ಅಂದುಕೊಂಡ್ಹಂಗೆ ಆಯ್ತು: ಬಾತ್ ರೂಮ್ ನಿಂದ 'ರಾಣಿ' ವಾಪಸ್ ಬಂದ್ಬಿಟ್ಳು.!
''ಇಷ್ಟು ಬೇಗ 'ರಾಧಾ ರಮಣ' ಧಾರಾವಾಹಿಯ ಖತರ್ನಾಕ್ ಲೇಡಿ ಸಿತಾರ ದೇವಿ ಸಿಕ್ಕಿಬೀಳಲ್ಲ. ಇನ್ನೂ 'ಅವನಿ' ಹೆಸರಿನಲ್ಲಿ ರಮಣ್ ಮನೆಗೆ ಬಂದಿರುವ ರಾಣಿ ಬಣ್ಣ ಬಯಲಾಗಲ್ಲ ಎಂಬ ಸತ್ಯ ವೀಕ್ಷಕರಿಗೆ ಗೊತ್ತಿತ್ತು.
'ರಾಧಾ ರಮಣ' ನಿರ್ದೇಶಕರಿಗೆ ವೀಕ್ಷಕರ ನಾಡಿಮಿಡಿತ ಗೊತ್ತಿದ್ಯೋ, ಇಲ್ವೋ... ಆದ್ರೆ, 'ರಾಧಾ ರಮಣ' ನಿರ್ದೇಶಕರ ಬುದ್ಧಿವಂತಿಕೆಯ ಪರಿಚಯ ಮಾತ್ರ ವೀಕ್ಷಕರಿಗೆ ಇದೆ.
ಇನ್ನೇನು ಸಿತಾರ ಸಿಕ್ಕಿಬಿದ್ಲು ಎನ್ನುವಷ್ಟರಲ್ಲಿ ಪವಾಡ ಸೃಷ್ಟಿಸುವಷ್ಟು 'ಚಾಲಾಕಿ' ಈ 'ರಾಧಾ ರಮಣ' ನಿರ್ದೇಶಕರು. ಹೇಳಿಕೊಳ್ಳೋಕೆ ರಮಣ್ ದೊಡ್ಡ ಬಿಸಿನೆಸ್ ಮ್ಯಾನ್. ಆದ್ರೆ, ಅವರ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಮಾತ್ರ ಇಲ್ಲ. ಹಾಗಿದಿದ್ರೆ, ಧಾರಾವಾಹಿ ಇಷ್ಟೊಂದು ಮುಂದುವರೆಯುತ್ತಿತ್ತಾ, ಯೋಚನೆ ಮಾಡಿ...

ಡ್ಯೂಪ್ಲಿಕೇಟ್ ಅವನಿ ಅಲಿಯಾಸ್ ರಾಣಿ ಆಡುತ್ತಿರುವ ಆಟ ನೋಡಿದ್ರೆ, ಯಾರಿಗಾದರೂ ಅನುಮಾನ ಬರಲೇ ಬೇಕು. ಆದ್ರೆ, ನಿರ್ದೇಶಕರ ಬುದ್ಧಿವಂತಿಕೆ ಸಾಬೀತು ಮಾಡಲು ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಗಳೆಲ್ಲಾ 'ದಡ್ಡ'ರಂತೆ ಕಾಣ್ತಿದ್ದಾರೆ.!
ನಿನ್ನೆ ಪ್ರಸಾರವಾದ ಸಂಚಿಕೆಯನ್ನೇ ತೆಗೆದುಕೊಳ್ಳಿ.. ಡ್ಯೂಪ್ಲಿಕೇಟ್ ಅವನಿ 'ರಾಣಿ' ಮನೆಯಿಂದ ಹೊರಗೆ ಹೋಗಿದ್ದನ್ನ ರಾಧಾ ನೋಡಿದ್ದಾರೆ. ರಾಣಿಯನ್ನ ಫಾಲೋ ಕೂಡ ಮಾಡಿದ್ದಾರೆ. ಸಿತಾರ ದೇವಿ ಆಜ್ಞೆ ಮೇರೆಗೆ ಮನೆಗೆ ವಾಪಸ್ ಬಂದ ರಾಧಾಗೆ ಅಚ್ಚರಿ ಕಾದಿರುತ್ತೆ. ಯಾಕಂದ್ರೆ, ಹೊರಗೆ ಹೋಗಿದ್ದ ರಾಣಿ ಬಾತ್ ರೂಮ್ ನಿಂದ ರೂಮ್ ಒಳಗೆ ಪ್ರತ್ಯಕ್ಷ ಆಗ್ತಾಳೆ.
ಇದು ಹೇಗೆ ಸಾಧ್ಯ ಅಂತ ಕನಿಷ್ಟ ಬಾತ್ ರೂಮ್ ಒಳಗೆ ಹೋಗಿ ಚೆಕ್ ಮಾಡುವಷ್ಟು ಬುದ್ಧಿ ರಾಧಾಗೆ ನಿರ್ದೇಶಕರು ಕೊಟ್ಟಿಲ್ಲ. ಇನ್ನೂ ರಮಣ್... 'ಅವನಿ' ಬಗ್ಗೆ ಏನೇ ಹೇಳಿದರೂ ಆತನಿಗೆ ಡೌಟ್ ಬರಲ್ಲ. ಇಂತಹ ಪಾತ್ರಧಾರಿಗಳ ನಡುವೆ 'ಹುಲಿ ಬಂತು ಹುಲಿ...' ಎಂಬಂತೆ ಪ್ರತಿದಿನ ಲಾಜಿಕ್ ಇಲ್ಲದ ಟ್ವಿಸ್ಟ್ ಗಳಿಂದ ಧಾರಾವಾಹಿ ಓಡುತ್ತಿದೆ.
ಈ ನಡುವೆ ಇಡೀ ಧಾರಾವಾಹಿಯಲ್ಲಿ ತಲೆ ಓಡಿಸೋದು ದೀಪಿಕಾ ಮಾತ್ರ.. ಇದೇ ದೀಪಿಕಾ ಇದೀಗ ರಾಣಿಯನ್ನ ಮನೆಯಿಂದ ಹೊರಗೆ ಹಾಕಲು ಮಾದನ ಜೊತೆ ಕೈಜೋಡಿಸಿದ್ದಾಳೆ. ಇವರಿಬ್ಬರ ಆಟವನ್ನ ಇನ್ನೆಷ್ಟು ದಿನ ನೋಡಿ ಸಹಿಸಿಕೊಳ್ಳಬೇಕೋ...'' - ನೊಂದ ವೀಕ್ಷಕ


Click it and Unblock the Notifications











