'ಅಮೃತಧಾರೆ' ಧಾರಾವಾಹಿಯ ಈ ವಿಲನ್ ಸುಧಾರಾಣಿ ಜೊತೆ ಬಾಲ ನಟನಾಗಿ ನಟಿಸಿದ್ರು ಅನ್ನೋದು ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅಮೃತಧಾರೆ' ಧಾರಾವಾಹಿಯೂ ಕೂಡಾ ಒಂದು. ವಿಭಿನ್ನ ಕಥಾಹಂದರದ ಜೊತೆಗೆ ಪ್ರತಿಯೊಂದು ಪಾತ್ರದ ಮೂಲಕವೂ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ. 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕ ಗೌತಮ್ ದಿವಾನ್ ಹಾಗೂ ನಾಯಕಿ ಭೂಮಿಕಾ ಪಾತ್ರಕ್ಕೆ ಇರುವಷ್ಟು ಪ್ರಾಮುಖ್ಯತೆ ಪ್ರತಿಯೊಂದು ಪಾತ್ರಕ್ಕೆ ಇರುವುದೇ ಈ ಧಾರಾವಾಹಿಯ ಮಗದೊಂದು ವಿಶೇಷ.
ಇನ್ನು ನೆಗೆಟಿವ್ ರೋಲ್‌ನ ವಿಚಾರ ಬಂದರೆ ಅಲ್ಲೂ ಕೂಡಾ ಅಷ್ಟೇ. ಬೇರೆ ಧಾರಾವಾಹಿಗಳ ಹಾಗೇ ಬರೀ ಒಂದೇ ವಿಲನ್ ಅಲ್ಲ, ಬದಲಿಗೆ ಮೂರು ಜನ ವಿಲನ್‌ಗಳು ಈ ಧಾರಾವಾಹಿಯಲ್ಲಿ ಇದ್ದಾರೆ. ಹೌದು, ಗೌತಮ್ ದಿವಾನ್ ಚಿಕ್ಕಮ್ಮ ವನಿತಾವಾಸು ಒಂದೆಡೆಯಾದರೆ, ಇನ್ನೊಂದು ಕಡೆ ಆಕೆಯ ಅಣ್ಣ ಆಕೆ ಮಾಡುವ ಕುತಂತ್ರಿ ಕೆಲಸಗಳಿಗೆ ಆಕೆಗೆ ಸಾಥ್ ನೀಡುತ್ತಿರುತ್ತಾನೆ. ಮಾತ್ರವಲ್ಲದೇ ಮನೆಹಾಳು ಐಡಿಯಾಗಳಿಂದ ತನ್ನ ತಂಗಿ ಶಕುಂತಲಾಳನ್ನು ಬೆಂಬಲಿಸುತ್ತಾನೆ.

ಇವರಿಬ್ಬರ ಹೊರತಾಗಿ ಮತ್ತೊಂದು ಗಮನ ಸೆಳೆಯುವ ಪಾತ್ರವೆಂದರೆ ಅದು ಜೈದೇವ್ ಪಾತ್ರ. ಶಕುಂತಲಾ ಮಗ ಜೈದೇವ್ ತನ್ನ ಅಮ್ಮನಂತೆ ಕುತಂತ್ರಿ, ಅಣ್ಣನ ಆಸ್ತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧ. ಈ ಜೈದೇವ್ ಮನೆ ಕೆಲಸದಾಕೆ ಮಲ್ಲಿಯನ್ನು ಪ್ರೀತಿಸುವಂತೆ ನಟಿಸಿದ ಜೈದೇವ್ ಆಕೆಯನ್ನು ಕೆಡಿಸುತ್ತಾನೆ. ನಂತರ ಭೂಮಿಕಾ ತಂಗಿ ಅಪೇಕ್ಷಾಗೆ ಕಣ್ಣು ಹಾಕುತ್ತಾನೆ. ತನ್ನ ತಮ್ಮ ಪಾರ್ಥ ಅಪೇಕ್ಷಾಳನ್ನು ಇಷ್ಟಪಡುತ್ತಿದ್ದಾನೆ ಎಂದು ತಿಳಿದ ಜೈದೇವ್ ಅಮ್ಮನ ಮನವೊಲಿಸಿ ಆಕೆಯನ್ನು ಮದುವೆಯಾಗಲು ತಯಾರಿ ಮಾಡುತ್ತಾನೆ.
ಆ ಸಮಯದಲ್ಲಿ ಮಲ್ಲಿ ಗರ್ಭಿಣಿ ಎನ್ನುವ ವಿಚಾರ ತಿಳಿದು, ಬೇರೆ ದಾರಿ ಕಾಣದೆ ಆಕೆಯನ್ನು ಮದುವೆಯಾಗಬೇಕಾಗುತ್ತದೆ. ಇದೀಗ ಒಳ್ಳೆಯವಂತೆ ನಟಿಸುವ ಈತ ಎಲ್ಲರಿಗೂ ಮೋಸ ಮಾಡುತ್ತಿರುತ್ತಾನೆ. ಒಟ್ಟಿನಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ, ಅತ್ಯದ್ಭುತವಾಗಿ ಜೈ ದೇವ್ ಪಾತ್ರಕ್ಕೆ ಜೀವ ತುಂಬುತ್ತಿರುವ ಹ್ಯಾಂಡ್ ಸಮ್ ಹುಡುಗನ ಹೆಸರು ರಾಣವ್ ಗೌಡ.

ಜೈದೇವ್ ಆಗಿ ನಟಿಸಿ ಕಿರುತೆರೆ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ರಾಣವ್ ಅವರ ನಟನೆಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ತುಳಸಿ ಧಾರಾವಾಹಿಯಲ್ಲಿ ಬಾಲ ನಟನಾಗಿ ಕಾಣಿಸಿಕೊಳ್ಳುವ ಮೂಲಕ ನಟನೆಗೆ ಕಾಲಿಟ್ಟ ರಾಣವ್ ಮೊದಲ ಧಾರಾವಾಹಿಯಲ್ಲಿ ಸ್ಯಾಂಡಲ್‌ವುಡ್ ಚೆಲುವೆ ಸುಧಾರಾಣಿ ಅವರೊಂದಿಗೆ ಅಭಿನಯಿಸಿದ್ದರು.
'ಅರಮನೆ' ಧಾರಾವಾಹಿಯಲ್ಲಿ ನಾಯಕನ ಫ್ರೆಂಡ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಕಿರುತೆರೆಗೆ ಮರಳಿದ ರಾಣವ್ ಗೌಡ ಮುಂದೆ 'ಜೀವನದಿ', 'ರಾಜಕುಮಾರಿ', 'ವರಲಕ್ಷ್ಮಿ ಸ್ಟೋರ್ಸ್', 'ಮತ್ತೆ ವಸಂತ', 'ಕಮಲಿ' ಹಾಗೂ 'ಕನ್ಯಾದಾನ' ಧಾರಾವಾಹಿಯಲ್ಲಿಯೂ ನಟಿಸಿದ್ದರು. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ರಾಣವ್ ಗೌಡ 'ಶ್ರೀಕಂಠ', 'ಮತ್ತೆ ಬಾ ಉಪೇಂದ್ರ', 'ವಿರಾಟ್' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











