'ಚುಕ್ಕಿತಾರೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ ಈ ನಟಿ ಬಗ್ಗೆ ನಿಮಗೆ ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಚುಕ್ಕಿತಾರೆ' ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಮುದ್ದು ಮಕ್ಕಳಾದ ಚುಕ್ಕಿ ಹಾಗೂ ಇಬ್ಬನಿಯ ನಟನೆಯಂತೂ ಕಿರುತೆರೆ ವೀಕ್ಷಕರಿಗೆ ತುಂಬಾ ಖುಷಿ ನೀಡಿದೆ. 'ಚುಕ್ಕಿತಾರೆ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದ ಹೊರತಾಗಿ ಗಮನ ಸೆಳೆಯುವ ಪಾತ್ರವೆಂದರೆ ಮೇನಕಾ.
ಹೌದು, ಇಬ್ಬನಿಯ ಅತ್ತೆ ಮೇನಕಾ ಪಾತ್ರ ಕೊಂಚ ವಿಭಿನ್ನ ಎಂದು ಹೇಳಿದರೆ ತಪ್ಪಾಗಲಾರದು. ಯಾಕೆಂದರೆ, ಎದುರಿಗೆ ಪಾಸಿಟಿವ್ ಛಾಯೆಯನ್ನು ಹೊಂದಿರುವ ಈ ಪಾತ್ರ ನೆಗೆಟಿವ್ ಶೇಡ್ ಕೂಡ ಹೌದು! ಅಸಲಿಗೆ ಅದು ನೆಗೆಟಿವ್ ಪಾತ್ರ ಎಂಬುದು ಕೇವಲ ಕಿರುತೆರೆ ವೀಕ್ಷಕರಿಗೆ ಗೊತ್ತೇ ಹೊರತು ಇನ್ನು ಆಕೆಯ ಮನೆಯವರ ಮುಂದೆ ಅದು ಬಹಿರಂಗವಾಗಲೇ ಇಲ್ಲ.

ಅಂದ ಹಾಗೇ ಮೇನಕಾ ಆಗಿ ನಟಿಸುತ್ತಿರುವ ಈಕೆಯ ಹೆಸರು ರಾಧಿಕಾ ಶ್ರವಂತ್. ಒಂದು ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಸದ್ದು ಮಾಡಿದ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಖಳನಾಯಕಿ ಸೌಂದರ್ಯ ಆಗಿ ರಾಧಿಕಾ ನಟಿಸಿದ್ದರು. ಮುಂದೆ ಕಾರಣಾಂತರಗಳಿಂದ ಆ ಧಾರಾವಾಹಿಯಿಂದ ಹೊರಬಂದ ರಾಧಿಕಾ ಬರೋಬ್ಬರಿ ಎರಡು ವರ್ಷಗಳ ಕಾಲ ಬ್ರೇಕ್ ಪಡೆದುಕೊಂಡಿದ್ದರು.
ಗರ್ಭಿಣಿಯಾಗಿದ್ದ ಕಾರಣ ಸೌಂದರ್ಯ ಪಾತ್ರಕ್ಕೆ ವಿದಾಯ ರಾಧಿಕಾ ಹೇಳಬೇಕಾಯಿತು. ಸೌಂದರ್ಯಳಂತಹ ಪಾತ್ರ ಸಿಕ್ಕಿದರೆ ಮತ್ತೊಮ್ಮೆ ಕಿರುತೆರೆಗೆ ಮರಳಲು ಸಿದ್ಧ ಎಂದು ಈ ಹಿಂದೆ ರಾಧಿಕಾ ಹೇಳಿಕೊಂಡಿದ್ದರು. ಅದರಂತೆ ಮೇನಕಾ ಪಾತ್ರ ಆಕೆಗೆ ಸಿಕ್ಕಿದ್ದು ಅದರಲ್ಲಿ ಮತ್ತೊಮ್ಮೆ ಖಳನಾಯಕಿ ಆಗಿ ನಟಿಸುವ ಅವಕಾಶವನ್ನು ಕೂಡಾ ಈಕೆ ಪಡೆದುಕೊಂಡಿದ್ದಾರೆ.

