ರಚಿತಾ ರಾಮ್‌ಗೆ ನೀವೇ ಅದೃಷ್ಟವಂತರು ಎಂದು ಹೇಳಿದ್ದೇಕೆ ದರ್ಶನ್ ? ವೇದಿಕೆಯಲ್ಲಿ ಗಾಡ್‌ಫಾದರ್‌ಗೆ ನಮಸ್ಕರಿಸಿದ ರಚ್ಚು..!
ಧಾರಾವಾಹಿ ಪ್ರಪಂಚದಲ್ಲಿ ಸಣ್ಣಗೆ ಸದ್ದು ಮಾಡುತ್ತಲೇ ಏಕಾಏಕಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗುವ ಮೂಲಕ ಅಚ್ಚರಿಗೆ ಕಾರಣವಾಗಿದ್ದವರು ರಚಿತಾ ರಾಮ್. ಅಲ್ಲಿಂದಾಚೆ ಕಮರ್ಷಿಯಲ್ ಪಥದಲ್ಲಿಯೇ ಮುಂದುವರೆಯುತ್ತಾ ಬಂದ ರಚಿತಾ ರಾಮ್, ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿದ್ದಾರೆ.
ದರ್ಶನ್ ಸೇರಿ ಡಾ.ಪುನೀತ್ ರಾಜ್ ಕುಮಾರ್, ಡಾ.ಶಿವರಾಜ್ ಕುಮಾರ್, ಸುದೀಪ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್ ಹೀಗೆ ಕನ್ನಡದ ಬಹುತೇಕ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಈ ಹತ್ತು ವರ್ಷಗಳ ಪ್ರಯಾಣದಲ್ಲಿ ಹಲವು ಏರಿಳಿತವನ್ನು ಕೂಡ ಕಂಡಿದ್ದಾರೆ. ಆದರೂ ಕೂಡ ರಚಿತಾ ರಾಮ್ ಅವರನ್ನು ಜನ ಪ್ರೀತಿಯಿಂದ ಇವತ್ತು ಕೂಡ ಬುಲ್ ಬುಲ್ ಎಂದೇ ಕರೆಯುತ್ತಾರೆ. ವಿಶೇಷ ಅಂದರೆ ಚಿತ್ರ ಬಂದು ಹೋಗಿ ಇಷ್ಟು ವರ್ಷಗಳಾದರೂ ಕೂಡ ರಚಿತಾ ರಾಮ್‌ಗೆ ಹೀಗೆ ಕರೆದಾಗೆಲ್ಲ ಖುಷಿಯಾಗುತ್ತೆ. ಖುದ್ದು ರಚಿತಾ ರಾಮ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಹೌದು, ಭರ್ಜರಿ ಬ್ಯಾಚುಲರ್ಸ್ 2 ವೇದಿಕೆಯಲ್ಲಿ ರಕ್ಷಕ್ ಬುಲೆಟ್ ಮತ್ತು ರಮೋಲಾ, ದರ್ಶನ್ ಮತ್ತು ರಚಿತಾ ಪಾತ್ರಗಳಿಗೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಈ ಸಮಯದಲ್ಲಿ ಇಬ್ಬರ ಪರ್ಫಾಮೆನ್ಸ್ ನೋಡಿ ರಚಿತಾ ರಾಮ್ ತಮ್ಮ ಆ ಗತಕಾಲದ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ರಕ್ಷಕ್ ಬುಲೆಟ್ ಮತ್ತು ರಮೋಲಾ ಅಭಿನಯ ಕಂಡು ಚಪ್ಪಾಳೆ ಹೊಡೆದಿದ್ದಾರೆ. ಸಿನಿಮಾ ನೋಡಿದಂಗಾಯ್ತು ಎಂದು ಹೇಳುತ್ತಾ ತಮ್ಮ ಮೊದಲ ಸಿನಿಮಾ ಕುರಿತು ಮಾತನಾಡಿದ್ಧಾರೆ.
