ಒಂದು ಹೆಜ್ಜೆ ಮುಂದಿಟ್ಟು ಧೈರ್ಯ ಮಾಡಿಯೇಬಿಟ್ಟ ಕಂಠಿ: ಪೂರ್ವಿಗೆ ಗೊತ್ತಾಯ್ತು ಸತ್ಯ !
ಬಂಗಾರಮ್ಮನ ಮಗ ಕಂಠಿಯ ಸ್ಥಿತಿ ಬಾಲ ಸುಟ್ಟ ಬೆಕ್ಕಿನಂತೆ ಆಗಿತ್ತು. ಯಾರಿಗೂ ಏನನ್ನು ಹೇಳುವುದಕ್ಕೂ ಆಗದೆ, ಮನಸ್ಸೊಳಗೆ ಇಟ್ಟುಕೊಂಡು ಸಾಕಷ್ಟು ವ್ಯಥೆ ಪಡುತ್ತಿದ್ದ. ಕಂಠಿಯೊಳಗಿನ ವೇದನೆ ಎಂಥದ್ದು ಎಂಬುದು ಗೊತ್ತಿದ್ದು ವಸುಗೆ ಮಾತ್ರ. ಹಾಗಂತ ವಸು ಯಾರ ಬಳಿಯೂ ಆ ಕಠಿಣ ಸತ್ಯವನ್ನು ಹೇಳುವುದಕ್ಕೆ ಆಗುತ್ತಿರಲಿಲ್ಲ. ಅದಕ್ಕೆಂದೇ ಅಣ್ಣಯ್ಯನಿಗೆ ತಿಳಿ ಹೇಳುತ್ತಿದ್ದಳು. ಆದಷ್ಟು ಬೇಗ ಪ್ರೀತಿ ಹೇಳಿಕೊಳ್ಳುವಂತೆ ಒತ್ತಾಯಿಸುತ್ತಿದ್ದಳು.
ಆದರೆ ಕಂಠಿ ಸ್ನೇಹಾ ಬಳಿ ಇನ್ನು ತನ್ನ ಪ್ರೀತಿಯನ್ನು ಹೇಳಿಕೊಳ್ಳುವಷ್ಟು ಧೈರ್ಯ ಮಾಡಿಲ್ಲ. ಆದರೆ ಪೂರ್ವಿ ಬಳಿ ಸತ್ಯ ಹೇಳುವುದಕ್ಕೆ ಕಡೆಗೂ ಧೈರ್ಯ ಮಾಡಿದ್ದಾನೆ. ನಂಗೆ ಈ ಮದುವೆ ಇಷ್ಟ ಇಲ್ಲ ಎಂಬ ಪದವನ್ನು ಸಲೀಸಾಗಿ ಹೇಳಿ ಬಿಟ್ಟಿದ್ದಾನೆ. ಇನ್ನು ಮುಂದೆ ಎದುರಾಗುವ ಸಮಸ್ಯೆಯನ್ನು ಕಂಠಿ ಅದೇಗೆ ಬಗೆಹರಿಸಿಕೊಳ್ಳುತ್ತಾನೋ ಏನೋ..?

ಕಂಠಿ ಜೊತೆ ಬಂದಿರೋದು ಫುಲ್ ಖುಷಿ
ಪೂರ್ವಿ ಮನೆಗೆ ಬಂದರೆ ಆಗುತ್ತಿರಲಿಲ್ಲ. ಕಂಠಿ ಕಿರಿಕಿರಿ ಮಾಡಿಕೊಳ್ಳುತ್ತಿದ್ದ. ಎಲ್ಲಾದರೂ ಹೊರಗೆ ಹೋದರು, ಕಂಠಿ ಅಷ್ಟು ಮಾತನಾಡುತ್ತಿರಲಿಲ್ಲ. ಪೂರ್ವಿಯೇ ಮಾತನಾಡಿಸಿದಾಗಲೂ ಕಂಠಿಯ ರೆಸ್ಪಾನ್ಸ್ ಇದ್ದದ್ದು ಅಷ್ಟಕ್ಕೆ ಅಷ್ಟೇ. ಆದರೆ ಇದೀಗ ಪೂರ್ವಿಯನ್ನು ಕಂಠಿಯೇ ಹೊರಗೆ ಕರೆದುಕೊಂಡು ಬಂದಿರುವುದು ಆಕಾಶಕ್ಕೆ ಏಣಿ ಹಾಕಿದಂತಾಗಿದೆ ಪೂರ್ವಿಯ ಖುಷಿ. ಅದರಲ್ಲೂ ಕಂಠಿ, ಪೂರ್ವಿಯನ್ನು ಅವಳ ಮನೆಗೆ ಹೋಗಿ ಕರೆದುಕೊಂಡು ಬಂದಿದ್ದಾನೆ. ಪೂರ್ವಿಯ ಖುಷಿಗೆ ಮತ್ತೊಂದು ಕಾರಣ, ಯಾರು ಇಲ್ಲದ, ಪ್ರಶಾಂತವಾದ ಜಾಗಕ್ಕೆ ಹೋಗಿರುವುದು.

