'ಬಿಗ್ ಬಾಸ್' ಮನೆಯಲ್ಲಿಯೇ ಮದುವೆ, ಫಸ್ಟ್ ನೈಟ್ -ಆ ನಂತರ ವಿಚ್ಛೇದನ ; ಹಿಂದೂ ನಟನ ಜೊತೆ 2ನೇ ಮದುವೆಯಾದ ಮುಸ್ಲಿಂ ನಟಿ
''ಬಿಗ್ ಬಾಸ್'' ಭಾರತದ ಜನಪ್ರಿಯ ಕಾರ್ಯಕ್ರಮದಲ್ಲೊಂದು. ಅದರಲ್ಲಿ ದೂಸ್ರಾ ಮಾತಿಲ್ಲ. ನಿಜಾ. ಈ ಕಾರ್ಯಕ್ರಮದ ಬಗ್ಗೆ ಸಾರ್ವತ್ರಿಕ ವಲಯದಲ್ಲಿ ಅಸಮಾಧಾನ ಅಸಹನೆಯ ಅಲೆ ಮೊದಲಿಂದ ಇದ್ದೇ ಇದೆ. ಆದರೂ ಕೂಡ ಬಹುದೊಡ್ಡ ವರ್ಗ ಈ ಕಾರ್ಯಕ್ರಮವನ್ನು ನೋಡುತ್ತಲೇ ಬೈಯುತ್ತಾರೆ. ಬೈಯುತ್ತಲೇ ನೋಡುತ್ತಾರೆ. ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಕೆಲ ಒಮ್ಮೆ ಕೆಲವೊಂದು ಸಾರಿ ವಿಧಿಯಿಲ್ಲದೆ ನೋಡುವ ಸಂದರ್ಭ ಒದಗಿ ಬಿಡುತ್ತೆ.
ಆಗ ಈ ದೊಡ್ಡಮನೆಯ ಸಣ್ಣ ಸಂಗತಿಗಳು ಸಮಾಜಕ್ಕೆ ಎಂತಹ ಮೆಸೇಜ್ ಕೊಡುತ್ತಿದೆ ಎಂಬುದನ್ನು ಗಮನಿಸಿ ಅತೀವ ಮುಜುಗರವೂ ಕೂಡ ಆಗುತ್ತದೆ. ಎಲ್ಲಿಗೆ ಬಂತು ನಮ್ಮ ಸಮಾಜ ಎಂಬ ಪ್ರಶ್ನೆ ಕೂಡ ಕಾಡಲು ಶುರುವಾಗುತ್ತೆ. ಹಿಂದಿಯ ''ಬಿಗ್ ಬಾಸ್'' ಸೀಸನ್ ನಾಲ್ಕು ನೋಡಿದಾಗ ಕೂಡ ದಶಕದ ಹಿಂದೆ ಹಲವರಲ್ಲಿ ಇಂಥಹದ್ದೇ ಅಭಿಪ್ರಾಯ ಮನೆ ಮಾಡಿತ್ತು.

ಯಾಕೆಂದರೆ .. ಆ ಕಾಲದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ಸೆಳೆಯಲು ಮನೆಗೆ ಸ್ಫರ್ಧಿಗಳಾಗಿ ಬಂದ ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್ ಅವರ ಮದುವೆಯನ್ನು ಮಾಡಿಸಲಾಗಿತ್ತು. ಇಷ್ಟೇ ಅಲ್ಲ. ಮದುವೆ ನಂತರ ಇಬ್ಬರ ಮೊದಲ ರಾತ್ರಿಗೆ ಕೂಡ ಇದೇ ಬಿಗ್ ಬಾಸ್ ಮನೆ ವೇದಿಕೆಯಾಗಿತ್ತು. ಇಬ್ಬರ ಮಿಲನಕ್ಕೆ ಸೀಕ್ರೆಟ್ ರೂಮ್‌ನ ಸಿಂಗಾರ ಮಾಡಲಾಗಿತ್ತು.
ಆ ಕಾಲದಲ್ಲಿ ಈ ಕಾರ್ಯಕ್ರಮ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಮತ್ತೂ ಕೆಲವರಿಗೆ ಮಜಾ ನೀಡಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಈ ಸಂಪೂರ್ಣ ಸಂಚಿಕೆಗೆ ಅತೀ ಹೆಚ್ಚು ಟಿ.ಆರ್.ಪಿ. ಕೂಡ ಆಗ ಬಂದಿತ್ತು.
ಆದರೆ.. ದುರಾದೃಷ್ಟ.. ಟಿಆರ್‌ಪಿಗೆ ಸರಕಾದ ಈ ಮದುವೆ ಹೆಚ್ಚಿನ ದಿನ ಉಳಿಯಲಿಲ್ಲ. ''ಬಿಗ್ ಬಾಸ್'' ಮುಕ್ತಾಯವಾದ ಕೇವಲ ಎರಡೇ ತಿಂಗಳಿನಲ್ಲಿ ಈ ಸಂಬಂಧ ಮುರಿದು ಬಿತ್ತು. ಸಾರಾ ಖಾನ್ ಮತ್ತು ಅಲಿ ಮರ್ಚೆಂಟ್ ಅವರ ವಿಚ್ಛೇದನ ಕೂಡ ಆಯ್ತು.
ತಮ್ಮ ಮದುವೆ ಮುರಿದು ಬಿದ್ದ ನಂತರ ನನಗೆ ಮೋಸವಾಗಿದೆ.. ನನ್ನ ಮದುವೆ ನನ್ನ ಪಾಲಿನ ಬಹುದೊಡ್ಡ ದುಸ್ವಪ್ನ ಎಂದೆಲ್ಲಾ ಬಿಕ್ಕಿದ್ದರು ಸಾರಾ ಖಾನ್. ಅಲಿ ಮರ್ಚೆಂಟ್ ಕೂಡ ನಾನು ಸಾರಾ ಖಾನ್ ಅವರನ್ನು ''ಬಿಗ್ ಬಾಸ್'' ಮನೆಯಲ್ಲಿ ಮದುವೆಯಾಗಿದ್ದು ಕೇವಲ ಪ್ರಚಾರಕ್ಕೆ ಮಾತ್ರ ಎಂದು ಹೇಳಿದ್ದರು.

