ರಾಘಣ್ಣನ ಮೊದಲ ಸಿನಿಮಾ ಸೋಲು, ಅಂದು ರಾಜ್ ಹೇಳಿದ್ದೇನು?
ರಾಘವೇಂದ್ರ ರಾಜ್ ಕುಮಾರ್ ಡಾಕ್ಟರ್ ಆಗ್ಬೇಕು ಎಂಬ ಅಸೆ ರಾಜ್ ಕುಟುಂಬಕ್ಕಿತ್ತು. ಆದ್ರೆ, ಓದಿನಲ್ಲಿ ಹೆಚ್ಚು ಆಸ್ತಕಿ ನೀಡದ ರಾಘಣ್ಣ ನಾನು ಆಕ್ಟರ್ ಆಗ್ತೀನಿ ಎಂದು ನಿರ್ಧರಿಸಿದರು. ಈ ವಿಷ್ಯವನ್ನ ಶಿವಣ್ಣನ ಬಳಿ ಹೇಳಿಕೊಂಡ ರಾಘಣ್ಣ ನಂತರ ತಾಯಿ ಬಳಿಯೂ ಹೇಳಿದ್ರು.
ಪಾರ್ವತಮ್ಮ ಅವರ ಕಡೆಯಿಂದ ಅಣ್ಣಾವ್ರ ಕಿವಿಗೆ ಈ ವಿಷ್ಯ ಬಿತ್ತು. ಆಗ ರಾಘವೇಂದ್ರ ಅವರನ್ನ ಕರೆದು ಮಾತನಾಡಿದ ರಾಜ್ ಕುಮಾರ್ ''ಯಾಕಪ್ಪಾ ಕಂದಾ ಓದಲ್ವಾ'' ಎಂದು ಕೇಳಿದ್ರು. ಅದಕ್ಕೆ ಉತ್ತರಿಸಿದ ರಾಘಣ್ಣ ''ಇಲ್ಲಾ ಅಪ್ಪಾಜಿ ನನ್ನಿಂದ ಓದಲು ಆಗಲ್ಲ, ನಾನು ಸಿನಿಮಾದಲ್ಲಿ ನಟಿಸ್ತೀನಿ'' ಅಂದ್ರಂತೆ.
'ಸರಿ ಆಯ್ತು ಮಾಡು' ಎಂದು ಆಶೀರ್ವಾದ ಮಾಡಿದ ನಂತರ ಶುರುವಾದ ಚೊಚ್ಚಲ ಚಿತ್ರವೇ 'ಚಿರಂಜೀವಿ ಸುಧಾಕರ'. ಆದ್ರೆ, ಈ ಸಿನಿಮಾ ಗೆಲ್ಲಲ್ಲಿ. ನಿರೀಕ್ಷೆಯನ್ನ ಕೂಡ ತಲುಪಲಿಲ್ಲ. ಆಗ ರಾಜ್ ಕುಮಾರ್ ಏನಂದ್ರು? ಮುಂದೆ ಓದಿ.....

ಸಿನಿಮಾ ಆರಂಭದಲ್ಲೇ ಭಯ ಇತ್ತು
ಚಿರಂಜೀವಿ ಸುಧಾಕರ ಸಿನಿಮಾ ಆರಂಭ ಮಾಡಿದ ದಿನವೇ ರಾಘಣ್ಣ ಮತ್ತು ರಾಜ್ ಕುಮಾರ್ ಇಬ್ಬರಿಗೂ ಭಯವಿತ್ತಂತೆ. ಮುಹೂರ್ತ ದಿನ ಭಯವನ್ನ ಅಣ್ಣಾವ್ರು ಹೇಳಿಕೊಂಡಿದ್ದರಂತೆ. ನಂತರ ಮಗನಿಗೆ ಧೈರ್ಯ ತುಂಬಿ ಸಿನಿಮಾ ಮಾಡಿಸಿದರಂತೆ. ಮೊದಲ ದೃಶ್ಯದಲ್ಲಿ ಡೈಲಾಗ್ ಇರಲಿಲ್ಲ. ಬರಿ ಎಕ್ಸ್ ಪ್ರೆಶನ್ ಮೂಲಕ ಟೇಕ್ ಓಕೆ ಆಯ್ತಂತೆ. ನಿರ್ದೇಶಕ ಸಿಂಗಿತಂ ಶ್ರೀನಿವಾಸ್ ಕೂಡ ಮೆಚ್ಚಿಕೊಂಡು ''ಈತ ನಿಲ್ತಾನೆ'' ಎಂದಿದ್ದರಂತೆ.

