Puttakkana Makkalu:'ಪುಟ್ಟಕ್ಕನ ಮಕ್ಕಳು' ಸೆಟ್‌ನಲ್ಲಿ ಸೀಮಂತ ಕಾರ್ಯ.. ಆ ತುಂಬು ಗರ್ಭಿಣಿ ಯಾರು ಗೊತ್ತಾ..?
ಜೀ ಕನ್ನಡದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಮೂಡಿ ಬರುತ್ತಾ ಇದೆ. ಇಲ್ಲಿಯವರೆಗೂ ಮೊದಲ ಸ್ಥಾನವನ್ನೇ ಕಾಪಾಡಿಕೊಂಡು ಬಂದಿದೆ. ಆಗಾಗ ಕೊಂಚ ಏರುಪೇರಾಗುತ್ತಾ ಇರುತ್ತದೆ. ಆದರೆ, ಯಾವತ್ತಿಗೂ ಕುಸಿದಿಲ್ಲ. ಯಾಕೆಂದರೆ ಧಾರಾವಾಹಿಯ ಕಥೆ ಎಲ್ಲರನ್ನೂ ಆ ಮಟ್ಟಿಗೆ ಕಾಡುತ್ತಿದೆ. ನಮ್ಮದೇ ಮನೆಯ ಕಥೆ ಎಂಬಂತೆ ಪ್ರತಿ ಎಪಿಸೋಡ್‌ಗಳು ಇರುತ್ತವೆ.
ಪುಟ್ಟಕ್ಕನ ಮಕ್ಕಳು ಪ್ರತಿಯೊಬ್ಬರಿಗೂ ಮಾದರಿಯೇ ಸರಿ. ಸೋತಾಗ, ಗೆದ್ದಾಗ ಸರಿದಾರಿಗೆ ತರುವ ತಾಯಿಯಾಗಿಯೇ ಪುಟ್ಟಕ್ಕ ಕಾಣುತ್ತಾಳೆ. ಬರೀ ಧಾರಾವಾಹಿಯಲ್ಲಿ ತನ್ನ ಮಕ್ಕಳಿಗೆ ಬುದ್ದಿ ಹೇಳಿದರೂ, ಕೂತು ನೋಡುವವರಿಗೆ ಆ ಬುದ್ದಿ ಮಾತು ಅನ್ವಯಿಸುತ್ತದೆ. ಅಷ್ಟು ಆಳವಾಗಿರುತ್ತದೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಒಂದೊಂದು ಡೈಲಾಗ್.

ಎಷ್ಟೋ ಹೆಣ್ಣು ಮಕ್ಕಳಿಗೆ ಸ್ಪೂರ್ತಿ 'ಪುಟ್ಟಕ್ಕ'
ಹೆಣ್ಣು ಮಕ್ಕಳು ಇತ್ತೀಚೆಗೆ ಬದಲಾಗಿ ಬಹಳ ವರ್ಷಗಳೇ ಕಳೆದಿವೆ. ಧೈರ್ಯವಾಗಿ ಹೊರಗೆ ಬಂದು ದುಡಿಯುತ್ತಾರೆ. ಉತ್ತಮ ಜೀವನ ನಡೆಸುವ ಮಾರ್ಗ ಕಂಡು ಕೊಂಡಿದ್ದಾರೆ. ಆದರೂ, ಕೆಲವೊಂದು ಸಲ ಹೆಣ್ಣು ಮಕ್ಕಳು ಕುಸಿದು ಬಿಡುತ್ತಾರೆ. ಜವಾಬ್ದಾರಿ ಹೆಚ್ಚಾದಾಗಲೋ ಅಥವಾ ಹೆಣ್ಣು ಮಕ್ಕಳು ಜಾಸ್ತಿ ಇದ್ದಾಗಲೋ ಅಥವಾ ಸಮಾಜವನ್ನು ಬೇರೆ ರೀತಿಯಲ್ಲಿ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾದಾಗಲೋ ಇದಕ್ಕೆಲ್ಲ ನಮ್ಮ ಪುಟ್ಟಕ್ಕ ಸ್ಪೂರ್ತಿಯಾಗಿ ನಿಲ್ಲುತ್ತಾರೆ. ಮೂರು ಹೆಣ್ಣು ಮಕ್ಕಳನ್ನು ಹೇಗೆ ಸರಿಯಾದ ಮಾರ್ಗದಲ್ಲಿ ಬೆಳೆಸಬಹುದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.
ಪುಟ್ಟಕ್ಕನ ಸೆಟ್‌ನಲ್ಲಿ ಸೀಮಂತ ಕಾರ್ಯ
ಪುಟ್ಟಕ್ಕನ ಮಕ್ಕಳು ಸೆಟ್‌ನಲ್ಲಿ ಒಂದು ಮಹತ್ಕಾರ್ಯ ನಡೆದಿದೆ. ಪುಟ್ಟಕ್ಕನ ಮಕ್ಕಳು ಸೆಟ್ಟಿನಲ್ಲಿ ಗರ್ಭಿಣಿಗೆ ಸೀಮಂತ ಕಾರ್ಯ ನೆರವೇರಿಸಲಾಗಿದೆ. ಒಂದು ಹೆಣ್ಣು ತಾಯಿಯಾದಾಗಲೇ ಅವಳ ಜನ್ಮ ಪೂರ್ತಿ ಆಗುವುದು ಎಂಬ ಮಾತು ಇದೆ. ಹಾಗೇ ತಾಯ್ತನ ಅನ್ನೋದು ಮರುಜನ್ಮ ಅಂತ ಕೂಡ ಹೇಳಲಾಗುತ್ತದೆ. ಗರ್ಭಿಣಿಯರಿಗೆ ಮಗು ಹುಟ್ಟುವ ಮುನ್ನ ಅವರು ಬಯಸುವ ಖಾದ್ಯಗಳನ್ನು ನೀಡುತ್ತಾರೆ. ಇದೀಗ ಪುಟ್ಟಕ್ಕನ ಮಕ್ಕಳು ಸೆಟ್‌ನಲ್ಲೂ ಸೀಮಂತ ಮಾಡಿ, ಆ ತುಂಬು ಗರ್ಭಿಣಿಗೆ ಇಷ್ಟವಾದ ತಿನಿಸುಗಳನ್ನು ನೀಡಿದ್ದಾರೆ.
