ್ಯೋ ಸಹನಾ ನಿಮ್ಮ ತಾಯಿ ಮೇಲೆ ಕಂಪ್ಲೇಂಟ್ ಕೊಡಲು ಸಾಧ್ಯವೇ ಇಲ್ಲ" ಎಂದು ಪುಟ್ಟಕ್ಕ ಹೇಳಿದರೂ ನಂಬದಾಗಿ ಹೋಗುತ್ತಾನೆ.
ಬಂಗಾರಮ್ಮಗೆ ಮಗಳದ್ದೇ ಚಿಂತೆ
ಬಂಗಾರಮ್ಮಗೆ ತನ್ನ ಮಗಳು ವಸುವಿನದ್ದೇ ಚಿಂತೆ. ನಂಜಮ್ಮ ಏನಾದರು ವಸುಗೆ ತೊಂದರೆ ಮಾಡಿಬಿಟ್ಟರೆ ಎನ್ನುವ ಭಯದಲ್ಲಿ ಇರುತ್ತಾಳೆ. ವಸು ಗರ್ಭಿಣಿ ಆಗಿರುವ ವೇಳೆ ನಂಜಮ್ಮ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿರುವುದನ್ನು ನೋಡಿದ ಬಂಗಾರಮ್ಮಗೆ ಬಹಳ ನೋವಾಗುತ್ತಿರುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ರಾಧಾ ನೀವೇನು ಭಯ ಪಡಬೇಡಿ ಅತ್ತೆ, ನಾನು ವಸುನ ನೋಡಿಕೊಳ್ಳಲು ಬಂಗಾರಮ್ಮ ಅವರ ಮನೆಗೆ ಹೋಗುತ್ತೇನೆ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ರಾಧಾ ಮಾತಿಗೆ ಬೆಚ್ಚಿ ಬಿದ್ದ ಸ್ನೇಹಾ
ಇದನ್ನೆಲ್ಲ ಕೇಳಿದ ಸ್ನೇಹಾಗೆ ಮಾತ್ರ ಏನು ಮಾಡಬೇಕು ಎಂದು ತಿಳಿಯದೇ ಕೊಂಚ ಭಯ ಪಟ್ಟುಕೊಂಡಿರುತ್ತಾಳೆ. ಯಾಕೆಂದರೆ, ಮೊದಲೇ ಸ್ನೇಹಾ ಜೊತೆ ಸವಾಲು ಬೇರೆ ಹಾಕಿದ ರಾಧಾ, ವಸು ಮನೆಗೆ ಹೋಗಿ ಇನ್ನೇನು ಕಿತಾಪತಿ ಮಾಡುತ್ತಾಳೆ ಅನ್ನುವ ಆತಂಕ ಈಕೆಗೆ.


Click it and Unblock the Notifications