ಭಾರಿ ಹಿನ್ನೆಡೆ ಆದ ಸಂದರ್ಭ ಅದು
ಚಿರಂಜೀವಿ ಸುಧಾಕರ ಗೆಲ್ಲಲಿಲ್ಲ. ಮೆಡಿಕಲ್ ಮಾಡಬೇಕು ಅಂದುಕೊಂಡ ಆಗಲಿಲ್ಲ. ಸಿನಿಮಾ ಮಾಡಬೇಕು ಅಂದುಕೊಂಡು ಮಾಡಿದ, ಅದು ಯಶಸ್ಸು ಕೊಡಲಿಲ್ಲ. ಮದುವೆನೂ ಆಗಿದೆ. ಬೇಜಾರಾಗಿದ್ದಾನೆ ಎಂದು ತಿಳಿದು ರಾಜ್ ಕುಮಾರ್, ರಾಘಣ್ಣನಿಗೆ ಧೈರ್ಯ ತುಂಬಿದ್ದರಂತೆ.

ಸಿನಿಮಾ ಸೋತ ಬಳಿಕ ಅಣ್ಣಾವ್ರು ಹೇಳಿದ್ದೇನು?
ಆ ದಿನ ರಾಘಣ್ಣನ ಕೋಣೆಗೆ ಹೋದ ರಾಜ್ ಕುಮಾರ್ ''ಬೀಜ ಬಿತ್ತಿದ ದಿನ ಹಣ್ಣು ತಿನ್ನಲು ಸಾಧ್ಯವಿಲ್ಲ. ಈಗ ಬೀಜ ಬಿತ್ತಿದ್ದಿಯಾ. ಅದು ಮರವಾಗಿ ಬೆಳೆದು ಹಣ್ಣು ಕೊಡುತ್ತೆ. ಯೋಚನೆ ಮಾಡಬೇಡ. ನಿನ್ನ ಕೈ ಬಿಡಲ್ಲ. ನಿನ್ನ ಹೆಸರು ರಾಘವೇಂದ್ರ. ನನ್ನನ್ನು ಕೈಬಿಡದ ರಾಘವೇಂದ್ರ ನಿನ್ನನ್ನು ಬಿಡಲ್ಲ'' ಎಂದು ಸ್ಫೂರ್ತಿದಾಯಕ ಮಾತು ಹೇಳಿ ಇನ್ನೊಂದು ಸಿನಿಮಾ ಮಾಡಲು ನಿರ್ಧರಿಸಿದರು.

ಆಗಲೇ ಆಗಿದ್ದು ನಂಜುಂಡಿ ಕಲ್ಯಾಣ
ಮೊದಲ ಸಿನಿಮಾ ಸೋಲಿನ ಬಳಿಕ ಏನಾದರೂ ಮಾಡಬೇಕು ಅಲ್ವಾ ಎಂದು ನಿರ್ಧರಿಸಿ, ಚರ್ಚೆ ಮಾಡಿ ಆರಂಭಿಸಿದ್ದೇ ನಂಜುಂಡಿ ಕಲ್ಯಾಣ ಸಿನಿಮಾ. ಇದು ರಾಘವೇಂದ್ರ ರಾಜ್ ಕುಮಾರ್ ಗೆ ಬಹುದೊಡ್ಡ ಸಕ್ಸಸ್ ಕೊಟ್ಟ ಚಿತ್ರ. ಮಾಲಾಶ್ರೀ ಕನ್ನಡದಲ್ಲಿ ಅಭಿನಯಿಸಿದ ಚೊಚ್ಚಲ ಸಿನಿಮಾ ಇದು. ಸ್ವತಃ ಪಾರ್ವತಮ್ಮ ಅವರೇ ಈ ಚಿತ್ರ ನಿರ್ಮಾಣ ಮಾಡಿದರು. ನಂತರ ಗಜಪತಿ ಗರ್ವಭಂಗ, ಆಸೆಗೊಬ್ಬ ಮೀಸೆಗೊಬ್ಬ, ಅನುಕೂಲಕ್ಕೊಬ್ಬ ಗಂಡ ಹೀಗೆ ಸಾಲು ಸಾಲು ಸಿನಿಮಾ ಮಾಡಿದರು.


Click it and Unblock the Notifications











