ಹೊಸ ಕಲಾವಿದರಿಗೆ ವೇದಿಕೆ ಸಿದ್ಧ : ನಟಿಸಲು ಬಯಸುವವರು ಈ ಪೋಸ್ಟ್ ನೋಡಿ.
ಇತ್ತೀಚೆಗೆ ಜೀ ಕನ್ನಡ ವಾಹಿನಿಯೂ ಹೊಸ ಹೊಸ ಕೆಲಸಗಳಿಗೆ ಕೈ ಹಾಕಿದೆ. ಸದಾ ಒಂದಲ್ಲಾ ಒಂದು ಹೊಸ ರಿಯಾಲಿಟಿ ಶೋಗಳ ಮೂಲಕ ವೀಕ್ಷಕರನ್ನು ರಂಜಿಸುವ ಜೀ, ಈಗ ಮತ್ತೆ ಹೊಸತೇನನ್ನೂ ಮಾಡಲು ತಯಾರಿ ನಡೆಸಿದಂತಿದೆ. ರಿಯಾಲಿಟಿ ಶೋ, ಧಾರಾವಾಹಿಗಳ ಮೂಲಕ ಹೊಸ ಹೊಸ ಪ್ರಯತ್ನಗಳಿಗೆ ಕೈ ಹಾಕುವ ಜೀ ಕನ್ನಡ ವಾಹಿನಿ ಆಗಾಗ ಆಡಿಷನ್‌ಗಳಿಗೆ ವೇದಿಕೆಯನ್ನು ಸಜ್ಜು ಮಾಡುತ್ತಲೇ ಇರುತ್ತದೆ. ಕಳೆದ ತಿಂಗಳು ಹೊಸ ಕಥೆಗಾಗಿ ಆಡಿಷನ್ ಕರೆದಿದ್ದ ಜೀ ವಾಹಿನಿ, ಇದೀಗ ಹೊಸ ಕಲಾವಿದರನ್ನು ಎದುರು ನೋಡುತ್ತಿದೆ. ನಟಿಸಲು ಬಯಸುವವರಿಗೆ ಇದು ಸುವರ್ಣಾವಕಾಶ ಎಂದರೆ ತಪ್ಪಾಗಲಾರದು.
ಹೊಸ ಪೋಸ್ಟರ್ ಹಂಚಿಕೊಂಡ ನಿರ್ದೇಶಕ
ಕಳೆದ ತಿಂಗಳಷ್ಟೇ ಜೀ ವಾಹಿನಿಯು ಕನ್ನಡ ಬರಹಗಾರರಿಗೆ ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿತ್ತು. ಮೊಟ್ಟ ಮೊದಲ ಬಾರಿಗೆ ಜೀ ಕನ್ನಡ ವಾಹಿನಿ ಕಥೆ ಮತ್ತು ಸಂಭಾಷಣೆ ಬರೆಯಲು ಸಾಧ್ಯವಿರುವವರಿಗೆ ಜೀ ಕನ್ನಡ ಲೇಖಕರಿಗೆ ಆಡಿಷನ್ ಅನ್ನು ಏರ್ಪಡಿಸಲಾಗಿತ್ತು. ಜನವರಿ 11ರಂದು ದಾವಣಗೆರೆ, ಶಿವಮೊಗ್ಗ ಹಾಗೂ ಮಂಗಳೂರಿನಲ್ಲಿ ಆಡಿಷನ್ ನಡೆಸಲಾಗಿತ್ತು. ಬರಹಗಾರರಿಗೂ ಆಡಿಷನ್ ಕರೆದಿದ್ದಕ್ಕೆ ಬಹಳ ಖುಷಿ ಪಟ್ಟಿದ್ದರು. ಇದೀಗ ಮತ್ತೆ ಜೀ ವಾಹಿನಿಯು ನಟ-ನಟಿಯರಾಗಲು ಬಯಸುವವರಿಗೆ ಚಾನ್ಸ್ ಕೊಡುತ್ತಿದೆ. ಹೌದು, ಹೊಸ ಪೋಸ್ಟರ್ ಒಂದು ರಿಲೀಸ್ ಆಗಿದ್ದು, ಜೀ ಕನ್ನಡ ವಾಹಿನಿಯ ಜೊತೆ ಸೇರಿ ಖ್ಯಾತ ನಿರ್ದೇಶಕ ಆರೂರು ಜಗದೀಶ್ ಅವರು ಕಲಾವಿದರಾಗಲು ಬಯಸುವವರಿಗೆ ಸುವರ್ಣಾವಕಾಶವನ್ನು ಕಲ್ಪಿಸಿದ್ದಾರೆ.