ಅಷ್ಟಕ್ಕೂ ಈ ತುಂಬು ಗರ್ಭಿಣಿ ಯಾರು..?
ಮೊದಲಿಗೆ ಈ ವಿಡಿಯೋವನ್ನು ಪುಟ್ಟಕ್ಕ ಅಲಿಯಾಸ್ ಉಮಾಶ್ರೀ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಎಲ್ಲರಿಗೂ ಯಾರು ಈ ಗರ್ಭಿಣಿ ಅಂತ ಕುತೂಹಲವಿತ್ತು. ಇದೀಗ ನಿರ್ದೇಶಕ ಆರೂರು ಜಗದೀಶ್ ವಿಡಿಯೋ ಹಂಚಿಕೊಂಡು ಗರ್ಭಿಣಿ ಬಗ್ಗೆ ಬರೆದಿದ್ದಾರೆ." ಹೆಣ್ಣನ್ನು ನಾವು ಪ್ರಕೃತಿ ಮಾತೆ, ಆದಿಶಕ್ತಿ, ಭೂಮಿ ತಾಯಿಗೆ ಹೋಲಿಸ್ತೀವಿ, ಅಮ್ಮ ,ಅಕ್ಕ, ತಂಗಿ ,ಗೆಳತಿಯಾಗಿ ನೋಡಿರ್ತೀವಿ. ಅದೇ ಹೆಣ್ಣು ಗರ್ಭಿಣಿಯಾಗಿ ,ಅಮೂಲ್ಯವಾದ ಸಣ್ಣ ಸಣ್ಣ ಅನುಭವಗಳನ್ನು ಪಡೆಯುವುದೇ ತಾಯ್ತನದ ಸಾಕ್ಷಾತ್ಕಾರ. ಇನ್ನೊಂದು ಜೀವಕ್ಕೆ ಜೀವ ಕೊಡಲು ಅಮ್ಮನಾಗಿ ಸಿದ್ಧವಾಗಿರುತ್ತಾಳೆ. ಆಕೆಗೆ ಅದು ಮರು ಹುಟ್ಟು ಅಂತೀವಿ, ಅಂತಹ ಅದ್ಭುತ ಸಮಯದಲ್ಲಿರುವ ನಮ್ಮ ಪುಟ್ಟಕ್ಕನ ಇನ್ನೊಂದು ಮಗಳು ನಿಶಿತಾ ಕೆ. ಜೆ. (executive producer ZEE KANNADA) ಈಗ ತುಂಬು ಗರ್ಭಿಣಿ. ಅವರಿಗೆ ಒಳ್ಳೆಯ ರೀತಿಯಲ್ಲಿ ಹೆರಿಗೆಯಾಗಲಿ. ಆರೋಗ್ಯವಂತ ಮಗು ಜನಿಸಲಿ. ಅವರ ಕುಟುಂಬ ಸದಾ ಖುಷಿ ಖುಷಿಯಾಗಿರಲಿ ಎಂದು ಹಾರೈಸುವ ಜೆ ಎಸ್ ಪ್ರೊಡಕ್ಷನ್ ಮತ್ತು ಪುಟ್ಟಕ್ಕನ ಮಕ್ಕಳು ತಂಡ' ಎಂಬ ಮಾಹಿತಿ ತಿಳಿಸಿದ್ದಾರೆ.
ಮಹತ್ಕಾರ್ಯಕ್ಕೆ ಏನಂದ್ರು ಜನ?
ತಂಡ ಅಂದರೆ ಒಂದು ಕುಟುಂಬವಿದ್ದಂತೆ. ಆ ಕುಟುಂಬದ ಸುಖ - ದುಃಖ ಎಲ್ಲವೂ ಹಂಚಿಕೊಳ್ಳಬೇಕು. ಇದೀಗ ಇಡೀ ತಂಡ ಆ ಗರ್ಭಿಣಿ ಅರಸಿ, ಹಾರೈಸಿದ್ದಕ್ಕೆ ನೆಟ್ಟಿಗರು ಸಂತಸಗೊಂಡಿದ್ದಾರೆ. ಸೀಮಂತಕ್ಕೆ ಶಬ್ಬಾಶ್ ಎಂದಿದ್ದಾರೆ. ನೋಡುಗರು ಕೂಡ ತಾಯಿ ಮತ್ತು ಮಗುವಿಗಾಗಿ ಹಾರೈಸಿದ್ದಾರೆ.


Click it and Unblock the Notifications











