Koli Ramya: 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಕೋಳಿ ಹಿಡಿದು ಮಿಂಚಿದ್ದ ರಮ್ಯಾ ಈಗ ತ್ರಿಭಾಷಾ ನಟಿ!
ಕಿರುತೆರೆ ಕಥೆಗಳಲ್ಲಿ ಅಥವಾ ಸಿನಿಮಾದಲ್ಲಿ ನಾಯಕ ನಾಯಕಿಗಿರುವಷ್ಟೇ ಪ್ರಾಮುಖ್ಯತೆ ಖಳನಾಯಕ ಖಳನಾಯಕರಿಗೂ ಇರುತ್ತದೆ. ಅದೆಷ್ಟೋ ಕಲಾವಿದರು ನಾಯಕ-ನಾಯಕಿಯಾಗಿ ನಟಿಸಬೇಕು ಮಿಂಚಬೇಕೆಂಬ ಆಸೆ ಹೊತ್ತು ನಟನ ಕ್ಷೇತ್ರಕ್ಕೆ ಕಾಲಿಟ್ಟು ನಂತರ ವಿಲನ್ ಪಾತ್ರದಲ್ಲೇ ಹೆಚ್ಚು ಫೇಮಸ್ ಆದ ಉದಾಹರಣೆಗಳಿವೆ. ಅಂಥವರಲ್ಲಿ ಒಬ್ಬರಾದ ನಟಿ ರಮ್ಯಾ, ತಮ್ಮ ಖಳನಾಯಕಿ ರೋಲ್‌ಗಳಿಗೆ ಫೇಮಸ್ಸು.
ಯಾವ ರಮ್ಯಾ ಎಂದು ಯೋಚಿಸುತ್ತಿದ್ದೀರಾ? 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ನ ಫೇಮಸ್ ಫಿಗರ್ ಕೋಳಿ ರಮ್ಯಾ. ಮೂಲತಃ ಭದ್ರಾವತಿಯ ಈ ಚೆಲುವೆ ಮೊದಲಿಗೆ "ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು" ರಿಯಾಲಿಟಿ ಶೋನಲ್ಲಿ ಹೆಚ್ಚು ಪಾಪ್ಯುಲಾರಿಟಿ ಪಡೆದು ನಂತರ ಕಿರುತೆರೆಯಲ್ಲಿ ಹಲವಷ್ಟು ಅವಕಾಶಗಳನ್ನು ರೂಪಿಸಿಕೊಂಡರು.

ಅಕುಲ್ ಬಾಲಾಜಿ ಅವರು ನಡೆಸಿಕೊಡುತ್ತಿದ್ದ ಈ ರಿಯಾಲಿಟಿ ಶೋನಲ್ಲಿ ಕೋಳಿಯನ್ನು ತಮ್ಮ ಚಾಣಾಕ್ಷತನದಿಂದ ಹಿಡಿಯುವ ಮೂಲಕ ಭದ್ರಾವತಿಯ ರಮ್ಯ 'ಕೋಳಿ ರಮ್ಯಾ' ಎಂದು ಫೇಮಸ್ ಆದರು. ಅದಾದ ಮೇಲೆ "ಹಳ್ಳಿ ಹೈದ ಪ್ಯಾಟೆಗ್ ಬಂದ" ರಿಯಾಲಿಟಿ ಶೋನಲ್ಲಿ ಬಹಳಷ್ಟು ಬಿಸಿಯಾದ ಈಕೆ ನಿಧಾನಕ್ಕೆ ಕಿರುತೆರೆಗೆ ಕಾಲಿಟ್ಟು ಅದನ್ನೇ ತಮ್ಮ ಕರ್ಮಭೂಮಿ ಮಾಡಿಕೊಂಡಿದ್ದಾರೆ.
ತ್ರಿಭಾಷಾ ತಾರೆಯಾಗಿ ಫೇಮಸ್ಸು!