ಹೊಸ ಧಾರಾವಾಹಿಗೆ ಕಲಾವಿದರ ಅಗತ್ಯ
ಪುಟ್ಟಕ್ಕನ ಮಕ್ಕಳು, ಜೊತೆ ಜೊತೆಯಲಿ, ಗುಪ್ತಗಾಮಿನಿ, ಅರುಂಧತಿ, ಶುಭ ವಿವಾಹ, ಜೋಡಿ ಹಕ್ಕಿ, ಭೂಮಿಗೆ ಬಂದ ಭಗವಂತ, ಅಶ್ವಿನಿ ನಕ್ಷತ್ರ ದಂತಹ ಹೊಸ ಹೊಸ ಕಥೆಯುಳ್ಳ ಸೂಪರ್ ಹಿಟ್ ಧಾರಾವಾಹಿಗಳನ್ನು ಆರೂರು ಜಗದೀಶ್ ಅವರು ನಿರ್ದೇಶನ ಮಾಡಿದ್ದಾರೆ. ಇನ್ನು ಪುಟ್ಟಕ್ಕನ ಮಕ್ಕಳ ಧಾರಾವಾಹಿ ಪ್ರಸಾರವಾಗುತ್ತಲೇ ಇದೆ. ಈ ನಡುವೆಯೇ ಕಲಾವಿದರಾಗಲು ಬಯಸುವವರಿಗೆ ಹೊಸ ವೇದಿಕೆಯನ್ನು ಸೃಷ್ಟಿ ಮಾಡಿದ್ದಾರೆ. ನಟ, ನಟಿ, ಪೋಷಕ ಪಾತ್ರಗಳಲ್ಲಿ ನಟಿಸಲು ಬಯಸುವವರಿಗೆ ಈ ಆಡಿಷನ್ ನಿಂದ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಅನುಕೂಲವಾಗಲಿದೆ.
ಕಲಾವಿದರಗೆ ಯಾವ ಅರ್ಹತೆಗಳು ಬೇಕು ಗೊತ್ತೇ..?
ನಿರ್ದೇಶಕ ಆರೂರು ಜಗದೀಶ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪೋಸ್ಟರ್ ಒಂದನ್ನು ಶೇರ್ ಮಾಡಿದ್ದು, ಇದರಲ್ಲಿ ಮಾಹಿತಿಯನ್ನು ನೀಡಲಾಗಿದೆ. ಹೊಸ ಧಾರಾವಾಹಿಗಾಗಿ ಹೊಸ ಕಲಾವಿದರ ಹುಡುಕಾಟದಲ್ಲಿರುವ ಜೀ ವಾಹಿನಿ ನಾಯಕ-ನಾಯಕಿ ಮತ್ತು ಪೋಷಕ ಪಾತ್ರಕ್ಕೆ ನಟರು ಬೇಕಾಗಿದ್ದಾರೆ ಎಂದು ತಿಳಿಸಿದೆ. ಆಡಿಷನ್ ಗೆ ಬರಲು ಬಯಸುವವರಿಗೆ ಶುದ್ಧ ಕನ್ನಡ ಮಾತನಾಡಲು ಬರಬೇಕು. ಆಡಿಷನ್‌ನಲ್ಲಿ ಭಾಗವಹಿಸಲು ಹೊಸ ಮತ್ತು ಅನುಭವಿ ಕಲಾವಿದರಿಗೆ ಅವಕಾಶವಿದ್ದು, ರಂಗಭೂಮಿಯಲ್ಲಿ ಪಳಗಿರುವವರಿಗೆ ಮೊದಲ ಆದ್ಯತೆ ಎಂದು ತಿಳಿಸಲಾಗಿದೆ.
ನಟಿಸಲು ಬಯಸುವವರು ಏನು ಮಾಡಬೇಕು..?
ಇನ್ನು ನಾಯಕಿ ಪಾತ್ರಕ್ಕೆ ಆಡಿಷನ್ ಕೊಡಲು ಬಯಸುವವರ ವಯಸ್ಸು 18 ರಿಂದ 24 ವರ್ಷ ಆಗಿರಬೇಕು. ಇನ್ನು ನಾಯಕನಿಗೆ 18 ರಿಂದ 30 ವರ್ಷ ಇರಬೇಕು. ಪೋಷಕ ಪಾತ್ರಗಳಿಗಾಗಿ 16 ರಿಂದ 60 ವರ್ಷ ವಯಸ್ಸಿನವರಾಗಿರಬೇಕು ಎಂದು ಹೇಳಲಾಗಿದೆ. ಅಲ್ಲದೇ, ನೋಡಲು ಸುಂದರವಾಗಿರಬೇಕು, ಚಂದದ ಮೈಕಟ್ಟು ಹೊಂದಿರಬೇಕು. ಅರ್ಜಿ ಸಲ್ಲಿಸಲು ಇದೇ ತಿಂಗಳು 28 ಕೊನೆಯ ದಿನಾಂಕ ಎಂದು ತಿಳಿಸಲಾಗಿದ್ದು, ಅರ್ಜಿಯನ್ನು ಸಂಪೂರ್ಣ ಸ್ವವಿವರ ಸಲ್ಲಿಸಲು ಹೇಳಲಾಗಿದೆ.


Click it and Unblock the Notifications