ಇದೀಗ ಇದೆಲ್ಲವೂ ಆಗಿ ಒಂದೂವರೆ ದಶಕದ ನಂತರ ಸಾರಾ ಖಾನ್ ಮತ್ತೊಂದು ಮದುವೆಯಾಗಿದ್ದಾರೆ. ಧರ್ಮಕ್ಕಿಂತ ಪ್ರೀತಿ ದೊಡ್ಡದು ಎಂದು ಹಿಂದೂ ಧರ್ಮದ ಚೆಲುವ ''ಯೇ ಜುಕಿ ಜುಕಿ ಸಿ ನಜರ್'' ಖ್ಯಾತಿಯ ನಟ ಮತ್ತು ನಿರ್ಮಾಪಕ ಕ್ರಿಶ್ ಪಾಠಕ್ ಅವರನ್ನು ಮದುವೆಯಾಗಿದ್ದಾರೆ. ಸದ್ದಿಲ್ಲದೇ ಸರಳವಾಗಿ ರಿಜಿಸ್ಟರ್ ಮದುವೆಯನ್ನು ಮಾಡಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್‌ಪ್ರೈಸ್ ನೀಡಿದ್ದಾರೆ.
ತಮ್ಮ ಮದುವೆಯ ಕುರಿತು ''ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಾರಾ ಖಾನ್ ಮದುವೆಯ ದಿನ (ಅಕ್ಟೋಬರ್ 6 ) ತುಂಬಾ ರೋಮಾಂಚನಗೊಂಡಿದ್ದೇ. ನನ್ನ ಹೊಟ್ಟೆಯಲ್ಲಿ ಚಿಟ್ಟೆಗಳು ಹಾರಾಡುತ್ತಿದ್ದವು ಎಂದು ಹೇಳಿದ್ದಾರೆ. ತಾಳ್ಮೆಯಿಂದ ಕಾದಾಗ ನಿಮ್ಮ ಬದುಕಿನಲ್ಲಿ ಸರಿಯಾದ ವ್ಯಕ್ತಿ ಬರುತ್ತಾನೆ ಎನ್ನುವುದು ನನ್ನ ಜೀವನದಲ್ಲಿ ಸಾಬೀತಾಗಿದೆ ಎಂದು ಹೇಳಿರುವ ಸಾರಾ ಖಾನ್ ನಾನು ಬಯಸಿದ ಸಂಗಾತಿ ಕ್ರಿಶ್ ಪಾಠಕ್ ಎಂದು ಹೇಳಿದ್ದಾರೆ.

ಇನ್ನುಳಿದಂತೆ ಕ್ರಿಶ್ ಪಾಠಕ್ ಮತ್ತು ಸಾರಾ ಖಾನ್ ನಡುವೆ ನಾಲ್ಕು ವರ್ಷಗಳ ವಯಸ್ಸಿನ ಅಂತರ ಇದೆ. ಸಾರಾ ಖಾನ್‌ಗೆ ಈಗ 36 ವರ್ಷವಾದರೆ ಕ್ರಿಶ್ ಪಾಠಕ್‌ಗೆ ಈಗ 32ರ ಹರೆಯ. ಅಂದ್ಹಾಗೇ ಕ್ರಿಶ್ ಪಾಠಕ್ ಅವರನ್ನು ಮದುವೆಯಾದ ಸಾರಾ ಖಾನ್ ಹಿಂದಿ ಕಿರುತೆರೆಯ ಪ್ರಖ್ಯಾತ ಹೆಸರು. ''ಲೈಫ್ ಓಕೆ''.. ''ಜುನೂನ್- ಐಸಿ ನಪ್‌ರಥ್ ತೋ ಕೈಸಾ ಇಷ್ಕ್''.. ''ಸಸುರಾಲ್ ಸಿಮರ್ ಕಾ''.. ಹೀಗೆ ಹಲವು ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವ ಸಾರಾಗೆ ''ಸಪ್ನಾ ಬಾಬುಲ್ ಕಾ.. ಬಿದಾಯಿ'' ಧಾರಾವಾಹಿ ಭಾರೀ ಜನಪ್ರಿಯತೆಯನ್ನು ತಂದು ಕೊಟ್ಟಿತ್ತು.
ಇಂಥಾ ಸಾರಾ ಖಾನ್ ಸದ್ಯ ಕ್ರಿಶ್ ಪಾಠಕ್ ಅವರ ಜೊತೆ ಮದುವೆಯಾಗಿದ್ದು ಇಬ್ಬರಿಗೆ ಹಲವರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಮತ್ತೊಂದು ಕಡೆ ಸಾರಾ ಖಾನ್ ಅವರನ್ನು ಮದುವೆಯಾಗಿದ್ದ ಅಲಿ ಮರ್ಚೆಂಟ್ ಆ ನಂತರ ಮತ್ತೆ ಎರಡು ಮದುವೆಯಾಗಿ ಅವರಿಗೂ ಕೂಡ ವಿಚ್ಚೇದನ ನೀಡಿ ಸದ್ಯ ಏಕಾಂಗಿಯಾಗಿದ್ದಾರೆ.


Click it and Unblock the Notifications