ಸಾಮಾನ್ಯವಾಗಿ ದರ್ಶನ್ ಸರ್ ಚಿತ್ರದ ಶೀರ್ಷಿಕೆಗಳು ಹೀರೋ ಕೇಂದ್ರಿತ ಹೆಸರುಗಳಾಗಿರುತ್ತಾವೆ ಆದರೆ ಅದೇ ಮೊದಲ ಬಾರಿ ದರ್ಶನ್ ಸರ್ ಅವರ ಚಿತ್ರಕ್ಕೆ ನಾಯಕಿಯ ಪಾತ್ರದ ಕುರಿತು ಟೈಟಲ್ ಇಡಲಾಗಿತ್ತು. ಹೀಗಾಗಿ ಎಂತಹ ಅದೃಷ್ಟವಂತೆ ನೋಡಿ ನೀವು ಎಂದು ದರ್ಶನ್ ಸರ್ ನನಗೆ ಹೇಳುತ್ತಿದ್ದರು ಎಂದಿರುವ ರಚಿತಾ ರಾಮ್, ನನಗೆ ಬುಲ್ ಬುಲ್ ಎಂದು ಕರೆದರೆ ಅವತ್ತು ಖುಷಿಯಾಗುತ್ತಿತ್ತು ಇವತ್ತು ಕೂಡ ಖುಷಿಯಾಗುತ್ತೆ ನನ್ನ ಉಸಿರು ಇರುವವರೆಗೂ ನನ್ನ ಬುಲ್ ಬುಲ್ ಅಂತ ಕರೆದರೆ ಖುಷಿ ನನಗೆ ಎಂದು ಹೇಳಿದ್ದಾರೆ.
ಮುಂದುವರೆದು ಅವಕಾಶ ನೀಡಿದ ದರ್ಶನ್ ಅವರಿಗೆ, ಬುಲ್ ಬುಲ್ ತಂಡಕ್ಕೆ ಇಷ್ಟೇ ಯಾಕೆ ದರ್ಶನ್ ಅವರ ಅಭಿಮಾನಿಗಳಿಗೆ ಕೂಡ ಧನ್ಯವಾದ ಹೇಳಿರುವ ರಚಿತಾ ರಾಮ್ ನಾನು ಇವರಿಗೆಲ್ಲ ಸದಾ ಚಿರಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಲ್ಲಿಯೇ ವೇದಿಕೆ ಮೇಲೆಯೇ ತಮ್ಮ ಗಾಡ್ ಫಾದರ್ ದರ್ಶನ್ ಅವರಿಗೆ ಬಗ್ಗಿ ನಮಸ್ಕಾರವನ್ನು ಮಾಡಿದ್ದಾರೆ. ಬುಲ್ ಬುಲ್ ದಿನಗಳನ್ನು ನೆನೆಯುತ್ತಾ ಭಾವುಕರಾಗಿದ್ದಾರೆ.
ಇನ್ನುಳಿದಂತೆ ರಚಿತಾ ರಾಮ್ ಅಭಿನಯದ ಸಂಜು ವೆಡ್ಸ್ ಗೀತಾ 2 ಚಿತ್ರ ಈ ವರ್ಷ ತೆರೆಗೆ ಬಂದಿದೆ. ಈ ಚಿತ್ರ ಬಂದಿದ್ದು ಹೋಗಿದ್ದು ಗೊತ್ತಾಗಲಿಲ್ಲ ಅನ್ನುವುದು ಬೇರೆ ವಿಚಾರ. ಈ ಚಿತ್ರವನ್ನು ಹೊರತು ಪಡಿಸಿದರೆ ರಚಿತಾ ರಾಮ್ ಸದ್ಯ ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಬರೋಬ್ಬರಿ ಒಂದು ಕೋಟಿ ಸಂಭಾವನೆಯನ್ನು ರಚಿತಾ ರಾಮ್ ಪಡೆದಿದ್ದಾರೆ ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತೆ. ಅಯೋಗ್ಯ 2 ಚಿತ್ರಕ್ಕೂ ಕೂಡ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಮತ್ತೊಮ್ಮೆ ನೀನಾಸಂ ಸತೀಶ್ ಅವರ ಜೊತೆ ಮನರಂಜನೆಯ ರಸದೌತಣ ಬಡಿಸಲು ಸಿದ್ಧರಾಗಿದ್ಧಾರೆ.


Click it and Unblock the Notifications











