'ಶಾಂತಿ ನಿವಾಸ' ಧಾರಾವಾಹಿಯಿಂದ ಮತ್ತೆ ಕಿರುತೆರೆಗೆ ಮರಳಿದ ಡಿಂಪಲ್ ಕ್ವೀನ್ ಸಹೋದರಿ ನಿತ್ಯಾ ರಾಮ್
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಂದಿನಿ' ಧಾರಾವಾಹಿಯಲ್ಲಿ ನಂದಿನಿ ಹಾಗೂ ಜನನಿ ಎನ್ನುವ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಬೆಡಗಿ ಹೆಸರು ನಿತ್ಯಾ ರಾಮ್. ತದ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ನಿತ್ಯಾ ರಾಮ್ ಪರಭಾಷೆಯ ಕಿರುತೆರೆಯಲ್ಲಿ ಅಭಿನಯಿಸಿದ್ದರು. ಬರೋಬ್ಬರಿ ಐದು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಮರಳಿರುವ ನಿತ್ಯಾ ರಾಮ್ ಶಾಂತಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ.
ಹೌದು, ಉದಯ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ಶಾಂತಿನಿವಾಸ'ದಲ್ಲಿ ನಾಯಕಿ ಶಾಂತಿಯಾಗಿ ನಟಿ ನಿತ್ಯಾ ರಾಮ್ ನಟಿಸಲಿದ್ದಾರೆ. ಅಶಾಂತಿ ತುಂಬಿದ ಮನಸುಗಳ ಮಧ್ಯೆ ಪ್ರೀತಿಯ ಜ್ಯೋತಿ ಹಿಡಿದು ಪ್ರಜ್ವಲಿಸಲು ಬರುತ್ತಿದ್ದಾಳೆ ಶಾಂತಿ. 'ಶಾಂತಿ ನಿವಾಸ' ಧಾರಾವಾಹಿ ಸದ್ಯದಲ್ಲಿಯೇ ಆರಂಭವಾಗಲಿದ್ದು, ಪ್ರೋಮೋ ಕೂಡಾ ಸಾಕಷ್ಟು ಸದ್ದು ಮಾಡಿದೆ. ಜೊತೆಗೆ ತಮ್ಮ ನೆಚ್ಚಿನ ನಟಿಯನ್ನು ಮಗದೊಮ್ಮೆ ತೆರೆ ಮೇಲೆ ನೋಡಲು ಕಿರುತೆರೆ ವೀಕ್ಷಕರು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.

ಬಯೋ ಟೆಕ್ನಾಲಜಿ ಪದವಿ ಪಡೆದಿರುವ ನಿತ್ಯಾ ರಾಮ್‌ಗೆ ನಟಿಯಾಗುವ ಬಯಕೆಯಿತ್ತು. 'ಬೆಂಕಿಯಲ್ಲಿ ಅರಳಿದ ಹೂವು' ಧಾರಾವಾಹಿಯ ಮಲ್ಲಿಯಾಗಿ ಕಿರುತೆರೆಗೆ ಕಾಲಿಟ್ಟ ನಿತ್ಯಾ ರಾಮ್ ಅಭಿನಯಿಸಿದ್ದು ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಆದರೂ ನಟನೆಯ ಮೂಲಕ ಮೋಡಿ ಮಾಡಿದ ಚೆಲುವೆ.
ಮುಂದೆ 'ಕರ್ಪೂರದ ಗೊಂಬೆ'ಯ ಶ್ರಾವಣಿ, 'ರಾಜಕುಮಾರಿ' ಧಾರಾವಾಹಿಯ ರಾಜಕುಮಾರಿ, 'ಎರಡು ಕನಸು', ಹಾಗೂ ಪೌರಾಣಿಕ ಧಾರಾವಾಹಿ 'ಗಿರಿಜಾ ಕಲ್ಯಾಣ' ಧಾರಾವಾಹಿಯ ಪಾರ್ವತಿಯಾಗಿ ಮೋಡಿ ಮಾಡಿದ ನಿತ್ಯಾ ರಾಮ್ ತಮಿಳಿನ 'ಅವಳ್' ಧಾರಾವಾಹಿಯಲ್ಲಿ ಶಾಲಿನಿ ಆಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಗೆ ಕಾಲಿಟ್ಟರು.
ನಂತರ ತೆಲುಗಿನ 'ಮುದ್ದು ಬಿಡ್ಡ' ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಿತ್ಯಾ ರಾಮ್ ಅದರಲ್ಲಿ ಗೀತಾ ಮತ್ತು ಸಂಗೀತಾ ಎನ್ನುವ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಅಮ್ಮ ನಾ ಕೊಡಲ'ದಲ್ಲಿ ಅಭಿನಯಿಸಿದ್ದಾರೆ. ತಮಿಳಿನ 'ನಂದಿನಿ' ಧಾರಾವಾಹಿಯಲ್ಲಿಯೂ ನಾಯಕಿಯಾಗಿ ನಟಿಸುವ ಅವಕಾಶ ಪಡೆದುಕೊಂಡಿರುವ ನಿತ್ಯಾ ರಾಮ್ ನಂದಿನಿ ಮತ್ತು ಗಂಗಾ ಎನ್ನುವ ದ್ವಿಪಾತ್ರದಲ್ಲಿ ಮಿಂಚಿದರು.

ತಮಿಳಿನ 'ಲಕ್ಷ್ಮಿ ಸ್ಟೋರ್ಸ್'ನಲ್ಲಿ ಡಿಸಿ ನಿತ್ಯಾ ಪಾತ್ರಕ್ಕೆ ಈಕೆ ಜೀವ ತುಂಬಿದ್ದು ಅತಿಥಿ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಇದರ ಜೊತೆಗೆ 'ಅಣ್ಣ' ಎನ್ನುವ ಧಾರಾವಾಹಿಯಲ್ಲಿ ಭೈರವಿ ಷಣ್ಮುಗಂ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈಕೆ ಕನ್ನಡದ 'ಸವಾಲಿಗೆ ಸೈ' ಹಾಗೂ ತಮಿಳಿನ 'ಸವಾಲೇ ಸಮಾಲಿ' ಶೋಗಳ ನಿರೂಪಕಿಯಾಗಿ ಗಮನ ಸೆಳೆದಿದ್ದರು.
'ಕಿಲಾಡಿ ಕಿಡ್ಸ್' ಶೋ ಜಡ್ಜ್ ಆಗಿದ್ದ ಈಕೆ 'ಅಸತ್ತಲ್ ಚುಟ್ಟೀಸ್' ಹಾಗೂ 'ಮಸಾಲ ಕೆಫೆ'ಯ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇನ್ನು 'ಮುದ್ದು ಮನಸೇ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಈಕೆ ನಟಸಿದ್ದು ಒಂದೇ ಸಿನಿಮಾದಲ್ಲಿ. ಮಲಯಾಳಂನ ಸಿನಿಮಾದಲ್ಲಿ ನಟಿಸಿರುವ ಈಕೆ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಶಾಂತಿಯಾಗಿ ಕಿರುತೆರೆಗೆ ಮರಳಲಿರುವ ನಿತ್ಯಾ ರಾಮ್ ವೀಕ್ಷಕರ ಮನ ಸೆಳೆಯುತ್ತಾರಾ ಎಂದು ನೋಡಬೇಕಾಗಿದೆ.


Click it and Unblock the Notifications