ಬಂಗಾರಮ್ಮನ ಬಳಿ ನಾಚಿ ನೀರಾದ ಪೂರ್ವಿ
ಕಂಠಿ ಈ ಬಾರಿ ಸುಳ್ಳೇಳಿ ಹೋಗಿಲ್ಲ. ಬದಲಿಗೆ ಪೂರ್ವಿ ಮನೆಗೆ ಹೋಗುತ್ತೀನಿ ಅಂತ ಹೇಳಿಯೇ ಹೋಗಿದ್ದಾನೆ. ನಾನು ನಿನ್ನತ್ರ ಮಾತಾಡಬೇಕು ಪೂರ್ವಿ ಅಂತ ಗಟ್ಟಿ ಮನಸ್ಸು ಮಾಡಿ ಮಾತು ಶುರು ಮಾಡಲು ಹೋದಾಗಲೇ, ಪೂರ್ವಿಯ ಮೊಬೈಲ್‌ಗೆ ಬಂಗಾರಮ್ಮನ ಕರೆ ಬಂದಿದೆ. ಮಾತನ್ನು ಅಲ್ಲಿಗೆ ನಿಲ್ಲಿಸಿದ ಪೂರ್ವಿ, ಬಂಗಾರಮ್ಮನ ಜೊತೆ ಮಾತನಾಡಿದ್ದಾಳೆ. ಹೊರಗೆ ಬಂದಿದ್ದೀವಿ ಅತ್ತೆ. ತುಂಬಾ ಇಷ್ಟವಾಗುವಂತ ಜಾಗಕ್ಕೆ ಕರೆದುಕೊಂಡು ಬಂದಿದ್ದಾನೆ. ಆಮೇಲೆ ಮಾಡ್ತೀನಿ ಅತ್ತೆ ಕರೆ ಕಟ್ ಮಾಡಿದ್ದಾಳೆ.

ಕಂಠಿ ಮಾತು ಕೇಳಿ ಪೂರ್ವಿ ಶಾಕ್
ಪೂರ್ವಿ ತುಂಬಾನೇ ಖುಷಿಯಲ್ಲಿದ್ದಳು. ಮಾವ ಏನನ್ನೋ ಪ್ರೀತಿಯ ವಿಚಾರವನ್ನೇ ಮಾತನಾಡುವುದಕ್ಕೆ ಬಂದಿದ್ದಾನೆ ಎಂದು ಕೊಂಡಿದ್ದಳು. ಅದಕ್ಕೆ ನೀವೂ ನಂಗೆ ಪ್ರಪೋಸ್ ಮಾಡಿಯೇ ಇಲ್ಲ. ಈಗ ಮಾಡಿ ಎಂದಾಗ ಕಂಠಿಯ ಒಂದೇ ಒಂದು ಮಾತು ಪೂರ್ವಿಯನ್ನು ನಿಂತಲ್ಲಿಯೇ ನಡುಗಿಸಿದೆ. ನೋಡು ಪೂರ್ವಿ ನಂಗೆ ಈ ಮದುವೆ ಇಷ್ಟ ಇಲ್ಲ. ನನ್ನ ಮಾತೇ ಕೇಳದೆ ನೀನು ಅವ್ವ ಮುಂದುವರೆದು ಬಿಟ್ರಿ ಎಂದು ಧೈರ್ಯವಾಗಿ ಮನಸ್ಸಿನ ಸಂಕಟವನ್ನು ಹೇಳಿಯೇ ಬಿಟ್ಟಿದ್ದಾನೆ.

ಪೂರ್ವಿಯ ಮುಂದಿನ ನಡೆ ಏನು?
ಪೂರ್ವಿಗೆ ಕಂಠಿಯ ಬಂಡವಾಳ ಗೊತ್ತು. ಅವ್ವನ ಮುಂದೆ ಮಾತನಾಡುವುದಕ್ಕೆ ಸಾಧ್ಯವೇ ಇಲ್ಲ ಅಂತ. ಹಾಗೇ ಬಂಗಾರಮ್ಮನ ಮನೆಗೆ ಸೊಸೆಯಾಗಿ ಹೋಗಬೇಕೆಂಬ ಹಠ ಕೂಡ ಜೊತೆಯಲ್ಲಿದೆ. ಹೀಗಾಗಿ ಕಂಠಿಯ ಮಾತನ್ನು ಮದುವೆ ಮುರಿಯುವ ಹಂತದ ತನಕ ತೆಗೆದುಕೊಂಡು ಹೋಗಲ್ಲ ಅನಿಸುತ್ತದೆ. ಕಂಠಿಯ ಭಾವನೆಗಳನ್ನು ಇನ್ನಷ್ಟು ಕಾಡಲುಬಹುದು. ಸದ್ಯಕ್ಕೆ ಆಯ್ತು ಎಂದು ಹೊರಟವಳು, ಮನೆಯವರಿಗೆಲ್ಲಾ ಬೇಗ ಮದುವೆ ಮಾಡಿ ಎಂದೇ ಹೇಳಬಹುದು. ಯಾಕೆಂದ್ರೆ ಮೊದಲೇ ಸ್ನೇಹಾಳನ್ನು ಕಂಡರೆ ಪೂರ್ವಿ ಉರಿದು ಬೀಳುತ್ತಾಳೆ. ಅದೇ ಸ್ನೇಹಾಳ ಜೊತೆಗೆ ಕಂಠಿ ಬಹಳ ಆತ್ಮೀಯವಾಗಿದ್ದಾನೆ. ಈ ಎಲ್ಲಾ ಕಾರಣದಿಂದ ಪೂರ್ವಿ ಮದುವೆಯಿಂದ ಹಿಂದೆ ಸರಿಯುವುದು ಅನುಮಾನವೇ.


Click it and Unblock the Notifications











