ತಾರೆಯರ ಗಾಸಿಪ್ ಗಳಿಗೆ ರಿಷಿಕಾ 'ರಗಳೆ' ವೇದಿಕೆ

'ರಗಳೆ ವಿಥ್ ರಿಷಿಕಾ' ಹೆಸರಿನ ಈ 'ಟಾಕ್ ಷೋ' ಇದೇ ಸೆಪ್ಟೆಂಬರ್ 8 ರಿಂದ ಪ್ರತಿ ಶನಿವಾರ ಹಾಗೂ ಭಾನುವಾರಗಳಂದು ರಾತ್ರಿ 8 ರಿಂದ 9 ರವರೆಗೆ ಪ್ರಸಾರವಾಗಲಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಟಿ ರಿಷಿಕಾ ಸಿಂಗ್ "ನಾನು ಹುಟ್ಟಿದಾಗಿನಿಂದಲೂ ಚಿತ್ರರಂಗದ ನಂಟಿನಲ್ಲೇ ಬೆಳೆದವಳು. ಎಲ್ಲಾ ಕಲಾವಿದರನ್ನು ತುಂಬಾ ಹತ್ತಿರದಿಂದ ಕಂಡವಳು. ಹೀಗಾಗಿ ಗಾಸಿಪ್ ಗಳಿಗೆ ಆಹಾರವಾದ ಕೆಲ ಕಲಾವಿದರನ್ನು ನನ್ನ ಟಾಕ್ ಷೋನಲ್ಲಿ ಕರೆಸಿ ಅವರ ಜೊತೆ ಕೆಲ ಹೊತ್ತು ಹರಟೆ, ಮಾತುಕತೆ ನಡೆಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ.
ಅವರ ಮನದಲ್ಲಿ ಏನಿದೆ, ಅವರು ವೀಕ್ಷಕರಿಗೆ ಏನನ್ನು ಹೇಳಬಯಸುತ್ತಾರೆ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ನಿರೂಪಿಸುವ ಪ್ರಯತ್ನ. ಇಂಥದ್ದೊಂದು ಯೋಚನೆ ನನ್ನ ತಲೆಯಲ್ಲಿ ಬಂದಕೂಡಲೇ ಜೀ ಟಿವಿ ತರುಣ್ ಅವರಿಗೆ ತಿಳಿಸಿದೆ. ಅವರು ಅದನ್ನು ಟಾಕ್ ಶೋ ರೂಪದಲ್ಲಿ ತರಲು ಒಪ್ಪಿದರು. ನಾನು ನಿರೂಪಕಿ ಖಂಡಿತ ಅಲ್ಲ. ಜಸ್ಟ್ ಟಾಕ್ ವಿಥ್ ಆರ್ಟಿಸ್ಟ್ ಅಷ್ಟೆ. 'ರೀಲ್'ನಲ್ಲಿ ನಮ್ಮ ತಾರೆಯರ 'ರಿಯಲ್' ರೂಪವನ್ನು ತೆರೆದಿಡುವ ಒಂದು ಪ್ರಯತ್ನ ಈ ಟಾಕ್ ಷೋ" ಎಂದಿದ್ದಾರೆ.
ನನ್ನ ಹೆಸರಿನ ಜೊತೆಗೇ 'ರಗಳೆ' ಎಂಬ ಪದ ಮೊದಲಿಂದಲೂ ಅಂಟಿಕೊಂಡು ಬಿಟ್ಟಿದೆ. ಹಾಗಾಗಿ ಇದೇ ಟೈಟಲ್ ಸೂಕ್ತ ಎಂದು ನಾನೇ ಸೂಚಿಸಿದೆ. ಅಲ್ಲದೆ ಇದರಲ್ಲಿ ಸ್ಕ್ರಿಪ್ಟ್ ಮಾಡಿಕೊಂಡು ಮಾತನಾಡುವುದು ಕಷ್ಟ. ಲೋಕಾಭಿರಾಮವಾಗಿ ಗೆಳಯ-ಗೆಳತಿಯರ ಜೊತೆ ಒಂದಷ್ಟು ವಿಷಯಗಳನ್ನು ಹರಟುತ್ತೇನೆ, ಕೆದಕುತ್ತೇನೆ ಎಂದು ರಿಷಿಕಾ ಶೀರ್ಷಿಕೆ ಹಾಗೂ ಸ್ಕ್ರಿಪ್ಟ್ ಬಗ್ಗೆ ಹೇಳಿದ್ದಾರೆ.
ಕಾರ್ಯಕ್ರಮದ ನಿರ್ದೇಶಕ ತರುಣ್ ಮಾತನಾಡಿ "ಮೊದಲು ಈ ಕಾರ್ಯಕ್ರಮಕ್ಕೆ 'ಕಾಫಿ ವಿಥ್ ರಿಷಿಕಾ' ಎಂದು ಶೀರ್ಷಿಕೆ ಇಡಬೇಕು ಎಂದುಕೊಂಡಿದ್ದೆವು. ನಂತರ ರಿಷಿಕಾ ಅವರೇ ರಗಳೆ ಟೈಟಲ್ ಸೂಚಿಸಿದರು. ಈಗಾಗಲೇ 2-3 ಸಂಚಿಕೆಗಳನ್ನು ಚಿತ್ರೀಕರಿಸಿದ್ದೇವೆ. ರಿಷಿಕಾ ತುಂಬಾ ಪ್ರಿಪೇರ್ ಆಗಿದ್ದಾರೆ. ಅವರು ಕಲಾವಿದರಿಗೆ ಯಾವುದೇ ಪ್ರಶ್ನೆ ಕೇಳಿದರೂ ಬೇಸರ ಪಟ್ಟುಕೊಳ್ಳದೆ ಉತ್ತರಿಸಿದ್ದಾರೆ" ಎಂದಿದ್ದಾರೆ. ವೀಕ್ಷಕರಿಗೆ ವೀಕೆಂಡಲ್ಲಿ ವಿನೂತನ ಕಾರ್ಯಕ್ರಮವಾಗಿ ಇದು ಶನಿವಾರ ಹಾಗೂ ಭಾನುವಾರ ರಾತ್ರಿ 8 ರಿಂದ 9 ಗಂಟೆಗೆ ಮೂಡಿಬರಲಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