"ಮೇನಕಾ ಪಾತ್ರ ಸಂಪೂರ್ಣ ನೆಗೆಟಿವ್ ಪಾತ್ರ ಹೌದು. ಆದರೆ ತೆರೆಯ ಮೇಲೆ ಅದನ್ನು ಪಾಸಿಟಿವ್ ಪಾತ್ರ ಎಂಬಂತೆ ತೋರಿಸುತ್ತಿದ್ದಾರೆ. ಮನೆಯಲ್ಲಿ ಎಲ್ಲರೊಂದಿಗೂ ಮೇನಕಾ ತುಂಬಾ ಚೆನ್ನಾಗಿರುತ್ತಾಳೆ. ಮೇನಕಾ ಮಗ ಈಗ ಇಲ್ಲ. ಮೇನಕಾ ಪ್ರಕಾರ ಆಕೆಯ ಮಗ ತೀರಿಕೊಂಡು ಬಿಟ್ಟಿದ್ದಾನೆ. ಅದಕ್ಕೆ ಮನೆಯವರೇ ಕಾರಣ ಎಂದು ಮನೆಯವರ ಮೇಲೆ ಸೇಡು ತೀರಿಸಿಕೊಳ್ಳಬೇಕು ಅಂದುಕೊಂಡಿದ್ದಾಳೆ. ಹೇಗಾದರೂ ಮಾಡಿ ಈ ಮನೆಯನ್ನು ಸರ್ವನಾಶ ಮಾಡಬೇಕು ಎಂಬುದೇ ಮೇನಕಾ ಪ್ಲಾನ್" ಎಂದು ಮೇನಕಾ ಪಾತ್ರದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡುತ್ತಾ ರಾಧಿಕಾ ಶ್ರವಂತ್ ಹಂಚಿಕೊಂಡಿದ್ದಾರೆ.
"ಸೌಂದರ್ಯ ಪಾತ್ರದ ನಂತರ ನಾನು ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಒಂದು ಉತ್ತಮ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗಬೇಕು ಎಂದು ನಾನು ಬಯಸಿದ್ದೆ. ಸೌಂದರ್ಯಳಂತಹ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಕಾಲಿಡಲು ನಾನು ಯೋಚಿಸುತ್ತಿದ್ದೆ. ಅದೇ ಸಮಯದಲ್ಲಿ ಮೇನಕಾ ಪಾತ್ರ ದೊರಕಿತು. ಖುಷಿಯಿಂದಲೇ ಒಪ್ಪಿಕೊಂಡೆ" ಎಂದು ಕಿರುತೆರೆಗೆ ತಾವು ಕಂ ಬ್ಯಾಕ್ ಆಗಿದ್ದರ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಹಂಚಿಕೊಂಡಿದ್ದಾರೆ ರಾಧಿಕಾ ಶ್ರವಂತ್.
ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಎರಡು ಕನಸು' ಧಾರಾವಾಹಿಯ ಮೂಲಕ ನಟನೆಗೆ ಕಾಲಿಟ್ಟರು ರಾಧಿಕಾ ಶ್ರವಂತ್. ನಂತರ 'ಅಳಗುಳಿಮನೆ', 'ರಾಧಾ ಕಲ್ಯಾಣ', 'ಖುಷಿ ಕಣಜ', 'ಕಾದಂಬರಿ', 'ಮುಂಗಾರುಮಳೆ', 'ಪುಟ್ಮಲ್ಲಿ', 'ಆತ್ಮಬಂಧನ', 'ಅರಮನೆ ಗಿಳಿ', 'ಮಂಗಳಗೌರಿಮದುವೆ' ಧಾರಾವಾಹಿಗಳಲ್ಲಿ ರಾಧಿಕಾ ಶ್ರವಂತ್ ಅಭಿನಯಿಸಿದ್ದರು.


Click it and Unblock the Notifications