ಮನೆಯಲ್ಲಿದ್ದ ಆರ್ಥಿಕ ಸಂಕಷ್ಟದಿಂದ ದುಡಿಯುವ ಅನಿವಾರ್ಯತೆ ಇದ್ದ ರಮ್ಯಾ ಅವರು ಭದ್ರಾವತಿಯಿಂದ ಬೆಂಗಳೂರಿಗೆ ಬಂದು ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ತನನಂ ತನನಂ" ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಮೂಲಕ ತಮ್ಮ ಕಲರ್ ಫುಲ್ ಟಿವಿ ಜರ್ನಿಗೆ ಕಾಲಿಟ್ಟರು. ಆಗ ಈಕೆ ಬರಿ 9ನೇ ಕ್ಲಾಸಿನ ಹುಡುಗಿ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊರಬೇಕಾದರೂ ಅದನ್ನು ಅತ್ಯದ್ಭುತವಾಗಿ ನಿಭಾಯಿಸಿದ ಈಕೆ ನಿಧಾನವಾಗಿ 'ಸೊಸೆ ತಂದ ಸೌಭಾಗ್ಯ', 'ಪುಟ್ಟಗೌರಿ ಮದುವೆ' ಇತ್ಯಾದಿ ಧಾರಾವಾಹಿಗಳಲ್ಲಿ ಒಳ್ಳೊಳ್ಳೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಬಂದರು.

ಚಟಪಟ ಮಾತು ಹಾಗೂ ಅದ್ಭುತ ಅಭಿನಯದಿಂದ ತೆಲುಗು, ತಮಿಳು ಇತ್ಯಾದಿ ಕ್ಷೇತ್ರಗಳಲ್ಲಿಯೂ ಅವಕಾಶಗಳು ಬರುತ್ತ ಹೋದವು. ತ್ರಿಭಾಷಾ ಕಿರುತರೆ ನಟಿ ಎಂದೇ ಖ್ಯಾತಿಯನ್ನು ಪಡೆದರು. ತಮಿಳು ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿ ಇದ್ದ ಸಮಯದಲ್ಲೇ ಕನ್ನಡದಿಂದ ಅವಕಾಶ ಬಂದಾಗ ಖುಷಿಯಿಂದ ಒಪ್ಪಿಕೊಂಡು ಕನ್ನಡಕ್ಕೆ ಮರಳಿದ ಈಕೆ 'ಮಿಥುನ ರಾಶಿ' ಧಾರಾವಾಹಿಯಲ್ಲಿ ಕವಿತಾ ಎಂಬ ಖಳನಾಯಕಿಯ ರೋಲ್ ಮಾಡಿ ಬಹಳಷ್ಟು ಪ್ರಖ್ಯಾತಿ ಪಡೆದರು.
ಸಿನಿಮಾದಲ್ಲಿ ನಟಿಸುವ ಬಯಕೆ
ಅಸಲಿಗೆ ಮಗಳು ಕನ್ನಡದಲ್ಲಿಯೇ ಹೆಚ್ಚು ನಟಿಸಬೇಕೆಂಬುದು ತಾಯಿ ಅಭಿಲಾಷೆಯಾಗಿತ್ತಂತೆ. ಹಾಗಾಗಿ ಮಿಥುನರಾಶಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂದಾಗ ಕಣ್ಣು ಮುಚ್ಚಿ ಅಸ್ತು ಎಂದರು. ಕಿರುತೆರೆಯಲ್ಲೇ ಬಹಳ ಕಂಫರ್ಟೆಬಲ್ ಆಗಿದ್ದ ನಟಿ ರಮ್ಯಾ ಅಲಿಯಾಸ್ ಕೋಳಿ ರಮ್ಯಾ ಅವರು ಸಿನಿಮಾದಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಅಭಿನಯಿಸುತ್ತಾರಂತೆ.
ಇನ್ನು 'ಮಿಥುನ ರಾಶಿ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ರಮ್ಯಾ ಮತ್ತ್ಯಾವಾಗ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











